ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ. ದಕ್ಷಿಣ ಕಾಶ್ಮೀರದ ಪುಷ್ಕರಿ ಕನಿಲ್ವಾನ್ ಗ್ರಾಮದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಹಿಜ್ಬುಲ್ ಭಯೋತ್ಪಾದಕರನ್ನು ಕೊಲ್ಲಲಾಯಿತು.
ಅನಂತ್‌ನಾಗ್ ಜಿಲ್ಲೆಯ ಪುಷ್ಕರಿ ಕನಿಲ್ವಾನ್ ಪ್ರದೇಶದಲ್ಲಿ ಭಯೋತ್ಪಾದಕರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಈ ಹಿಂದೆ ಕಾರ್ಯಾಚರಣೆ ಆರಂಭಿಸಿದ್ದವು.
ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದ ನಂತರ ಶೋಧ ಕಾರ್ಯಾಚರಣೆಯು ಎನ್‌ಕೌಂಟರ್‌ಗೆ ತಿರುಗಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗುಂಡಿನ ಕಾಳಗದಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ, ಇವರಿಬ್ಬರು ನಿಷೇಧಿತ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್‌ನೊಂದಿಗೆ ಸಂಬಂಧ ಹೊಂದಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
“ಕೊಲ್ಲಲ್ಪಟ್ಟ ಭಯೋತ್ಪಾದಕರನ್ನು ಡ್ಯಾನಿಶ್ ಭಟ್ @ ಕೊಕಾಬ್ ದುರೀ ಮತ್ತು ಬಶರತ್ ನಬಿ ಎಂದು ಗುರುತಿಸಲಾಗಿದೆ. ಇಬ್ಬರೂ ನಿಷೇಧಿತ ಭಯೋತ್ಪಾದಕ ಸಂಘಟನೆ HM ನೊಂದಿಗೆ ಸಂಯೋಜಿತರಾಗಿದ್ದಾರೆ. ಇಬ್ಬರೂ 9 ಏಪ್ರಿಲ್ 2021 ರಂದು ಒಬ್ಬ TA ಯೋಧ ಸಲೀಂನನ್ನು ಕೊಂದಿದ್ದರು ಮತ್ತು 29 ಮೇ 2021 ರಂದು ಜಬ್ಲಿಪೋರಾದಲ್ಲಿ ಇಬ್ಬರು ನಾಗರಿಕರನ್ನು ಕೊಂದಿದ್ದರು,” ಎಂದು ಕಾಶ್ಮೀರ ವಲಯದ ಡಿಜಿಪಿ ವಿಜಯ್ ಕುಮಾರ್ ಟ್ವೀಟ್ ಮಾಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರವು ಈ ವರ್ಷ ಸುಮಾರು 94 ಎನ್‌ಕೌಂಟರ್‌ಗಳಿಗೆ ಸಾಕ್ಷಿಯಾಗಿದೆ, ಇದರ ಪರಿಣಾಮವಾಗಿ 150 ಭಯೋತ್ಪಾದಕರು ಹತರಾಗಿದ್ದಾರೆ. ಹತರಾದ ಉಗ್ರರಲ್ಲಿ 38 ಮಂದಿ ಪಾಕಿಸ್ತಾನಿ ಪ್ರಜೆಗಳು. ಈ ವರ್ಷ ವಿವಿಧ ಭಯೋತ್ಪಾದನೆ ಸಂಬಂಧಿತ ಘಟನೆಗಳಲ್ಲಿ 21 ನಾಗರಿಕರು ಸಾವನ್ನಪ್ಪಿದ್ದರೆ, ಭದ್ರತಾ ಪಡೆಗಳು ವಿವಿಧ ದಾಳಿಗಳು ಮತ್ತು ಎನ್‌ಕೌಂಟರ್‌ಗಳಲ್ಲಿ 20 ಸೈನಿಕರನ್ನು ಕಳೆದುಕೊಂಡಿವೆ.