ಚಿತ್ರದುರ್ಗ : ಇತ್ತಿಚೆಗೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ಸ್ಕೂಟರ್ ಗಳ ಹವಾ ಹೆಚ್ಚಾಗುತ್ತಿದೆ. ಅದಕ್ಕೆ ತಕ್ಕನಾಗಿ ಇತ್ತಿಚೆಗೆ ಎಲೆಕ್ಟ್ರಿಕ್ ಸ್ಕೂಟರ್ ಗಳು ಬೆಂಕಿಗೆ ಆಹುತಿಯಾಗುತ್ತಿರುವ ಘಟನೆಗಳು ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಪ್ರತಿಷ್ಠಿತ ಕಂಪನಿಗಳ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಅವಘಡಗಳು ಸಂಭವಿಸಿದೆ. ಇದೀಗ ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದಲ್ಲೂ ಅಂಥದ್ದೆ ಘಟನೆ ನಡೆದಿದೆ.
ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಕೂಟರ್ ಓಡಿಸುತ್ತಿದ್ದ ಮಹಿಳೆ ಪಾರಾಗಿದ್ದಾರೆ. ಸ್ಕೂಟರ್ ಗೆ ಬಸ್ ಡಿಕ್ಕಿಯಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ.
ಬಸ್ ಡಿಕ್ಕಿಯಾಗಿ ಎಲೆಕ್ಟ್ರಿಕ್ ಸ್ಕೂಟಿ ಕೆಳಗಡೆ ಬಿದ್ದಿದೆ. ಬಿದ್ದ ರಭಸಕ್ಕೆ ಸ್ಕೂಟರ್ ನಲ್ಲಿ ಬೆಂಕಿ ಸಂಭವಿಸಿ ಸುಟ್ಟು ಕರಕಲಾಗಿದೆ. ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಹಿಳೆ ತಕ್ಷಣ ದೂರ ಸರಿದಿದ್ದಾಳೆ. ಕ್ಷಣಾರ್ಧದಲ್ಲೇ ಬೆಂಕಿ ಧಗಧಗಿಸಿ ಸ್ಕೂಟರ್ ಹೊತ್ತಿ ಉರಿದಿದೆ. ತಕ್ಷಣ ನೆರವಿಗೆ ಬಂದ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಘಟನೆಯಿಂದ ಮಹಿಳೆ ಗಾಯಗೊಂಡಿದ್ದು ಹಿರಿಯೂರು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಹಿರಿಯೂರು ನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.