Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನವ ನವೋನ್ಮೇಷ ಯುಗಾದಿ : ವಿದ್ವಾನ್ ಜಿ.ಎಸ್. ಗಣಪತಿ ಭಟ್ಟ ಅವರ ಯುಗಾದಿ ವಿಶೇಷ ಲೇಖನ

Facebook
Twitter
Telegram
WhatsApp

ಭಾರತೀಯ ಹಬ್ಬ ಹರಿದಿನಗಳು ನಮ್ಮ ಸಂಪ್ರದಾಯಗಳು, ಸಂಸ್ಕಾರಗಳು, ಆಚರಣೆಗಳು, ಎಲ್ಲವೂ ಸಹ ಪ್ರಕೃತಿಯ,  ನಿಸರ್ಗದ ಪರಿಸ್ಥಿತಿಯನ್ನು ಅವಲಂಬಿಸಿಯೇ ಸಾಗುತ್ತಿವೆ. ನಿಷಿದ್ಧ ಆಷಾಢ, ಸಂಭ್ರಮದ ಶ್ರಾವಣ, ನವರಾತ್ರಿಯ ಆ ವೈಭವ, ಕಾರ್ತಿಕ ಮಾಸದ ಬೆಳಕಿನ ದೀಪಾವಳಿ ಹೀಗೆ ಒಂದೊಂದು ವಿಶೇಷ ಆಚರಣೆಯನ್ನು ಕುರಿತು ವಿವೇಚಿಸಿದಾಗ ‘ವಿಶೇಷದರ್ಶನ’ ನಮಗೆ ಬೆರಗು ಮೂಡಿಸುವಷ್ಟು ನಿಲುಕುತ್ತವೆ. ಮಳೆಗಾಲದ ಮೂರೂ ತಿಂಗಳು ಸಮುದ್ರ ಸ್ನಾನ ನಿಷಿದ್ಧ. ಕಾರಣ ಮಲಿನವಾದ ನೀರು ನಾಲ್ದೆಸೆಗಳಿಂದಲೂ ಕೊಚ್ಚಿ ಬಂದು ಸಾಗರದಲ್ಲಿ ಬೆರೆಯುತ್ತದೆ.

ನವರಾತ್ರಿಯಂದು ಇಡೀ ಪ್ರಕೃತಿಯೇ ದೈವೀಮಯವಾಗಿ ಅಂತರಾಳದಲ್ಲಿ ಸುದೀರ್ಘ ಒಂಬತ್ತು ಹತ್ತು ದಿನಗಳ ಹಬ್ಬದ ವಾತಾವರಣವೇ ಅನಾವರಣಗೊಳ್ಳುತ್ತದೆ. ಎಲ್ಲಿ ನೋಡಿದರೂ ಸಂಭ್ರಮವೇ ಸಂಭ್ರಮ. ದೇವಿಯೊಬ್ಬಳದೇ ಆರಾಧನೆ, ಸಮಾರಾಧನೆ,ರೈತರ ಕೃಷಿ ಚಟುವಟಿಕೆಗಳೂ ಮುಗಿದಿರುವುದೂ ಧಾರಾಕಾರ ಮಳೆ ಶಾಂತವಾಗಿರುವುದೂ ಇವೆಲ್ಲಾ ಪ್ರಾಕೃತಿಕ ಸಂದರ್ಭಗಳು.

