ವರದಿ : ಮುತ್ತುಸ್ವಾಮಿ ಕಣ್ಣಣ್
ಚಿತ್ರದುರ್ಗ, (ಏ.15): ಏಕನಾಥೇಶ್ವರಿ ಅಮ್ಮನ ಮೆರವಣಿಗೆ ಶುಕ್ರವಾರ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.
ಕೋಟೆ ರಸ್ತೆಯಲ್ಲಿರುವ ಪಾದಗುಡಿ ಸಮೀಪ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮೆರವಣಿಗೆಯನ್ನು ಉದ್ಘಾಟಿಸಿದರು.
ಸುಗಂಧರಾಜ, ಮಲ್ಲಿಗೆ, ಸೇವಂತಿಗೆ, ಕನಕಾಂಬರ, ಗುಲಾಬಿ ಹೀಗೆ ಬಣ್ಣಬಣ್ಣ ಹೂವು ಹಾಗೂ ಹಾರಗಳಿಂದ ಏಕನಾಥೇಶ್ವರಿಯನ್ನು ಸಿಂಗರಿಸಲಾಗಿತ್ತು. ಹಸಿರು ಪತ್ರೆ ಹಾಗೂ ತುಳಸಿ ಹಾರಗಳಿಂದ ಕಂಗೊಳಿಸುತ್ತಿದ್ದ ಏಕನಾಥೇಶ್ವರಿ ಮೆರವಣಿಗೆ ಆನೆಬಾಗಿಲು ಮೂಲಕ ಬುರುಜನಹಟ್ಟಿ, ಗಾಂಧಿವೃತ್ತ, ಮೈಸೂರು ಬ್ಯಾಂಕ್ ಸರ್ಕಲ್, ಧರ್ಮಶಾಲಾ ರಸ್ತೆ, ಜೋಗಿಮಟ್ಟಿ ರೋಡ್ ಮೂಲಕ ಮತ್ತೆ ಪಾದಗುಡಿಗೆ ತೆರಳಿತು.
ರಸ್ತೆಯ ಎರಡು ಬದಿಗಳಲ್ಲಿ ಮನೆ ಹಾಗೂ ಆರ್.ಸಿ.ಸಿ.ಗಳ ಮೇಲೆ ನಿಂತು ಭಕ್ತರು ಮೆರವಣಿಗೆಯನ್ನು ಕಣ್ತುಂಬಿಕೊಂಡರು. ಅಲ್ಲಲ್ಲಿ ಭಕ್ತರು ಆರತಿ ಬೆಳಗಿ ಭಕ್ತಿ ಸಮರ್ಪಿಸಿದರು. ಚಂಡೆ ಮೃದಂಗ, ಉರುಮೆ, ತಮಟೆ, ಡೊಳ್ಳಿನ ಸದ್ದಿಗೆ ಮೆರವಣಿಗೆಯಲ್ಲಿದ್ದ ಎಲ್ಲರೂ ಕುಣಿದು ಕುಪ್ಪಳಿಸಿದರು.
ಸೋಮನ ಕುಣಿತ, ಗೊಂಬೆ ಕುಣಿತ ಮೆರವಣಿಗೆಯಲ್ಲಿ ಆಕರ್ಷಣೀಯವಾಗಿತ್ತು.
ಏಕನಾಥೇಶ್ವರಿ ಜೀರ್ಣೊದ್ದಾರ ಸಮಿತಿ ಅಧ್ಯಕ್ಷ ದೊರೆಸ್ವಾಮಿ, ನಿರ್ದೇಶಕರುಗಳಾದ ರಾಮಜ್ಜ, ಮಲ್ಲಿಕಾರ್ಜುನ್ ಎಸ್.ಬಿ.ಎಲ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಶ್ರೀನಿವಾಸ್, ನಗರಸಭೆ ಸದಸ್ಯರುಗಳಾದ ಭಾಸ್ಕರ್, ಶಶಿಧರ್, ಮಾಜಿ ಸದಸ್ಯ ರಾಜೇಶ್, ಗಾಡಿ ಮಂಜುನಾಥ್ ಸೇರಿದಂತೆ ಸಾವಿರಾರು ಭಕ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಅಲ್ಲಲ್ಲಿ ಬ್ಯಾರಿಕೇಡ್ಗಳನ್ನು ಅಡ್ಡ ರಸ್ತೆಗಳಿಗಿಟ್ಟು ಪೊಲೀಸರು ಮೆರವಣಿಗೆ ಸುಗಮವಾಗಿ ಸಾಗಲು ಅನುವು ಮಾಡಿಕೊಟ್ಟರು.