ಚಿತ್ರದುರ್ಗ,(ಮೇ.19) : ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಹೆಚ್ಚು ಶೇಂಗಾ ಬೆಳೆ ಬೆಳೆಯುತ್ತಿದ್ದಾರೆ. ಶೇಂಗಾ ಜೊತೆಗೆ ಸೂರ್ಯಕಾಂತಿ ಸೇರಿದಂತೆ ಇತರೆ ಎಣ್ಣೆ ಕಾಳುಗಳ ಬಿತ್ತನೆಗೆ ಕೃಷಿ ಪರಿಕರ ಮಾರಟಗಾರರು ರೈತರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಜಂಟಿ ಕೃಷಿ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದರು.
ನಗರದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಗುರುವಾರ ಕೃಷಿ ಪರಿಕರ ಮಾರಟಗಾರರ ಸಭೆ ಮತ್ತು ಸುರಕ್ಷಿತ ಕೀಟನಾಶಕ ಬಳಕೆ ಕುರಿತಾದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಳೆದ ವರ್ಷ ಹತ್ತಿ ಹಾಗೂ ಸೂರ್ಯಕಾಂತಿಗೆ ಉತ್ತಮವಾದ ಬೆಲೆ ದೊರೆತಿದೆ. ಈ ವರ್ಷ ತಾಲೂಕಿನಲ್ಲಿ ಹತ್ತಿ ಹಾಗೂ ಸೂರ್ಯಕಾಂತಿ ಬಿತ್ತನೆ ಹೆಚ್ಚಾಗುವ ನಿರೀಕ್ಷೆಯಿದೆ. ತಾಲೂಕಿನಲ್ಲಿ 150 ಹೆಕ್ಟರ್ ಹತ್ತಿ ಬಿತ್ತನೆಯಾಗಿದೆ.
ತಾಲ್ಲೂಕಿಗೆ ಒಟ್ಟು 30000 ಟನ್ ರಸಗೊಬ್ಬರದ ಆವಶ್ಯಕತೆಯಿದೆ. ಪ್ರಸ್ತುತ 15000 ಟನ್ ರಸಗೊಬ್ಬರ ದಾಸ್ತಾನಿದೆ. ತಾಲ್ಲೂಕಿನಾದ್ಯಂತ ಸುಮಾರು 26 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಹಾಗೂ 79 ಖಾಸಗಿ ಕೃಷಿ ಪರಿಕರ ಮಾರಾಟಗಾರರ ಮೂಲಕ ಸಮರ್ಪಕವಾಗಿ ರಸಗೊಬ್ಬರ ವಿತರಣೆ ಮಾಡಲು ಕ್ರಮ ವಹಿಸಲಾಗಿದೆ.
ಕೃಷಿ ಉಪ ನಿರ್ದೇಶಕ ಪ್ರಭಾಕರ ಮಾತನಾಡಿ, ರೈತರಿಗೆ ಸಮರ್ಪಕವಾಗಿ ಬಿತ್ತನೆ ಬೀಜಗಳು ಹಾಗೂ ಗೊಬ್ಬರವನ್ನು ಒದಗಿಸಲು ಕೃಷಿ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ. ಕೃಷಿ ಪರಿಕರ ಮಾರಾಟಗಾರರು ಅಂಗಡಿಗಳಲ್ಲಿ ನಾಮಫಲಕದಲ್ಲಿ ಉಳಿದಿರುವ ಗೊಬ್ಬರ ಮತ್ತು ಅದರ ಬೆಲೆಯನ್ನು ಸ್ಪಷ್ಟವಾಗಿ ನಮೂದಿಸಬೇಕು. ರೈತರಿಗೆ ಗುಣಮಟ್ಟವಾದ ಗೊಬ್ಬರ ಮತ್ತು ಬೀಜಗಳನ್ನು ನೀಡಬೇಕು. ಕಳಪೆ ಬೀಜಗಳ ಮಾರಾಟ ಹಾಗೂ ಎಂಆರ್‌ಪಿ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಕಂಡುಬಂದರೆ ಕಠಿಣ ಕ್ರಮವನ್ನು ಜರುಗಿಸಿ ಅಂಗಡಿಯ ಪರವನಗಿಯನ್ನು ರದ್ದು ಮಾಡಲಾಗುವುದು.
