ವರದಿ ಮತ್ತು ಫೋಟೋ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಆ.05) : ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವಿಶೇಷವಾಗಿ ಅಲಂಕರಿಸಿ ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಲಿಸಲಾಯಿತು.
ನಗರ ಪೊಲೀಸ್ ಠಾಣೆ ಆವರಣದಲ್ಲಿರುವ ಕಣಿವೆ ಮಾರಮ್ಮ ದೇವಿಗೆ ಬಗೆ ಬಗೆಯ ಹೂವು, ಹಾರ ಹಾಗೂ ಆಭರಣಗಳಿಂದ ಕಂಗೊಳಿಸುವಂತೆ ಸಿಂಗರಿಸಲಾಗಿತ್ತು. ಬೆಳಗಿನಿಂದ ಸಂಜೆಯತನಕ ನೂರಾರು ಭಕ್ತರು ಧಾವಿಸಿ ಪೂಜೆ ಸಲ್ಲಿಸಿದರು.
ಎಸ್.ಆರ್.ಲೇಔಟ್‍ನಲ್ಲಿರುವ ಚೌಡೇಶ್ವರಿ ಅಮ್ಮನ ದೇವಸ್ಥಾನದಲ್ಲಿಯೂ ವರಮಹಾಲಕ್ಷ್ಮಿ ಅಂಗವಾಗಿ ವೀಳೆದೆಲೆಯಿಂದ ಅಲಂಕರಿಸಲಾಗಿತ್ತು. ವೀಳದೆಲೆ ಮಧ್ಯೆ ಒಂದೊಂದು ಸೇವಂತಿಗೆ ಹೂವನ್ನು ಇರಿಸಿ ಸಿಂಗರಿಸಿದ್ದು, ನಯನ ಮನೋಹರವಾಗಿತ್ತು. ವೀಳೆದೆಲೆ ನಡುವೆ ಬೆಳ್ಳಿ ಆಭರಣಗಳಿಂದ ಅಲಂಕರಿಸಿದ್ದು, ಭಕ್ತರ ಕಣ್ಮನ ಸೆಳೆಯುತ್ತಿತ್ತು.
ಕೆಳಗೋಟೆಯಲ್ಲಿರುವ ಕೊಲ್ಲಾಪುರದ ಮಹಾಲಕ್ಷ್ಮಿ ದೇವಸ್ಥಾನದಲ್ಲಂತೂ ಅದ್ದೂರಿಯಾಗಿ ಅಲಂಕರಿಸಿದ್ದು, ಭಕ್ತರ ಕಣ್ಣುಕೋರೈಸುತ್ತಿತ್ತು. ಬೃಹಧಾಕಾರವಾದ ಹೂವಿನ ಹಾರ, ಬೆಳ್ಳಿ, ಬಂಗಾರದ ಆಭರಣಗಳಿಂದ ಅಲಂಕೃತಗೊಂಡ ಮಹಾಲಕ್ಷ್ಮಿಗೆ ಸುತ್ತಮುತ್ತಲಿನ ನೂರಾರು ಭಕ್ತರು ಭಕ್ತಿ ಸಮರ್ಪಿಸಿದರು.