ಚಿತ್ರದುರ್ಗ, .ಏ.23: ಶಿಕ್ಷಣಕ್ಕೆ ನೀಡುವ ಪ್ರಾಮುಖ್ಯತೆಯನ್ನು ಕ್ರೀಡೆಗೂ ನೀಡಬೇಕು. ಆರೋಗ್ಯ ವೃದ್ಧೀಗೆ ಕ್ರೀಡೆ ಸಹಾಯಕಾರಿಯಾಗಿದೆ ಎಂದು ಒಂದನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬನ್ನಿಕಟ್ಟೆ ಹನುಮಂತಪ್ಪ ಆರ್. ಹೇಳಿದರು.
ನಗರದ ವೀರವನಿತೆ ಒನಕೆ ಓಬವ್ವ ಕ್ರೀಡಾಂಗಣದಲ್ಲಿ ಆಯೋಜಿಸಲಾದ 2022 ನೇ ಸಾಲಿನ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾ ಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಸಮಾರೋಪ ಸಮಾರಂಭದ ಉದ್ಘಾಟಿಸಿ, ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಹೈಸ್ಕೂಲ್ ಮತ್ತು ಕಾಲೇಜು ಮಟ್ಟದಿಂದ ಕ್ರೀಡಾ ಆಸಕ್ತಿ ಬೆಳಸಿಕೊಂಡ ನೌಕರರು ಕ್ರೀಡೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ. ಹಾಗೇ ಉಳಿದ ನೌಕರರು ಆಸಕ್ತಿಯಿಂದ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಹಿಂದೆ ಹಳ್ಳಿಗಳ್ಳಿ ಕಬ್ಬಡಿ, ಖೋ ಖೋ ಆಟಗಳನ್ನು ಗ್ರಾಮಸ್ಥರು ಪ್ರೋತ್ಸಾಹಿಸುತ್ತಿದ್ದರು. ನಗರೀಕರಣವಾದಂತೆ ಕ್ರೀಡೆಯಲ್ಲಿ ಆಸಕ್ತಿ ಕುಂಠಿತವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿದರೆ ದೈಹಿಕವಾಗಿ ಸಧೃಡರಾಗಿರುತ್ತೀರಿ. ನೌಕರರ ಸಂಘದಿಂದ ತಾಲೂಕು ಮಟ್ಟದಲ್ಲೂ ಕ್ರೀಡಾಕೂಟ ಆಯೋಜನೆ ಮಾಡುವ ಕಾರ್ಯವಾಗಬೇಕು. ಮಹಿಳೆಯರು ಕ್ರೀಡೆಗಳಲ್ಲಿ ಉತ್ತಮ ಸಾಧನೆ ತೋರುತ್ತಿದ್ದಾರೆ. ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಎಂದರು.
ಉಪವಿಭಾಗಧಿಕಾರಿ ಆರ್.ಚಂದ್ರಯ್ಯ ಮಾತನಾಡಿ, ಕ್ರೀಡೆ ಮತ್ತು ಆರೋಗ್ಯ ಒಂದು ನಾಣ್ಯದ ಎರೆಡು ಮುಖಗಳು. ಇವು ಅವಿಭಾಜ್ಯ ಅಂಗಗಳು. ಕ್ರೀಡೆಗೆ ಮಹತ್ವ ನೀಡುವುದು ಅಗತ್ಯವಾಗಿದೆ. ಅಂತರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಭಾರತಕ್ಕಿಂತ ಸಣ್ಣ ದೇಶಗಳ ಸಾಧನೆ ಹೆಚ್ಚಿದೆ. ಕ್ರೀಡೆಗೆ ಮಹತ್ವ ಪ್ರೋತ್ಸಾಹ ನೀಡುವುದರೊಂದಿಗೆ ಅಂತರಾಷ್ಟ್ರೀಯ ಕ್ರೀಡೆಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ಆಗಬೇಕು. ಸ್ವಾಥ್ಯ ದೇಹದಲ್ಲಿ ಸ್ವಾಥ್ಯ ಮನಸ್ಸು ಇರುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರು ನೋಡಿ ಸುಮ್ಮನಾಗದೆ ಉಳಿದ ನೌಕರರು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು. ದಿನನಿತ್ಯ ಮನೆಗಳಲ್ಲಿ ಲಘು ವ್ಯಾಯಮ, ನಡಿಗೆ ಮಾಡುವುದರ ಮೂಲಕ ಆರೋಗ್ಯವಾಗಿರಬಹುದು ಎಂದರು.
ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೆ.ಮಂಜುನಾಥ ಮಾತನಾಡಿ,2022 ಸಾಲಿನ ಕ್ರೀಡಾಕೂಟ ಯಶಸ್ವಿಯಾಗಿ ಪೂರ್ಣಗೊಂಡಿದೆ. ಸಂಘ ನೌಕರರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದೆ. ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ನೌಕರರ ಸಮಸ್ಯೆಗಳನ್ನು ಪಟ್ಟಿ ಮಾಡಿ ಹಂತಹಂತವಾಗಿ ಬಗೆಹರಿಸುತ್ತಿದ್ದಾರೆ. ನೌಕರರ ಸಂಘದ ಭವ್ಯ ಕೇಂದ್ರ ಕಚೇರಿ ನಿರ್ಮಾಣ, ಸಂಘದ ಬೈಲಾ ತಿದ್ದುಪಡಿ, ನೌಕರರ ಕುಂದು ಕೊರತೆ ಪರಿಹರಿಸಲು ಜಿಲ್ಲಾ ಮಟ್ಟದ ಜಂಟಿ ಸಮಾಲೋಚನೆ ಸಮಿತಿ ರಚನೆ, ನಗದು ರಹಿತ ಚಿಕಿತ್ಸೆ, ವೃಂದ ಮತ್ತು ನೇಮಕ್ಕೆ ತಿದ್ದುಪಡಿ, ನೌಕರರ ಪದನ್ನೋತಿ. ಕೆ.ಜಿ.ಐ.ಡಿ ಇಲಾಖೆ ಗಣಕೀಕರಣ, ಕಿಡ್ನಿ ವೈಪಲ್ಯ ಹಾಗೂ ಕ್ಯಾನ್ಸರ್ ಚಿಕಿತ್ಸೆ ಆರು ತಿಂಗಳ ಸಾಂದರ್ಭಿಕ ರಜೆ, ಸರ್ಕಾರಿ ನೌಕರರ ದಿನಾಚರಣೆ, ಮರಣಹೊಂದಿದ ನೌಕರರ ಶವಸಂಸ್ಕಾರದ ಮೊತ್ತದ ಹೆಚ್ಚಳ ಹೀಗೆ ಹಲವು ಸುಧಾರಣೆಗಳನ್ನು ಮಾಡಿದ್ದಾರೆ.
ಎನ್.ಪಿ.ಎಸ್ ರದ್ದತಿಗೆ ಹೋರಾಟ ಮಾಡಲಾಗುತ್ತಿದೆ ಎಂದರು.
ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ
ಕಾರ್ಯಕ್ರಮದಲ್ಲಿ ದಾವಣಗೆರೆಯಲ್ಲಿ ಜರುಗಿದ 2020-21 ಸಾಲಿನ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ, ಕುಸ್ತಿಯಲ್ಲಿ ಪ್ರಶಸ್ತಿ ವಿಜೇತರಾದ ನ್ಯಾಯಾಂಗ ಇಲಾಖೆ ಸುರೇಶ್ ಟಿ.ಬಿ. ಸಮಾಜ ಕಲ್ಯಾಣ ಇಲಾಖೆ ಶ್ರೀಕಾಂತ ಬೀರಪ್ಪ ಶಿರೋಳ, ಹಿಂದುಳಿದ ವರ್ಗಗಳ ಇಲಾಖೆ ಪೃಥ್ವಿ ಎಸ್, ಪಶು ಇಲಾಖೆ ತಿಮ್ಮೇಶ್, ಈಜು ಸ್ಪರ್ಧೆಗಳಲ್ಲಿ ಪ್ರಶಸ್ತಿ ಪಡೆದ ಹಿಂದುಳಿದ ವರ್ಗಗಳ ಇಲಾಖೆ ಚೇತನ ಅದಲಾಟ್ಟಿ, ಚೆಸ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ
ವೀರೇಶ್.ಟಿ, ಶಾಟ್‌ಪುಟ್‌ನಲ್ಲಿ ಪ್ರಶಸ್ತಿ ಪಡೆದ ಕಂದಾಯ ಇಲಾಖೆಯ
ಸೌಮಶ್ರೀ, ರನ್ನಿಂಗ್ ಹಾಗೂ ಹೈಜಂಪ್‌ನಲ್ಲಿ ಪ್ರಶಸ್ತಿ ಪಡೆದ ಕಾರಗೃಹ ಇಲಾಖೆಯ ವೃಂದ.ಬಿ, ಶಟಲ್ ಬ್ಯಾಟಮಿಟನ್ ಡಬ್ಬಲ್ಸ್‌ನಲ್ಲಿ ಪ್ರಶಸ್ತಿ ಪಡೆದ ಪೊಲೀಸ್ ಇಲಾಖೆಯ ಅನಿತ.ಜೆ, ಶಿಕ್ಷಣ ಇಲಾಖೆ ವಿಜಯಲಕ್ಷ್ಮೀ, 100 ಮೀ ರನ್ನಿಂಗ್ ಪ್ರಶಸ್ತಿ ಪಡೆದ ಶ್ರೀನಿವಾಸ.ಜಿ ಅವರಿಗೆ ಸನ್ಮಾನಿಸಲಾಯಿತು. ಪ್ರಸಕ್ತ ಕ್ರೀಡಾ ಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಕೆ.ಆರ್.ಜಯಲಕ್ಷ್ಮೀ ಬಾಯಿ, ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್, ಉಪಾಧ್ಯಕ್ಷ ರಾಘವೇಂದ್ರ, ಗೌರವ ಅಧ್ಯಕ್ಷ ವೀರಣ್ಣ, ಹಿರಿಯೂರು ತಾಲೂಕು ನೌಕರರ ಸಂಘದ ಅಧ್ಯಕ್ಷ ಶಿವಕುಮಾರ್ ಹೊಸದುರ್ಗ ತಾಲೂಕು ನೌಕರರ ಸಂಘದ ಅಧ್ಯಕ್ಷ ಶಶಿಧರ, ಕ್ರೀಡಾ ಕಾರ್ಯದರ್ಶಿಗಳಾದ ವೆಂಕಟಪತಿ, ಶಶಿಧರ್, ಕ್ರೀಡಾ ತರಬೇತುದಾರ ಮಹಿಬುಲ್ಲಾ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.