ಇನ್ನೂ ವಿಶಿಷ್ಟವಾದುದು, ವೈರಾಗ್ಯ ಸಿಂಹಾಸನಾಧೀಶ್ವರರಾದ ಸನ್ಯಸ್ತ ಜೀವನವನ್ನು ಸಾಗಿಸುವ ಸನ್ಯಾಸಿಗಳ ಚಾರ್ತುರ್ಮಾಸ್ಯ ವ್ರತಾನುಷ್ಠಾನದ ಪ್ರಸಂಗ. ಮಳೆಗಾಲದಲ್ಲಿ ಹುಳು ಹುಪ್ಪಟೆಗಳು ಪ್ರವ್ರಾಜಕರಾದ (ಒಂದೆಡೆ ನೆಲೆನಿಲ್ಲದೆ ಸಂಚಾರ ಶೀಲರಾದ ಪ್ರಾಚೀನ ಕಾಲ) ಸನ್ಯಾಸಿಗಳ ಕಾಲ್ತುಳಿತಕ್ಕೆ ಸಿಕ್ಕಿ ಸಾಯುತ್ತವೆ. ಸರ್ವಸತ್ವಗಳಿಗೂ ಆಭಯ ಇನ್ನೆಲ್ಲಿಂದ ? ಹಾಗಾಗಿ ಒಂದೆಡೆ ವಾಸ್ತವ್ಯ ಹೂಡಿ ವ್ರತಾನುಷ್ಠಾನಗಳನ್ನು ಆಚರಿಸುತ್ತಾ, ದಿನದ ಕೆಲವು ಹೊತ್ತು ಅಧ್ಯಾತ್ಮ ಪ್ರವಚನ ನೀಡಿ ಭಕ್ತರ ಅಜ್ಞಾನವನ್ನು ಕಳೆದು ಜ್ಞಾನದ ಬೆಳಕು ನೀಡಬೇಕು. ಭಕ್ತರ ಬೇಡಿಕೆಯೇ ಈ ವ್ಯವಸ್ಥೆ ಕಲ್ಪಿಸುತ್ತಿತ್ತು.

ಋತುರಾಜ ವಸಂತ, ವಸಂತ ಋತುವಿನ ರಾಜ. ಚೈತ್ರ ಮಾಸ  “ಋತೂನಾಂ ಕುಸುಮಾಕರಃ” ಎಂದು ಯೋಗಾಚಾರ್ಯ ಶ್ರೀ ಕೃಷ್ಣ ಗೀತೆಯಲ್ಲಿ ಉದ್ಗರಿಸಿದ್ದಾನೆ. ತಾನೇ ವಸಂತನೆಂದ ಮೇಲೆ ನಿಸರ್ಗದ ಮಡಿಲಲ್ಲಿ ಬೆಳೆದ ಪ್ರಾಚೀನರೇ ಧನ್ಯರು. ಚಿಗುರಿ ಅರಳಿ ಮತ್ತೆ ಜೀವ ಜೀವನವನ್ನೇ ಬೆಳಗುವುದು ಯುಗಾದಿ.

