ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ: ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡ ಕಾಂಗ್ರೆಸ್ ಪಕ್ಷಕ್ಕೆ ತ್ಯಾಗ ಬಲಿದಾನಗಳ ಇತಿಹಾಸವಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವಕ್ತಾರ ಹಾಗೂ ಜಿಲ್ಲಾ ಉಸ್ತುವಾರಿ ಮುರಳಿಧರ ಹಾಲಪ್ಪ ತಿಳಿಸಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ನಗರ ಮತ್ತು ಗ್ರಾಮಾಂತರ ಮಂಡಲ ವತಿಯಿಂದ ದೇಶದ ಎಪ್ಪತ್ತೈದನೆ ಸ್ವಾತಂತ್ರ್ಯ ಮಹೋತ್ಸವ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದಿಂದ ಬುಧವಾರ ಹೊರಟ 75 ಕಿ.ಮೀ.ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದರು.
ಬ್ರಿಟೀಷರ ವಿರುದ್ದ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸುವುದಕ್ಕಾಗಿ ಕಾಂಗ್ರೆಸ್ ಹೋರಾಟ ನಡೆಸಿತು. ಸ್ವಾತಂತ್ರ್ಯವೆಂದರೇನು ಎಂದು ತಿಳಿಯದ ಬಿಜೆಪಿ.ಹರ್‍ಘರ್ ತಿರಂಗಾ ಹೆಸರಿನಲ್ಲಿ ಬೂಟಾಟಿಕೆ ರಾಜಕಾರಣ ಮಾಡುತ್ತಿರುವುದರ ವಿರುದ್ದ ಜನರನ್ನು ಜಾಗೃತಿಗೊಳಿಸಿ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮ ಹಾಗೂ ಸಾಧನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಲಾಗುವುದು. ಎಲ್ಲರೂ ಶಿಸ್ತಿನಿಂದ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ದೇಶದ ಅನೇಕ ಹಿರಿಯರು ಒಂದೊಂದು ಹನಿ ರಕ್ತವನ್ನು ದೇಶದ ಸ್ವಾತಂತ್ರ್ಯಕ್ಕಾಗಿ ಸುರಿಸಿದ್ದಾರೆ. ಹಾಗಾಗಿ ತ್ಯಾಗ ಬಲಿದಾನಗಳನ್ನು ವ್ಯರ್ಥವಾಗಲು ಬಿಡಬಾರದು. ಅಮೃತ ಮಹೋತ್ಸವ ರಾಷ್ಟ್ರೀಯ ಉತ್ಸವವಾಗಬೇಕು ಎಂದು ಹೇಳಿದರು.
ಹನುಮಲಿ ಷಣ್ಮುಖಪ್ಪ ಮಾತನಾಡಿ ದೇಶದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದಲ್ಲಿ ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಳ್ಳಬೇಕು. ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕಾಗಿ ಹುಟ್ಟಿಕೊಂಡಿದ್ದು, ವಿರೋಧಿಗಳು ಅಮೃತ ಮಹೋತ್ಸವದ ನೆಪದಲ್ಲಿ ದೇಶದ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ. ಅದಕ್ಕಾಗಿ ಜನತೆಯಲ್ಲಿ ಜಾಗೃತಿ ಮೂಡಿಸಬೇಕಿದೆ. ನಾವುಗಳು ಆರಂಭಿಸಿರುವ ಪಾದಯಾತ್ರೆಯಲ್ಲಿ ಎಲ್ಲೆಡೆ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸುತ್ತಿದ್ದು, ವ್ಯಾಪಕ ಬೆಂಬಲ ಸಿಗುತ್ತಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‍ಪೀರ್, ಪ್ರಧಾನ ಕಾರ್ಯದರ್ಶಿಗಳಾದ ಕೆ.ಪಿ.ಸಂಪತ್‍ಕುಮಾರ್, ಡಿ.ಎನ್.ಮೈಲಾರಪ್ಪ, ಬಿ.ಟಿ.ಜಗದೀಶ್, ಉಪಾಧ್ಯಕ್ಷ ಎಸ್.ಎನ್.ರವಿಕುಮಾರ್, ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಫಾತ್ಯರಾಜನ್, ಮುನಿರಾ ಎ.ಮಕಾಂದಾರ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್.ಕೆ.ಸರ್ದಾರ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಲಕ್ಷ್ಮಿಕಾಂತ್, ಗ್ರಾಮಾಂತರ ಅಧ್ಯಕ್ಷ ಆರ್.ಪ್ರಕಾಶ್, ಅಸಂಘಟಿತ ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಮೋಹನ್ ಪೂಜಾರಿ, ಮರುಳಾರಾಧ್ಯ, ಫೈಲ್ವಾನ್ ತಿಪ್ಪೇಸ್ವಾಮಿ ಸೇರಿದಂತೆ ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
ನಗರದ 35 ವಾರ್ಡ್‍ಗಳಲ್ಲಿಯೂ ಪಾದಯಾತ್ರೆ ಸಂಚರಿಸಿ ಅಮೃತ ಮಹೋತ್ಸವದ ಮಹತ್ವವನ್ನು ತಿಳಿಸಿತು.