ವಿಜಯಪುರ: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆಯಾಗಲಿದೆ ಎಂಬ ಮಾತು ಕೇಳಿ ಬರುತ್ತಿದೆ. ಅದಕ್ಕೆ ಪುಷ್ಟಿ ನೀಡಿದ್ದು ಬಿ ಎಲ್ ಸಂತೋಷ್ ಅವರ ಹೇಳಿಕೆ. ಇದೀಗ ಆ ವಿಚಾರವಾಗಿ ಮಾತನಾಡಿರುವ ಶಾಸಕ ಬಸನಗೌಡ ಯತ್ನಾಳ್ ಅವರು, ನಾಳೆ ಪ್ರಧಾನಮಂತ್ರಿಗಳು ವಿದೇಶದಿಂದ ಬಂದ ಮೇಲೆ ನಡುವೆ ನಿರ್ಣಯ ಮಾಡುತ್ತಾರೆ. ಏನು ಮಾಡಬೇಕು ಎಂಬುದನ್ನು ಅವರೇ ಅಂತಿಮವಾಗಿ ತೀರ್ಮಾನಿಸುತ್ತಾರೆ. ಈಗಾಗಲೇ ಎಲ್ಲಾ ವರದಿಗಳನ್ನು ತೆಗೆದುಕೊಂಡಿದ್ದಾರೆ. ಕರ್ನಾಟಕದ ದೃಷ್ಟಿಯಿಂದ, ಪಾರ್ಟಿ ದೃಷ್ಟಿಯಿಂದ ಒಳ್ಳೆ ನಿರ್ಣಯ ತೆಗೆದುಕೊಳ್ಳುತ್ತಾರೆ.
ಎಂಟಿಬಿ ನಾಗರಾಜ್ ಇತ್ತೀಚೆಗೆ ನಾನು ಬಿಜೆಪಿ ಸೇರಿ ತಪ್ಪು ಮಾಡಿದೆ ಎಂಬುದನ್ನು ಹೇಳಿದ್ದರು. ಆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಾಸಕ ಯತ್ನಾಳ್, ಎಂಟಿಬಿ ನಾಗರಾಜ್ ಅವರು ತುಂಬಾ ಒಳ್ಳೆಯ ಮನುಷ್ಯ. ಅವರನ್ನು ನಾನು ತುಂಬಾ ಹತ್ತಿರದಿಂದ ನೋಡಿದ್ದೇನೆ. ಈ ಸರ್ಕಾರ ಆಗುವುದಕ್ಕೆ ಅವರ ಪಾತ್ರವೂ ಮುಖ್ಯವಾಗಿದೆ. ಎಲ್ಲಾ ರೀತಿಯಿಂದಲೂ ಸಹಾಯ ಮಾಡಿದ್ದಾರೆ. ಇವತ್ತೇನು ಆಪರೇಷನ್ ಆಗಿದೆ ಅದರಲ್ಲಿ ಅವರ ಕೊಡುಗೆಯೂ ಇದೆ. ಇವತ್ತೇನೋ ಅವರ ಮನಸ್ಸಿಗೆ ನೋವಾಗಿದೆ. ಕುಮಾರಸ್ವಾಮಿ ಸರ್ಕಾರ ಇದ್ದಾಗ ಅವರಿಗೆ ಒಳ್ಳೆ ಖಾತೆ ಇತ್ತು. ಅಲಕ್ಷ್ಯ ಆಗಿದೆ ಅಂತ ನಮಗೂ ಅನ್ನಿಸುತ್ತದೆ. ನಾನು ಸಹಿತ ನಮ್ಮ ಪಕ್ಷದ ಹಿರಿಯರು ಅವರನ್ನು ಗೌರವದಿಂದ ಕಾಣುತ್ತಾರೆ ಅಂತ ಭಾವಿಸುತ್ತೇನೆ ಎಂದು ಎಂಟಿಬಿ ನಾಗರಾಜ್ ಪರ ಬ್ಯಾಟ್ ಬೀಸಿದ್ದಾರೆ.
ಇನ್ನು ಪಿಎಸ್ಐ ಹಗರಣದ ಬಗ್ಗೆ ಮಾತನಾಡಿ, ಅದು ತನಿಖೆಯಾಗಬೇಕು. ಯಾರೇ ಇದ್ದರು ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳುತ್ತಾರೆ. ಸಿಐಡಿಯವರು ಒಳ್ಳೆ ರೀತಿಯಲ್ಲಿ ತನಿಖೆ ನಡೆಸುತ್ತಾರೆ. ನಾಳೆ ಅಶ್ವತ್ಥ್ ನಾರಾಯಣ್ ಸಹೋದರ ಪಾತ್ರ ಇದ್ರೆ ತನಿಖೆ ಮಾಡ್ತಾರೆ. ಅವರಿದ್ದರೆ ಅರೆಸ್ಟ್ ಮಾಡ್ತಾರೆ. ಯಾರನ್ನು ಬಿಡುವುದಿಲ್ಲ ಎಂದು ಸಿಎಂ ಹೇಳಿದ್ದಾರೆ ಎಂದಿದ್ದಾರೆ.