ಮಂಗಳೂರು: ಇತ್ತೀಚೆಗೆ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾಗಿತ್ತು. ಜೊತೆಗೆ ಕಡಿಮೆ ಸಮಯದಲ್ಲಿಯೇ ಮಂಗಳೂರಿನಲ್ಲಿ ಪ್ರವೀಣ್ ಸೇರಿದಂತೆ ಮೂರು ಕೊಲೆಗಳಾಗಿತ್ತು. ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಭೇಟಿ ನೀಡಿ, ಸಮಾಧಾನ ಹೇಳಿ ಬಂದಿದ್ದಾರೆ. ಜೊತೆಗೆ ಸರ್ಕಾರ ಹಾಗೂ ಪಕ್ಷದಿಂದ ಸಹಾಯಧನ ನೀಡಿದ್ದಾರೆ. ಆದರೆ ಸಿಎಂ ಬೊಮ್ಮಾಯಿ ಮಸೂದ್ ಮನೆಗೆ ಹೋಗದೆ ಇರುವ ಕಾರಣಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಬೇಸರ ಹೊರ ಹಾಕಿದ್ದಾರೆ.
ಕುಮಾರಸ್ವಾಮಿ ಇಂದು ಮೃತ ಮಸೂದ್ ಮನೆಗೆ ಭೇಟಿ ನೀಡಿದ್ದಾರೆ. ಕಳಂಜದ ನಿವಾಸಕ್ಕೆ ಭೇಟಿ ನೀಡಿ, ಮನೆಯವರಿಗೆ ಸಾಂತ್ವಾನ ತಿಳಿಸಿ, ತಮ್ಮ ಪಕ್ಷದಿಂದ ಐದು ಲಕ್ಷ ರೂಪಾಯಿ ಚೆಕ್ ವಿತರಿಸಿದ್ದಾರೆ. ಸುರತ್ಕಲ್ ನಲ್ಲಿ ಹತ್ಯೆಯಾದ ಫಾಜಿಲ್ ಮನೆಗೂ ಭೇಟಿ ನೀಡಿ ಸಾಂತ್ವನ ತಿಳಿಸಿದ್ದಾರೆ.
ಈ ಸಂಬಂಧ ಭೇಟಿ ನೀಡಿದ ಫೋಟೋ ಹಂಚಿಕೊಂಡು ಟ್ವೀಟ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬೆಳ್ಳಾರೆ ಗ್ರಾಮದಲ್ಲಿ ಹತ್ಯೆಗೆ ಗುರಿಯಾಗಿದ್ದ ಯುವಕ ಮಸೂದ್ ಅವರ ಕಳಂಜದ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದೆ. ಈ ಸಂದರ್ಭದಲ್ಲಿ @JanataDal_S ಪಕ್ಷದಿಂದ 5 ಲಕ್ಷ ರೂ. ಮೊತ್ತದ ನೆರವಿನ ಚೆಕ್ ಹಸ್ತಾಂತರ ಮಾಡಲಾಯಿತು.
ತೀವ್ರ ಶೋಕದಲ್ಲಿರುವ ಕುಟುಂಬದವರು ಈ ನೋವಿನಿಂದ ಹೊರಬರಬೇಕು. ಪಕ್ಷದ ವತಿಯಿಂದ ಆ ಕುಟುಂಬಕ್ಕೆ ಎಲ್ಲ ರೀತಿಯ ನೆರವು ನೀಡಲಾಗುವುದು. ಜೆಡಿಎಸ್ ರಾಜ್ಯಾಧ್ಯಕ್ಷ ಶ್ರೀ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಎಂ.ಫಾರೂಕ್, ಶ್ರೀ ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜೆಡಿಎಸ್ ಮುಖಂಡರು ಉಪಸ್ಥಿತರಿದ್ದರು ಎಂದು ಟ್ವೀಟ್ ಮಾಡಿದ್ದಾರೆ.