ಮಂಗಳೂರು: ಮುಂಗಾರು ಮಳೆಯ ಆರ್ಭಟ ರಾಜ್ಯದೆಲ್ಲೆಡೆ ಜೋರಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಲೆನಾಡು ಭಾಗದಲ್ಲಂತು ಹೇಳತೀರದು. ಆರಂಭದ ಮಳೆಯಿಂದಲೇ ಸಾಕಷ್ಟು ಅವಾಂತರವಾಗಿದೆ. ಇದೀಗ ಕುಕ್ಕೆ ಸುಬ್ರಮಣ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕಾರೊಂದು ನದಿಗೆ ಬಿದ್ದು, ಇಬ್ಬರು ನಾಪತ್ತೆಯಾಗಿರುವ ಘಟನೆ ನಡೆದಿದೆ.
ಬೈತಡ್ಕ ಗೌರಿ ಹೊಳೆಯಲ್ಲಿ ನಿನ್ನೆ ರಾತ್ರಿ ಈ ಘಟನೆ ನಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾದ ಸ್ಥಿತಿಯಲ್ಲಿ ಕಂಡಿದೆ. ಕಾರಿನಲ್ಲಿದ್ದ ಇಬ್ಬರು ನಾಪಾತ್ತೆಯಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಕಾರು ನದಿಯ ನೀರಿನಲ್ಲಿ ಹಾರುವ ದೃಶ್ಯ ಬೈತಡ್ಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಥಳಕ್ಕೆ ಪೊಲೀಸರು ಬೆಳಗ್ಗೆಯೇ ಹೋಗಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ನದಿಯಲ್ಲಿ ಬಿದ್ದಿದ್ದ ಕಾರನ್ನು ಹೊರಗೆ ತೆಗೆದಿದ್ದಾರೆ. ನಾಪತ್ತೆಯಾದವರ ಬಗ್ಗೆಯೂ ಹುಡುಕಾಟ ಶುರುವಾಗಿದೆ. ಮಳೆಯ ರಭಸ ಹೆಚ್ಚಾಗಿದ್ದು, ಓಡಾಡುವವರು ಬಹಳ ಎಚ್ಚರದಿಂದ ಇರಬೇಕೆಂದು ಹವಮಾನ ಇಲಾಖೆಯೂ ಸೂಚನೆ ನೀಡಲಾಗಿದೆ. ರಾಜ್ಯದ ಹಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ರಸ್ತೆಯಲ್ಲೆಲ್ಲಾ ಮಣ್ಣು ಶೇಖರಣೆಯಾಗಿದೆ. ಅಷ್ಟೇ ಅಲ್ಲ ಕೆಲವು ಜಿಲ್ಲೆಗಳಲ್ಲಿ ಗುಡ್ಡ ಕುಸಿತವಾಗಿದೆ.