ಸಹಾಯಕ ಕೃಷಿ ನಿರ್ದೇಶಕ ಚಂದ್ರಕುಮಾರ್ ಮಾತನಾಡಿ, ಚಿತ್ರದುರ್ಗ ತಾಲೂಕು ಒಟ್ಟು 1,23,502 ಹೆಕ್ಟರ್ ಭೌಗೋಳಿಕ ವಿಸ್ತೀರ್ಣ ಹೊಂದಿದೆ. 81,130 ಹೆಕ್ಟೇರ್ ಕೃಷಿ ಯೋಗ್ಯ ಸಾಗುವಳಿ ಭೂಮಿಯಿದೆ. ಇದರಲ್ಲಿ 65,230 ಹೆಕ್ಟೇರ್ ಪ್ರದೇಶದಲ್ಲಿ ಮುಂಗಾರು ಹಂಗಾಮಿನಲ್ಲಿ ವಿವಿಧ ಕೃಷಿ ಬೆಳೆಗಳನ್ನು ಬೆಳೆಯಲಾಗುತ್ತದೆ. ತಾಲ್ಲೂಕಿನಲ್ಲಿ ಪ್ರಮುಖವಾಗಿ ಆಹಾರ ಧಾನ್ಯಗಳಾದ ಮುಸುಕಿನ ಜೋಳ, ರಾಗಿ, ದ್ವಿದಳ ಧಾನ್ಯಗಳಾದ ತೊಗರಿ, ಅವರೆ, ಹಾಗೂ ಎಣ್ಣೆಕಾಳು ಬೆಳೆಗಳಾದ ಶೇಂಗಾ, ಸೂರ್ಯಕಾಂತಿ ಹಾಗೂ ವಾಣಿಜ್ಯ ಬೆಳೆಯಾದ ಹತ್ತಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯಲಾಗುತ್ತದೆ, ತಾಲ್ಲೂಕಿಗೆ ಒಟ್ಟು 12000 ಕ್ವಿಂಟಾಲ್ ಬಿತ್ತನೆ ಬೀಜದ ಅವಶ್ಯಕತೆ ಇದೆ ಕೃಷಿ ಇಲಾಖೆಯಿಂದ ಸಹಾಯಧನ ಯೋಜನೆಯಡಿ ಎಲ್ಲಾ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳಾದ ಹೈಬ್ರಿಡ್ ಜೋಳ, ಮುಸುಕಿನ ಜೋಳ, ಅಲಸಂದೆ, ಹೆಸರು ತೊಗರಿ ಹಾಗೂ ಶೇಂಗಾ ದಾಸ್ತಾನು ಮಾಡಿ ಸಮರ್ಪಕವಾಗಿ ವಿತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಜಾಗೃತದಳದ ಸಹಾಯಕ ಕೃಷಿ ನಿರ್ದೇಶಕ ಲೋಕೇಶ್ವರಪ್ಪ ಮಾತಾನಾಡಿ, ಗ್ರಾಮೀಣ ಪ್ರದೇಶದಲ್ಲಿ ಪರವನಗಿ ಇಲ್ಲದೆ ಬೀಜ-ಗೊಬ್ಬರ ಔಷಧಿಗಳನ್ನು ಮಾರಾಟ ಮಾಡುತ್ತಿರುವವರ ವಿರುದ್ಧವಾಗಿ ಅರ್ಜಿಗಳು ಬಂದಿವೆ. ಅಂಥವರ ವಿರುದ್ಧ ಕೇಸ್ ದಾಖಲಾಗುವುದು. ರೈತರಿಗೆ ಬೀಜಗಳು, ಔಷಧಿಗಳನ್ನು ನೀಡುವ ಸಂದರ್ಭದಲ್ಲಿ ಯಾವ ಪ್ರಮಾಣದಲ್ಲಿ ಬಳಸಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ನೀಡಬೇಕು. ಕೀಟನಾಶಕ ಔಷಧಿ ಮತ್ತು ಗೊಬ್ಬರ ಬೀಜಗಳಿಗೆ ಪ್ರತ್ಯೇಕ ಬಿಲ್ ನೀಡಬೇಕು ಎಂದರು. ಐಎಫ್‌ಎಫ್‌ಸಿಒ ಸಂಸ್ಥೆಯ ಅಧಿಕಾರಿ ಚಿದಾನಂದಮೂರ್ತಿ ಮಾತನಾಡಿ ರೈತರು ನ್ಯಾನೋ ಡಿಎಪಿ ಗೊಬ್ಬರ ಬಳಸುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಜೊತೆಗೆ ಹಣ ಉಳಿತಾಯವಾಗುತ್ತದೆ. ಇದರ ಬಳಕೆಯ ವಿಧಾನವನ್ನು ತಿಳಿದುಕೊಳ್ಳಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಪರಿಕರಗಳ ಮಾರಾಟಗರರ ಅಧ್ಯಕ್ಷ ರೇವಣಸಿದ್ದಪ್ಪ, ರೈತ ಮುಖಂಡ ಸುರೇಶ್ ಬಾಬು ಸೇರಿದಂತೆ ಬಿತ್ತನೆ ಬೀಜ ತಯಾರಿಕಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.