ಚಿತ್ರದುರ್ಗ : ಜಿಲ್ಲೆಯ ಹಲವು ಅಜ್ಞಾತ ಅವಧೂತರಲಿ ಕೆಂಚಪ್ಪ ತಾತನವರು ಕೂಡ ಒಬ್ಬರು. ಇವರ ತಾಯಿ ಚೆನ್ನಮ್ಮ ತಂದೆ ಮಾರಪ್ಪ ಶೈವ ದಂಪತಿಗಳು.
ಇವರ ಪೂರ್ವಜರು ಹಿರಿಯೂರು ತಾಲೂಕಿಗೆ ಸೇರಿದ ವಾಣಿವಿಲಾಸ ಪುರವಾಸಿನಿ ಶ್ರೀ ಕಣಿವೆ ಮಾರಮ್ಮನ ಅರ್ಚಕರು. ಕಾಲಾಂತರದಲಿ ಕೊಳಾಳಿಗೆ ಬಂದು ನೆಲಸಿದವರು. ಬಹು ದಿನಗಳ ನಂತ್ರ ವರ ಪ್ರಸಾದ ಎಂಬಂತೆ ಒಂದು ಗಂಡು ಮಗುವಿನ ಜನನವಾಗುವದು.
ಆಗ ದಂಪತಿಗಳು ದೊಡ್ಡ ಕೆಂಚಪ್ಪ ಎಂದು ನಾಮಕರಣ ಮಾಡಿದರು. ಇವರು ಒಂದು ದಿನವೂ ಶಾಲೆ ಮೆಟ್ಟಿಲು ತುಳಿದದವರಲ್ಲ. ಅಕ್ಷರ ಬಲ್ಲವರಲ್ಲ. ವೇದಾಂತ ಗೊತ್ತೇಯಿಲ್ಲ. ಸದಾ ದನ ಕುರಿ ಕಾಯುವದೇ ಮುಖ್ಯ ಕಸುಬು. ಇವರು ಸಾಮಾನ್ಯರಂತೆಯೇ ಜೀವನ ಸಾಗಿಸಿದವರು. ಹೆಂಡ್ತಿ ಮಕ್ಕಳು ತಮ್ಮಂದಿರಿಂದ ಕೂಡಿದ ಅವಿಭಕ್ತ ಕುಟುಂಬ.
ಮುಂದೆ ಒಂದು ದಿನ ಹಂಪೆ ಭಾಗದಿಂದ ಕುದುರೆ ಮೇಲೆ ಬಂದ ಜಂಗಮರೋರ್ವರ ಪರಿಚಯ ದಾರಿ ಮಧ್ಯೆ ಆಗುವದು.ಇವರೇ ರುದ್ರಮುನಿಸ್ವಾಮಿ. ಹಟ ರಾಜ ಯೋಗ ನಿಪುಣರು. ನಾಟಿ ವೈದ್ಯ ಇತ್ಯಾದಿ ಬಲ್ಲವರು. ತಂತ್ರಶಾಸ್ತ್ರ ನಿಪುಣರು. ಹಂಪೆ ಸೀಮೆಯ ಕಾಳಘಟ್ಟದವರು. ಇವರ ಪರಿಚಯದಿಂದ ಕೆಂಚಪ್ಪನವರ ಬದುಕಿನ ದಿಶೆಯೇ ಬದಲಾಯಿತು. ಮುಂದೆ ಶ್ರೀ ಗುರು ರುದ್ರಮುನಿ ಸ್ವಾಮಿಯ ಉಪದೇಶ ಪಡೆದು ಸಾಧನಾ ನಿರತರಾದರು.” ಸತ್ಯವಂತರ ಹೊಲ ಮುಕ್ತಿವಂತ ಬೆಳೆ “ಎಂಬುದು ಇವರ ಧ್ಯೇಯವಾಕ್ಯವಾಗಿತ್ತು. ಇಂಥವರ ಗರಡಿಯೊಳು ಪಳಗಿದ ಕೆಂಚಪ್ಪ ಮುಂದೆ ಜನಮಾನಸದೋಳ್ ‘ಅವಧೂತ’ ರೆಂದು ಖ್ಯಾತಿ ಗಳಿಸಿದರು.
