ಚಿತ್ರದುರ್ಗ,(ಸೆಪ್ಟೆಂಬರ್ 06) : ಜಿಲ್ಲೆಯಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ 5 ಮನೆಗಳು ಸಂಪೂರ್ಣ ಹಾನಿಗೊಳಗಾಗಿದ್ದು, 32 ಮನೆಗಳು ತೀವ್ರತರವಾಗಿ ಹಾನಿಗೊಳಗಾಗಿವೆ. ಹಾನಿಗೊಳಗಾದ ಮನೆಗಳಿಗೆ ಈಗಾಗಲೇ ರೂ.2.70 ಕೋಟಿ ಪರಿಹಾರ ನೀಡಲಾಗಿದೆ ಎಂದು ಕೃಷಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ಪಾಟೀಲ್ ಹೇಳಿದರು.
ಹಿರಿಯೂರು ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಹೆಚ್ಚಾಗಿ ಹಿರಿಯೂರು ತಾಲ್ಲೂಕಿನ ಮಳೆಯಾಗಿದೆ. ಇದುವರೆಗೂ ಯಾವುದೇ ಜೀವಹಾನಿಯಾಗಿರುವುದಿಲ್ಲ. ನಾಲ್ಕು ಚಿಕ್ಕ ಜಾನುವಾರು ಹಾಗೂ ನಾಲ್ಕು ದೊಡ್ಡ ಜಾನುವಾರುಗಳಿಗೆ ಜೀವಹಾನಿಯಾಗಿದೆ. ಈ ಸಂಬಂಧ ಈಗಾಗಲೇ ಪರಿಹಾರ ನೀಡಲಾಗಿದೆ ಎಂದರು.
ಹಿರಿಯೂರು ತಾಲ್ಲೂಕಿನ ವಿವಿ ಸಾಗರ ಜಲಾಶಯವು 88 ವರ್ಷಗಳ ನಂತರ ಗರಿಷ್ಟ ಮಟ್ಟ ತಲುಪಿದೆ. ಹಿರಿಯೂರು ನಗರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಈ ಪ್ರದೇಶದ ಜನರಿಗಾಗಿ ಗಂಜಿ ಕೇಂದ್ರ ಪ್ರಾರಂಭ ಮಾಡಿ ಆಶ್ರಯ ನೀಡಲಾಗಿದೆ ಎಂದರು.
ಹಿರಿಯೂರು ನಗರದಲ್ಲಿ ಮನೆಗಳು ಹಾನಿಗೊಳಗಾಗಿವೆ ಎಂದು ಶಾಸಕರು ತಿಳಿಸಿದ್ದು, ಕೂಡಲೇ ಸರ್ವೇ ಮಾಡಲು ಸೂಚನೆ ನೀಡಲಾಗಿದೆ ಎಂದರು.
ಜಿಲ್ಲೆಯಲ್ಲಿ 50,136 ಹೆಕ್ಟೇರ್ ಭೂಮಿ ಬೆಳೆ ಪ್ರದೇಶ ನಾಶವಾಗಿದೆ. ಈಗಾಗಲೇ ಜಂಟಿ ಸರ್ವೇ ಮುಕ್ತಾಯವಾಗಿದ್ದು, ಪರಿಹಾರ ಫೋರ್ಟಲ್ ಗೆ ಇನ್ನೂ ಎರಡು ದಿನದಲ್ಲಿ ನೊಂದಣಿ ಮಾಡಿ ಇದೇ ಸಪ್ಟೆಂಬರ್ 12 ರೊಳಗೆ ಪರಿಹಾರವನ್ನು ಡಿಬಿಟಿ ಮೂಲಕ ಬಿಡುಗಡೆ ಮಾಡಲು ಕ್ರಮವಹಿಸಲಾಗುವುದು ಎಂದರು.
ಕೇಂದ್ರ ಭೇಟಿ ಇಂದು: ಕೇಂದ್ರ ಸರ್ಕಾರದ ಎನ್ ಡಿ ಆರ್ ಸಂಬಂಧವಾಗಿ ಕೇಂದ್ರ ತಂಡ ಚಿತ್ರದುರ್ಗ ಜಿಲ್ಲೆಗೆ ಸೆ.07 ರಂದು ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎಂದು ಸಚಿವರು ತಿಳಿಸಿದರು.
ಮಳೆ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಅಧಿಕಾರಿಗಳು ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಕಾಳಜಿ ಕೇಂದ್ರ ತೆರೆದು ಯಾವುದೇ ಪ್ರಾಣ ಹಾನಿಯಾಗದಂತೆ ಕ್ರಮವಹಿಸಲಾಗಿದೆ. ನದಿ ದಡದ ಪ್ರದೇಶದಲ್ಲಿ ವಾಸಿಸುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಶಿಫ್ಟ್ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯೂರು ಶಾಸಕಿ ಪೂರ್ಣಿಮಾ ಕೆ.ಶ್ರೀನಿವಾಸ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ಪಿ. ರಮೇಶ್ ಕುಮಾರ್, ಹಿರಿಯೂರು ತಹಶೀಲ್ದಾರ್ ಪ್ರಶಾಂತ್ ಕೆ. ಪಾಟೀಲ ಸೇರಿದಂತೆ ಕೃಷಿ ಇಲಾಖೆ ಅಧಿಕಾರಿಗಳು ಇದ್ದರು.