ದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮತ್ತು ಕೆಲವೊಂದು ಹಿಂದೂ ದೇವರುಗಳ ಕುರುಹು ಪತ್ತೆಯಾಗಿದ್ದು, ಸದ್ಯ ಈ ಪ್ರಕರಣ ವಾರಾಣಾಸಿ ಜಿಲ್ಲಾ ನ್ಯಾಯಲಯದಲ್ಲಿ ನಡೆಯುತ್ತಿದೆ. ಈ ಬೆನ್ನಲ್ಲೇ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನೀಡಿರುವ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಈ ಸಂಬಂಧ ಮಾತನಾಡಿರುವ ಮೋಹನ್ ಭಾಗವತ್, ಕೆಲವು ಪ್ರದೇಶಗಳ ಬಗ್ಗೆ ನಮಗೆ ಭಕ್ತಿ ಇರುತ್ತದೆ. ಅದರ ಬಗ್ಗೆ ನಾವು ಮಾತನಾಡುತ್ತಿರುತ್ತೇವೆ. ಆದರೆ ಪ್ರತಿದಿನ ಹೊಸ ಹೊಸ ಸ್ಥಳಗಳ ಬಗ್ಗೆ ಪ್ರಸ್ತಾಪಿಸುವುದು ಸರಿಯಾಗಲಾರದು. ನಾವು ಪ್ರತಿದಿನ ಹೊಸ ಹೊಸ ವಿವಾದಗಳನ್ನು ಹುಟ್ಟುಹಾಕಬಾರದು.
ಜ್ಞಾನವಾಪಿ ಮಸೀದಿ ಬಗ್ಗೆ ನಮಗೆ ಶ್ರದ್ಧೆಯಿದೆ. ಆ ವಿಚಾರದಲ್ಲಿ ನಾವು ಏನು ಮಾಡುತ್ತಿದ್ದೇವೆಯೋ ಅದು ಆ ಶ್ರದ್ಧೆಗೆ ಅನುಗುಣವಾಗಿದೆ. ಹಾಗೆಂದು ಎಲ್ಲ ಮಸೀದಿಗಳಲ್ಲಿ ಶಿವಲಿಂಗ ಹುಡುಕುವುದು ಸರಿಯಲ್ಲ. ಜ್ಞಾನವಾಪಿ ವಿವಾದವು ನಂಬಿಕೆಯ ಕೆಲವು ಸಮಸ್ಯೆಗಳನ್ನು ಒಳಗೊಂಡಿದ್ದು, ನ್ಯಾಯಾಲಯದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು, ಆದರೆ ಪ್ರತಿ ಮಸೀದಿಯಲ್ಲಿ ಶಿವಲಿಂಗವನ್ನು ಹುಡುಕುವ ಮತ್ತು ಪ್ರತಿದಿನ ಹೊಸ ವಿವಾದವನ್ನು ಪ್ರಾರಂಭಿಸುವ ಅಗತ್ಯವಿಲ್ಲ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.