ಬೆಂಗಳೂರು: ಸಿದ್ದರಾಮಯ್ಯ ಅವರು ಇಂಧನ ಸಚಿವರನ್ನು ಟ್ಯಾಗ್ ಮಾಡಿ, ವಿದ್ಯುತ್ ದರದ ಬಗ್ಗೆ, ಯುನಿಟ್ ಬಗ್ಗೆ ಪ್ರಶ್ನೆ ಮಾಡಿದ್ದರು. ಇದೀಗ ಆ ಟ್ವೀಟ್ ಗೆ ಇಂಧನ ಸಚಿವ ಸುನೀಲ್ ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಮಾನ್ಯ ಸಿದ್ದರಾಮಯ್ಯ ಅವರೇ, “ಅಜ್ಞಾನದ ಕತ್ತಲೆಯಿಂದ ಜ್ಞಾನದ ಬೆಳಕಿನೆಡೆಗೆ ನೀವು ಸಮಾಜವನ್ನು ಕೊಂಡೊಯ್ಯುವುದು ಯಾವಾಗ ? ಪರಿಶಿಷ್ಟ ಜಾತಿ ಹಾಗೂ ಪಂಗಡದ ಬಿಪಿಎಲ್ ಕುಟುಂಬಗಳಿಗೆ ಉಚಿತವಾಗಿ ೭೫ ಯುನಿಟ್ ವಿದ್ಯುತ್ ನೀಡುವ ಆದೇಶವನ್ನು ವಾಪಾಸ್ ಪಡೆಯಲಾಗಿದೆ ಎಂದು ಸುಳ್ಳು ಪ್ರಚಾರ ಮಾಡಿ ನೀವು ಸಾಧಿಸುವ ಸಾಮಾಜಿಕ ನ್ಯಾಯವಾದರೂ ಏನು ?.
ನೀವು ಸುದೀರ್ಘ ಅವಧಿಗೆ ಸರಕಾರ ನಡೆಸಿದವರು. ಮುಖ್ಯಮಂತ್ರಿಯಾಗಿಯೂ ಅಧಿಕಾರ ಚಲಾಯಿಸಿದ್ದೀರಿ.
ಆದರೆ ಒಂದು ಸುತ್ತೋಲೆ ವಾಪಾಸ್ ಪಡೆಯುವ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂಬ ಕನಿಷ್ಠ ಜ್ಞಾನವೂ ನಿಮಗಿಲ್ಲವೇ ?.
ಹಿಂದಿನ ಆದೇಶ ವಾಪಾಸ್ ಪಡೆಯುವುದಕ್ಕೂ , ಘೋಷಿತ ಯೋಜನೆ ಸ್ಥಗಿತಗೊಳಿಸುವುದಕ್ಕೂ ಇರುವ ಆಡಳಿತಾತ್ಮಕ ವ್ಯತ್ಯಾಸವೂ ಗೊತ್ತಿಲ್ಲದಷ್ಟು ಅಜ್ಞಾನ ನಿಮ್ಮನ್ನು ಕಾಡುತ್ತಿದೆಯೇ ?
ನಿಮ್ಮ ಪಕ್ಷದ ಸಾಮಾಜಿಕ ಜಾಲತಾಣದ ಕೆಲ ” ಪೆದ್ದರು” ಕೊಟ್ಟ ದಾಖಲೆಯನ್ನೇ ಆಧಾರವಾಗಿಟ್ಟುಕೊಂಡು ಜನರನ್ನು ಹಾದಿ ತಪ್ಪಿಸಲು ಹೊರಟಿದ್ದೀರಿ. ಇರಲಿ ಪರವಾಗಿಲ್ಲ,
ಆದರೆ ನಿಮ್ಮ ಸರಕಾರದ ಅವಧಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದ ಹಾಸ್ಟೇಲ್ ಗಳಲ್ಲಿ ದಿಂಬು, ಚೆಂಬು ಖರೀದಿಯಲ್ಲೂ ನಡೆದ ಭ್ರಷ್ಟಾಚಾರವನ್ನು ಸ್ವಲ್ಪ ನೆನಪಿಸಿಕೊಳ್ಳಿ.
ಆಗ ನಿಮ್ಮ ಜೇಬಿಗೆ ಸೇರಿದ ಕಮಿಷನ್ ಎಷ್ಟು ಪರ್ಸೆಂಟ್ ? ಎಂದು ವಿವರಿಸಬಹುದೇ ? ಸಿದ್ದರಾಮಯ್ಯ ಎಂದು ಟ್ವೀಟ್ ಮಾಡಿದ್ದಾರೆ.