ಚಿತ್ರದುರ್ಗ, (ಮೇ.16) : ಈಡಿಸ್ ಈಜಿಪ್ಟೈ ಎಂಬ ಹೆಣ್ಣು ಸೊಳ್ಳೆಯ ಗಾತ್ರ ಚಿಕ್ಕದಾದರೂ ಸಹ ಇದು ತರುವಂತಹ ಅಪಾಯ ಬಹು ದೊಡ್ಡದು ಇದು ಪ್ರಪಂಚದ ಜನಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತದೆ, ಸೊಳ್ಳೆಗಳ ನಿಯಂತ್ರಣ ಮತ್ತು ಸ್ವಯಂರಕ್ಷಣೆ ಪಡೆಯುವುದು ಬಹು ಮುಖ್ಯವಾದ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಆರ್.ರಂಗನಾಥ ತಿಳಿಸಿದರು.
ನಗರದ ವಾಸವಿ ವಿದ್ಯಾ ಸಂಸ್ಥೆ ಆವರಣದಲ್ಲಿ ಜಿಲ್ಲಾ ಆರೋಗ್ಯ ಇಲಾಖೆ ವಾಸವಿ ವಿದ್ಯಾ ಸಂಸ್ಥೆ ಸಹಯೋಗದೊಂದಿಗೆ ಡೆಂಗೀ ತಡೆಗಟ್ಟಬಹುದು, ಬನ್ನಿ ಎಲ್ಲರೂ ಕೈ ಜೋಡಿಸೋಣ ಎಂಬ ದ್ಯೇಯ ವಾಕ್ಯದೊಂದಿಗೆ ರಾಷ್ಟ್ರೀಯ ಡೆಂಗ್ಯೂ ಜಾಗೃತಿ ದಿವಸ್ ಮತ್ತು ಶಾಲಾ ಶೈಕ್ಷಣಿಕ ವರ್ಷ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರತಿ ವರ್ಷದಂತೆ ಈ ವರ್ಷವೂ ಸಹ ರಾಷ್ಟ್ರೀಯ ಡೆಂಗೀ ದಿನವನ್ನು ಆಚರಿಸಲಾಗುತ್ತಿದೆ ಡೆಂಗ್ಯೂ ಜ್ವರ ಈಡಿಸ್ ಎಂಬ ಹೆಣ್ಣು ಸೊಳ್ಳೆ ಕಡಿತದಿಂದ ಒಬ್ಬರಿಂದ ಒಬ್ಬರಿಗೆ ಹರಡುವ ಒಂದು ವೈರಸ್ ಈ ಸೊಳ್ಳೆಗಳು ಮನೆಯ ಒಳಗಿನ ಹಾಗೂ ಮನೆಯ ಸುತ್ತಮುತ್ತಲಿನ ನೀರಿನ ಶೇಖರಣೆಗಳಲ್ಲಿ ಹಾಗೂ ಘನತಾಜ್ಯ ವಸ್ತುಗಳಲ್ಲಿ ಉತ್ಪತ್ತಿಯಾಗಿ ಖಾಯಿಲೆಯನ್ನು ಹರಡಲು ಕಾರಣವಾಗಿದೆ ಎಂದರು.
ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ ಡಾ.ಕಾಶಿ ಮಾತನಾಡಿ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಗಪ್ಪಿ ಮತ್ತು ಗಾಂಬೂಷಿಯಾ ಲಾರ್ವಾಹಾರಿ ಮೀನು ಸಾಕಾಣಿಕ ತೊಟ್ಟಿಯನ್ನು ನಿರ್ಮಿಸಿ, ಸೊಳ್ಳೆಗಳು ಉತ್ಪತ್ತಿಯಾಗುವಂತಹ ನೀರು ನಿಂತಿರುವ ಕೆರೆ, ಕಟ್ಟೆ, ಬಾವಿಗಳಿಗೆ ಪ್ರತಿ ತಿಂಗಳು ಮೀನುಗಳನ್ನು ಬಿಡಲಾಗುತ್ತಿದೆ ಪ್ರತಿ ನಿತ್ಯ ಆರೋಗ್ಯ ಸಿಬ್ಬಂದಿ ಆಶಾ ಕಾರ್ಯಕರ್ತೆಯರು ಮನೆ ಮನೆ ಭೇಟಿ ನೀಡಿ ಲಾರ್ವಾ ಸಮೀಕ್ಷೆ ಹಾಗೂ ನಗರ ಪ್ರದೇಶಗಳಲ್ಲಿ ಪ್ರತಿ ತಿಂಗಳು ಮೊದಲನೇ ಮತ್ತು ಮೂರನೇ ಶುಕ್ರವಾರ ಲಾರ್ವ ಸಮೀಕ್ಷಾ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಡಾ.ಎ.ಎಚ್.ಕೆ.ಸ್ವಾಮಿ ಸೊಳ್ಳೆ ಆಕೃತಿಗಳ ಪ್ರದರ್ಶನ ನೀಡಿ ಜಾಗೃತಿ ಗೀತೆಗಳನ್ನು ಹಾಡಿ ಮನೆಯ ಶೌಚಾಲಯ ಕಿಟಕಿಗಳಿಗೆ ಮೆಶ್ ಪರದೆ ಬಳಸಲು ಆರ್ಥಿಕ ಹೊರೆಯಾದರೆ ಈರುಳ್ಳಿ ಬೆಳ್ಳುಳ್ಳಿ ಚೀಲಗಳನ್ನು ಪರದೆಯಾಗಿ ಬಳಕೆ ಮಾಡಿಕೊಂಡು ಸೊಳ್ಳೆಗಳಿಂದ ರಕ್ಷಣೆ ಪಡೆದುಕೊಳ್ಳಿ ಎಂದರು.
ವಾಸವಿ ವಿದ್ಯಾ ಸಂಸ್ಥೆಯ ಅಧ್ಯಕ್ಷರಾದ ಎಸ್.ಎ.ಸತ್ಯನಾರಾಯಣ ಶೆಟ್ಟಿ ಡೆಂಗ್ಯೂ ಜಾಗೃತಿ ದಿವಸ್ ಆಚರಣೆಯೊಂದಿಗೆ ಈ ಬಾರಿಯ ಶಾಲಾ ಪ್ರಾರಂಭೊತ್ಸವ ನಡೆಯುತ್ತಿರುವುದು ಸಂತೋಷದ ವಿಷಯ ಎಂದು ತಿಳಿಸಿ ಮಕ್ಕಳಿಗೆ ಸಿಹಿ ಹಂಚಿ ಗುಲಾಬಿಯೊಂದಿಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಿದರು. ದೊಡ್ಡಪೇಟೆ, ಚಿಕ್ಕಪೇಟೆ ಕಾಮನಬಾವಿ ಬಡಾವಣೆ ವೃತ್ತದಲ್ಲಿ ಜಾಗೃತಿ ಜಾಥ ನಡೆಸಿ ಸೊಳ್ಳೆಗಳ ಬಗ್ಗೆ ಸ್ವಯಂರಕ್ಷಣೆ ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ಬಿ.ವಿ.ಗಿರೀಶ್, ಗೌರಮ್ಮ, ಜಿಲ್ಲಾ ಕಾರ್ಯಕ್ರಮ ಅನುಷ್ಠನಾಧಿಕಾರಿ ರೇಣುಪ್ರಸಾದ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ ಜಿಲ್ಲಾ ಆರೋಗ್ಯ ಮೇಲ್ವಿಚಾರಾಧಿಕಾರಿಗಳಾದ ಆಂಜನೇಯ, ಹನುಮಂತಪ್ಪ, ಅಬುಸ್ವಾಲೇಹ, ಮೂಗಪ್ಪ, ಮಲ್ಲಿಕಾರ್ಜುನ, ಪಾಂಡು ನಾಗರಾಜ್, ವಾಸವಿ ವಿದ್ಯಾಸಂಸ್ಥೆಯ ಎಲ್.ಎನ್.ಅಜಯ್ ಕುಮಾರ್, ಎಮ್.ಗಿರೀಶ್, ಮುಖ್ಯ ಉಪಾದ್ಯಾಯರು, ಸಹ ಶಿಕ್ಷಕರು ಆರೋಗ್ಯ ನಿರೀಕ್ಷಣಾಧಿಕಾರಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.