ಚಿತ್ರದುರ್ಗ: ದೇಶ ಹಾಗೂ ಪಕ್ಷದ ಭವಿಷ್ಯಕ್ಕಾಗಿ ಬಿಜೆಪಿ, ಆರ್.ಎಸ್.ಎಸ್.ವಿರುದ್ದ ಹೋರಾಡಬೇಕಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ಇಸಾಖ್ ಅಹಮದ್‌ಖಾನ್ ಹೇಳಿದರು.
ಐಶ್ವರ್ಯ ಫೋರ್ಟ್ನಲ್ಲಿ ಶನಿವಾರ ಜಿಲ್ಲಾ ಯೂತ್ ಕಾಂಗ್ರೆಸ್‌ನಿಂದ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಯೂತ್ ಕಾಂಗ್ರೆಸ್ ಪಕ್ಷದಲ್ಲಿ ಒಂದು ಪರಿವಾರವಿದ್ದಂತೆ. ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡಬೇಕೆಂಬ ಚಿಂತನೆಯಿಂದ ಯುವ ನಾಯಕ ರಾಹುಲ್‌ಗಾಂಧಿ ಯೂತ್ ಕಾಂಗ್ರೆಸ್ ಹುಟ್ಟುಹಾಕಿದರು. ಇದರಿಂದ ನೀವುಗಳು ನಾಯಕತ್ವದ ಗುಣ ಬೆಳೆಸಿಕೊಳ್ಳಬಹುದು ಎಂದು ಕರೆ ನೀಡಿದರು.
2014 ರ ಪಾರ್ಲಿಮೆಂಟ್ ಚುನಾವಣೆ ಪೂರ್ವದಲ್ಲಿ ಅನೇಕ ಭರವಸೆಗಳನ್ನು ದೇಶದ ಜನರಿಗೆ ನೀಡಿ ಎರಡನೆ ಬಾರಿಗೆ ಅಧಿಕಾರಕ್ಕೆ ಬಂದಿರುವ ಪ್ರಧಾನಿ ನರೇಂದ್ರಮೋದಿ ವರ್ಷಕ್ಕೆ ಎರಡು ಕೋಟಿ ಯುವಕರಿಗೆ ಉದ್ಯೋಗ ನೀಡುವುದಾಗಿ ಘೋಷಿಸಿದರು. ಆದರೆ ಯುವಕರು ಇಂದಿಗೂ ನಿರುದ್ಯೋಗಿಗಳಾಗಿದ್ದಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವುದು ಭಾರತೀಯ ಜನತಾಪಾರ್ಟಿಯಲ್ಲ. ಭಾರತೀಯ ಜೂಟ ಪಾರ್ಟಿ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷವನ್ನು ಪಂಚಾಯಿತಿ, ಬೂತ್ ಮಟ್ಟಕ್ಕೆ ತೆಗೆದುಕೊಂಡು ಹೋಗುವ ಜವಾಬ್ದಾರಿ ಯೂತ ಕಾಂಗ್ರೆಸ್ ಮೇಲಿದೆ. ಪಕ್ಷದ ಸೇವೆ ಮಾಡಲು ಮೊದಲು ಇಚ್ಚಾಶಕ್ತಿ ಬೇಕು. ಯೂತ್ ಜೋಡೋ, ಬೂತ್ ಜೋಡೋ ಕಾರ್ಯಕ್ರಮದ ಮೂಲಕ ಪಕ್ಷಕ್ಕೆ ಶಕ್ತಿ ತುಂಬುವ ಕೆಲಸವಾಗಬೇಕು. ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಬಿಜೆಪಿ.ಸರ್ಕಾರವನ್ನು ಕಿತ್ತೊಗೆದು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಯುವದೃಷ್ಟಿ ಯುವ ಸೃಷ್ಟಿ ಕಾರ್ಯಕ್ರಮದಡಿ ಒಂದು ಬೂತ್‌ನಲ್ಲಿ ಮೂರು ಸಾವಿರ ಫಾರಂಗಳನ್ನು ಭರ್ತಿ ಮಾಡಿ ಪಕ್ಷಕ್ಕೆ ಹೆಚ್ಚಿನ ಸದಸ್ಯತ್ವ ನೊಂದಾಯಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೊದಲು ಯುವಕರಿಗೆ ಉದ್ಯೋಗ ನೀಡಲಾಗುವುದು. ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರ ಹಾಗೂ ಹನ್ನೆರಡು ಬ್ಲಾಕ್‌ಗಳಲ್ಲಿ ನಿಮ್ಮ ನಿಮ್ಮ ಬೂತ್‌ಗಳಲ್ಲಿ ಎಷ್ಟು ಪಂಚಾಯಿತಿಗಳಿವೆ ಎನ್ನುವುದನ್ನು ತಿಳಿದುಕೊಂಡು ಒಂದು ಬೂತ್‌ನಲ್ಲಿ ಐದು ಸಕ್ರಿಯ ಕಾರ್ಯಕರ್ತರನ್ನು ಆಯ್ಕೆ ಮಾಡುವ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ನ ಉಪಾಧ್ಯಕ್ಷರು ಚಿತ್ರದುರ್ಗ ಉಸ್ತುವಾರಿಗಳಾದ ದೀಪಿಕಾರೆಡ್ಡಿ ಹೆಚ್.ಆರ್.ಮಾತನಾಡಿ ಪ್ರಧಾನಿ ನರೇಂದ್ರಮೋದಿ ಐದುನೂರು ಹಾಗೂ ಒಂದು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿದ್ದೇ ದೊಡ್ಡ ಸಾಧನೆ. ಇದರಿಂದ ಬಡವರಿಗೆ, ಯುವಕರಿಗೆ, ಮಹಿಳೆಯರಿಗೆ, ಮಧ್ಯಮ ವರ್ಗದವರಿಗೆ, ನಿರುದ್ಯೋಗಿಗಳಿಗೆ ಅನುಕೂಲವಾಗಲಿಲ್ಲ. ಬೂತ್ ಮಟ್ಟದಲ್ಲಿ ಮನೆ ಮನೆಗೆ ಹೋಗಿ ಸರ್ವೆ ನಡೆಸಿ ಒಂದು ಊರು ಹಳ್ಳಿಯಲ್ಲಿ ಎಷ್ಟು ಯುವಕರು ನಿರುದ್ಯೋಗಿಗಳಿದ್ದಾರೆನ್ನುವುದನ್ನು ತಿಳಿದುಕೊಳ್ಳಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷರು, ಪದಾಧಿಕಾರಿಗಳಿಗೆ ಸೂಚಿಸಿದರು.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಆ.15 ರಂದು ಬೆಂಗಳೂರಿನಲ್ಲಿ 75 ಕಿ.ಮೀ.ಪಾದಯಾತ್ರೆ ನಡೆಸಲಾಗುವುದು. ಜಿಲ್ಲೆಯಿಂದ ಯೂತ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಆ.1 ರಿಂದ 10 ರವರೆಗೆ ಪ್ರತಿ ಜಿಲ್ಲೆಯಲ್ಲಿ ಪಾದಯಾತ್ರೆ ಸಂಚರಿಸಲಿದೆ. ಆ.3 ರಂದು ದಾವಣಗೆರೆಯಲ್ಲಿ ನಡೆಯುವ ಸಿದ್ದರಾಮಯ್ಯನವರ ಹುಟ್ಟುಹಬ್ಬದಲ್ಲಿಯೂ ಭಾಗವಹಿಸಿ ಶುಭ ಕೋರಬೇಕಿದೆ. ಪಕ್ಷ ಸಂಘಟನೆ, ಪ್ರತಿಭಟನೆ ನಿಮ್ಮ ಹಕ್ಕು. ನಿಮ್ಮ ನಿಮ್ಮ ಬ್ಲಾಕ್‌ಗಳಲ್ಲಿ ಬಿಜೆಪಿ.ಭ್ರಷ್ಟಾಚಾರದ ವಿರುದ್ದ ಹೆಚ್ಚು ಪ್ರತಿಭಟನೆಗಳನ್ನು ಮಾಡಿ ಕಾಂಗ್ರೆಸ್ ಪಕ್ಷದ ಸಾಧನೆಗಳನ್ನು ಜನತೆಗೆ ತಿಳಿಸಿ ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳಲ್ಲಿ ಮನವಿ ಮಾಡಿದರು.
ಕರ್ನಾಟಕ ಪ್ರದೇಶ ಯೂತ್ ಕಾಂಗ್ರೆಸ್ ಕಾರ್ಯದರ್ಶಿ ಎಂ.ಡಿ.ಹಸನ್‌ತಾಹೀರ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕಾರೇಹಳ್ಳಿ ಉಲ್ಲಾಸ್, ಉಪಾಧ್ಯಕ್ಷ ವಸೀಂ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಕೆ.ತಾಜ್‌ಪೀರ್ ವೇದಿಕೆಯಲ್ಲಿದ್ದರು.
ಜಿಲ್ಲೆಯ ಹನ್ನೆರಡು ಬ್ಲಾಕ್‌ನ ಯೂತ್ ಕಾಂಗ್ರೆಸ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಪದಾಧಿಕಾರಿಗಳು ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಿದ್ದರು.