ಸ್ವಭಾವತಃ ಮೌನವೇ ಹೆಚ್ಚು. ನಿಷ್ಪ್ರುಹ ಜೀವಿ. ಹೆಂಡ್ತಿ ಮಕ್ಕಳು ತಮ್ಮಂದಿರಿಂದ ಕೂಡಿದ ಅವಿಭಕ್ತ ಕುಟುಂಬ ಇವರದು. “ಸಂಸಾರದೊಳು ಮುಕ್ತಿ ಸಿದ್ಧ ನಿತ್ಯ ಸಂಸಾರ ಯೋಗಿಯೇ ಲೋಕ ಪ್ರಸಿದ್ಧ” ಎಂಬ ನಾಣ್ಣುಡಿ ಯಂತೇ ಸಂಸಾರ ಯೋಗಿ ಆದವರು.
ಜೀವಿತ ಕಾಲದಲಿ ಅನೇಕ ಪವಾಡಗಳು ಅಂದ್ರೆ ಹೆಂಡದಿಂದ ಬೆಣ್ಣೆ ತಗೆದು ತೋರಿದ ಪ್ರಸಂಗ, ಜೋಳ ಸ್ಪರ್ಶ ಮಾತ್ರ ದಿಂದಲೇ ಹರಳುಗೈದ ವಿಸ್ಮಯ, ಅಳಿಯನ ಶಿರಕಡಿದು ಪುನಃ ಕರೆದು ತೋರಿ ಚಕಿತಗೊಳಿಸಿದ ಚಮತ್ಕಾರ ಮೊದಲಾದ ಪವಾಡಗಳು ಈ ಭಾಗದ ಜನರ ಮಾನಸದಲಿ ಹಾಸು ಹೊಕ್ಕಾಗಿವೆ.
ನಂಬಿದ ಭಕ್ತರನು ಕಾಯುವ ದ್ವಿತೀಯ ಶಂಭು ಎಂದು ಭಕ್ತರು ನಡೆದುಕೊಳ್ಳುವರು. ಪ್ರತಿ ಸೋಮವಾರ ವಿಶೇಷ ಪೂಜೆ, ಭಜನೆ, ದಾಸೋಹ ನಡೆವುದು. ಅರದಲೆ ನೋವು ಬಂದವರು ಎಲೆ ಅಡಿಕೆ ಇಟ್ಟು ಪ್ರದಕ್ಷಿಣೆ ಮಾಡಿ ಪಾರುಗಾಣುವರು. ಇನ್ನು ಹುಣ್ಣಿಮೆ ದಿನದಂದು ಅರಕೆ ಹೊತ್ತಂತ, ಇಷ್ಟಾರ್ಥ ಈಡೇರಿದಂತ ಭಕ್ತರ ಕೋರಿಕೆ ಮೇರೆಗೆ ದೇವಿ ಪಾರಾಯಣ ನಡೆಸುವರು.
ಈ ಪುಣ್ಯ ಕ್ಷೇತ್ರವು (ರಾ.ಹೆ-4) ಐಮಂಗಲ ಗ್ರಾಮದಿಂದ ಪಶ್ಚಿಮಕ್ಕೆ ಕೇವಲ 13 ಕಿ.ಮಿ ದೂರದಲ್ಲಿದೆ. 16-4-22 ದೇವಿ ಪಾರಾಯಣ ಹಾಗೂ 17-4-2022 ರಂದು ಹೂವ್ವಿನಪಲ್ಲಕ್ಕಿ ಉತ್ಸವ ಇತ್ಯಾದಿ ಕಾರ್ಯಗಳು ವಿಜೃಂಭಣೆಯಿಂದ ಜರುಗಲಿವೆ ಎಂದು ಮಠದ ಆಡಳಿತ ನೋಡಿಕೊಳ್ಳುವ ಶ್ರೀ ಸ್ವಾಮಿ ವಂಶಸ್ಥರು ತಿಳಿಸಿದರು.