ಶಿವಮೊಗ್ಗ: ಬೆಂಗಳೂರಿಗೆ ಬರುವುದಕ್ಕೂ ಮುನ್ನ ಹಳೆ ಕೆಲಸವನ್ನು ಸಚಿವ ಈಶ್ವರಪ್ಪ ಮುಗಿಸಲು ತೀರ್ಮಾನಿಸಿದ್ದಾರೆ. ಅದರಂತೆ ಶಿವಮೊಗ್ಗದ ತೇವರ ಚಟ್ನಹಳ್ಳಿಯಲ್ಲಿರುವ ಕಲ್ಯಾಣ ಮಂಟಪವನ್ನು ಉದ್ಘಾಟನೆ ಮಾಡಲಿದ್ದಾರೆ. ಪುತ್ರ ಕಾಂತೇಶ್ ಸೇರಿದಂತೆ ಹಲವರು ಈಶ್ವರಪ್ಪ ಅವರಿಗೆ ಕೊನೆ ಕೆಲಸಗಳಿಗೆ ಸಾಥ್ ನೀಡಿದ್ದಾರೆ.
ಶಿವಮೊಗ್ಗದ ಕೆಲಸಗಳನ್ನು ಮುಗಿಸಿ, ಸದ್ಯ ಬೆಂಗಳೂರಿಗೆ ಬರಲಿದ್ದಾರೆ. ರಾಜಕಾರಣದ ದಿನಗಳಲ್ಲಿ ಸಾಕಷ್ಟು ಪರಿಶ್ರಮ ಹಾಕಿ ಪಕ್ಷ ಸಂಘಟನೆ ಮಾಡಿದ್ದವರು. ಯಡಿಯೂರಪ್ಪ ಅವರ ಜೊತೆ ಸೇರಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ನಿಲ್ಲುವಂತೆ ಮಾಡಿದ್ದಾರೆ. ಆದರೆ ಆತ್ಮಹತ್ಯೆ ಕೇಸ್ ನಿಂದಾಗಿ ಅವರು ತಮ್ಮ ಸಚಿವ ಸ್ಥಾನವನ್ನು ತ್ಯಾಗ ಮಾಡುವಂತ ಪರಿಸ್ಥಿತಿ ಎದುರಾಗಿದೆ.
ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೂ ಮೊದಲೇ ಕಮಿಷನ್ ವಿಚಾರದಲ್ಲಿ ಆರೋಪ ಮಾಡಿದ್ದರು. ಬಳಿಕ ಆ ವಿಚಾರ ಸಾಕಷ್ಟು ಚರ್ಚೆಯಾಗಿ ಸ್ವಲ್ಪ ತಣ್ಣಗಾಗಿತ್ತು ಎನ್ನುವಾಗಲೇ ಸಂತೋಷ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಅದು ಈಶ್ವರಪ್ಪ ಅವರ ಹೆಸರನ್ನು ಬರೆದಿಟ್ಟು. ಇದು ಕಾಂಗ್ರೆಸ್ ನಾಯಕರಿಗೆ ದೊಡ್ಡ ಅಸ್ತ್ರವಾಗಿ ಸಿಕ್ಕಿದೆ. ಈಶ್ವರಪ್ಪನವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು, ಅವರನ್ನು ಬಂಧಿಸಬೇಕು ಎಂಬ ಹಠ ತೊಟ್ಟು ಪ್ರತಿಭಟನೆಗೆ ಮುಙದಾಗಿದ್ದಾರೆ. ಅಹೋರಾತ್ರಿ ವಿಧಾನಸೌಧದಲ್ಲಿ ಧರಣಿ ಕುಳಿತಿದ್ದಾರೆ. ಈ ಬೆನ್ನಲ್ಲೇ ಈಶ್ವರಪ್ಪ ನಿನ್ನೆಯೇ ರಾಜೀನಾಮೆ ಘೋಷಿಸಿ, ಇಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ.