ವರದಿ ಮತ್ತು ಫೋಟೋ : ಸುರೇಶ್ ಪಟ್ಟಣ್
ಮೊಬೈಲ್ : 9886295817
ಚಿತ್ರದುರ್ಗ,(ಜೂ.06) : ರಾಷ್ಟ್ರ ಮತ್ತು ರಾಜ್ಯ ಮಟ್ಟಕ್ಕೆ ವಕ್ತಾರರನ್ನು ಆಯ್ಕೆ ಮಾಡುವ ಸಲುವಾಗಿ ರಾಜ್ಯಾದ್ಯಾಂತ ಯಂಗ್ ಇಂಡಿಯಾ ಕೇ ಬೋಲ್ ಎಂಬ ಸ್ಪರ್ಧೆಯನ್ನು ಏರ್ಪಡಿಸಿರುವುದಾಗಿ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ರಾಜ್ಯ ವಕ್ತಾರ ದರ್ಶನ ಬಳ್ಳೇಶ್ವರ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ನ ವಿವಿಧ ಘಟಕಗಳಿಗೆ ವಕ್ತಾರರಿದ್ದಾರೆ. ಆದರೆ ಯುವ ಕಾಂಗ್ರೆಸ್ಗೆ ವಕ್ತಾರರಿಲ್ಲ. ಇವರನ್ನು ಆಯ್ಕೆ ಮಾಡಬೇಕಿದೆ ಆದರೆ ಯಾವ ರೀತಿ ಎಂಬುದು ತಿಳಿಯದೇ ಯಂಗ್ ಇಂಡಿಯಾ ಕೇ ಬೋಲ್ ಈ ರೀತಿಯಾದ ಸ್ಪರ್ಧೆಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಾಡುವುದರ ಮೂಲಕ ಅದರಲ್ಲಿ 10 ಜನರನ್ನು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು.
ಇದರಲ್ಲಿ ಮತ್ತೆ ಸ್ಪರ್ಧೆಯನ್ನ ಮಾಡುವುದರ ಮೂಲಕ ರಾಷ್ಟ್ರ ಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ಇಲ್ಲಿ ಆಯ್ಕೆಯಾದ 10 ಜನರಲ್ಲಿ ಇಬ್ಬರು ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸಿದರೆ ಉಳಿದ 8 ಜನರು ರಾಜ್ಯ ಮಟ್ಟವನ್ನು ಪ್ರತಿನಿಧಿಸಲಿದ್ದಾರೆ ಎಂದರು.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ದೇಶದ ಪ್ರಚಲಿತ ವಿದ್ಯಮಾನದ ಬಗ್ಗೆ ತಿಳಿದಿರಬೇಕಿದೆ. ಮೊಬೈಲ್ ಮೂಲಕ ನೋಂದಾಣಿಯನ್ನು ಮಾಡಿಸಬೇಕಿದೆ. ಅದರಲ್ಲಿಯೇ ಸ್ಫರ್ಧೆ ನಡೆಯುವ ದಿನಾಂಕ, ಸ್ಥಳ, ಯಾವ ವಿಷಯದ ಬಗ್ಗೆ ಮಾತನಾಡಬೇಕು ಎಂಬ ಮಾಹಿತಿಯನ್ನು ನೀಡಲಾಗುತ್ತದೆ. ಇದರಲ್ಲಿ ಐದು ವಿಷಯವನ್ನು ನೀಡಿ ಒಂದು ವಿಷಯದ ಬಗ್ಗೆ ಮಾತನಾಡಬೇಕಿದೆ. ಯುವ ಜನತೆಯಲ್ಲಿ ದೃಷ್ಟಿಯಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಈ ಕಾರ್ಯಕ್ರಮವನ್ನು ರೂಪಿಸಿದೆ. ಸಾಧ್ಯವಾದಷ್ಟು ಯುವಜನತೆಯನ್ನು ಪಕ್ಷಕ್ಕೆ ಸೆಳೆಯುವ ಕಾರ್ಯ ಸಹಾ ಆಗಿದೆ ಎಂದು ದರ್ಶನ ತಿಳಿಸಿದರು.
ಇಂದು ರಾತ್ರಿಯಿಂದ ಯಂಗ್ ಇಂಡಿಯಾ ಕೇ ಬೋಲ್ಗೆ ನೊಂದಾಣಿ ಪ್ರಾರಂಭವಾಗಲಿದೆ ಜೂ.18ರವರೆಗೆ ಕಾಲಾವಕಾಶವನ್ನು ನೀಡಲಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಯುವಜನತೆ ಇದರಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡಬೇಕಿದೆ ಎಂದರು.
ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷ ತಾಜ್ಪೀರ್, ನಗರಸಭೆ ಮಾಜಿ ಅಧ್ಯಕ್ಷ ಮೈಲಾರಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಉಲ್ಲಾಸ್ ಕಾರೇಹಳ್ಳಿ, ವಕ್ತಾರ ಬಾಲಕೃಷ್ಣ ಯಾದವ್, ಸಂಪತ್ ಕುಮಾರ್ ಸೇರಿದಂತೆ ಇತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಯಂಗ್ ಇಂಡಿಯಾ ಕೇ ಬೋಲ್ನ ಭಿತ್ತಿಪತ್ರವನ್ನು ಬಿಡುಗಡೆ ಮಾಡಲಾಯಿತು.