ಚೈತ್ರ ಮಾಸಕ್ಕೆ ಅಧಿದೇವ ಶ್ರೀವಿಷ್ಣು. ಚೈತ್ರಮಾಸ ವಸಂತ ಋತುವಿನ ಮೊದಲ ದಿನ. ಅದು ಪಾಡ್ಯ, ದ್ವಾಪರಯುಗ ಅಂತ್ಯಗೊಂಡು ಕಲಿ ಪ್ರವೇಶ  ಮಾಡಿದ ಮೊದಲ ದಿನ. ಯುಗಾಂತ್ಯವಾಗಿ ಯುಗಾರಂಭವಾದ್ದರಿಂದಲೇ ಪ್ರತಿ ಸಂವತ್ಸರದ ಮೊದಲ ದಿನ ಯುಗಾದಿ. ಅಂದು ಯುಗ ಪ್ರಾರಂಭದ ನೆನಪಿನ ಸಂಸ್ಮರಣೆಯ ಸುದಿನ. ಅದೇ ನಮಗೆ ಸಂಭ್ರಮ. ಅದೇ ಪರ್ವದಿನ. ಸೂರ್ಯನೇ ಕೆಂದ್ರ ಬಿಂದು. ಸಂಕ್ರಾಂತಿಯೇ ನೂತನ ವರ್ಷಾರಂಭಕ್ಕೆ ಮಹಾದ್ವಾರ. ದಕ್ಷಿಣಾಯನ ಕಳೆದು ಉತ್ತಾರಾಯಣದ ಶುಭಾರಂಭ ಸಂಕ್ರಾಂತಿ. ಪ್ರಾಕೃತಿಕ ಪರಿವರ್ತನೆಗಳನ್ನೂ ಗಮನಿಸಿ. ಹೊಸ ಧಾನ್ಯ ಮನೆತುಂಬಿದ ಪರಮಹರ್ಷೋಲ್ಲಾಸ ಕೃಷಿಕನಿಗೆ. ಚಳಿ ತನ್ನ ಮಾಯಾ ಜಾಲವನ್ನು ಕಳೆದುಕೊಳ್ಳುತ್ತಾ ರಥಸಪ್ತಮಿಯ ರವಿಯ ಉಗ್ರ ಪ್ರತಾಪಕ್ಕೆ ಮುನ್ನುಡಿ. ಶಿವರಾತ್ರಿಗೆ ಚಳಿ ಶಿವಶಿವ. ಸೂರ್ಯದೇವನನ್ನು ಒಂದು ಸುತ್ತು ಸುತ್ತುತ್ತಾ ಕಣ್ಣಾಮುಚ್ಚಾಲೆ ಆಡಲು ಭೂದೇವಿಗೆ ಒಂದು ವರುಷವೇ ಬೇಕು. ಗುರುವಿಗೆ 12 ವರ್ಷ, ಶನಿರಾಯನಿಗೆ 30 ವರ್ಷಗಳೇ ಬೇಕು. ಹೀಗಾಗಿ ಭೂಮಿ, ಬುಧ, ಶನಿಗ್ರಹಗಳು, ಒಂದೇ ಆರಂಭ ಬಿಂದುವಿಗೆ ಬರಲು 12 × 4 = 60 ವರ್ಷ ಬೇಕು. ನಮ್ಮ ಜ್ಯೋತಿರ್ವಿಜ್ಞಾನಿಗಳು 60 ಸಂವತ್ಸರಗಳ ನಿರ್ಣಯ ನೀಡಿದ್ದಾರೆ. ಖಗೋಳಶಾಸ್ತ್ರ ಭಾರತೀಯ ಪಂಚಾಂಗ ವಿಜ್ಞಾನ ಕಾಲಚಕ್ರದ ನಿರ್ಣಯಕ್ಕೆ ಸಿಂಹದ್ವಾರ. ಈಗ ಪ್ಲವಸಂವತ್ಸರ ಅಳಿದು ಶುಭಕೃತ್ ಸಂವತ್ಸರದ ಶೋಭಾಯಾತ್ರೆ ಆರಂಭಗೊಂಡಿದೆ.

ಸೌರಮಾನ ಮತ್ತು ಚಾಂದ್ರಮಾನ ಮಾಸ ತಿಥಿಗಳನ್ನು ನಿರ್ಧರಿಸುತ್ತದೆ. ಚಾಂದ್ರಮಾನದ ಪ್ರಕಾರ ಕರ್ನಾಟಕ, ಆಂಧ್ರಪ್ರದೇಶಗಳಲ್ಲಿ ಚೈತ್ರ ಪ್ರತಿಪತ್ ದಿನದಂದೇ ಯುಗಾದಿ. ಆದರೆ ಸೌರಮಾನ ಪಂಚಾಗದ ಅನುಯಾಯಿಗಳಾದ ತಮಿಳು ನಾಡಿನವರಿಗೆ “ಚಿತ್ತರೈ” ಅಂದರೆ ಮೇಷಮಾಸದ ಮೊದಲದಿನ ಹೊಸವರುಷ ಅದನ್ನು ಹರುಷದಿಂದಲೇ ಆಚರಿಸುತ್ತಾರೆ.

ಹಿಂದುಗಳಾದ ನಮಗೆಲ್ಲಾ ಯುಗಾದಿ ಪವಿತ್ರ ದಿನ. ಬದುಕಿನ ದಾರಿಯಲ್ಲಿ ಒಂದು ಮೈಲಿಗಲ್ಲು. ಅಲ್ಲೊಮ್ಮೆ ನಿಂತು ತಿರುಗಿ ನೋಡಬೇಕು. ಏಳು ಬೀಳು ಎಳ್ಳು ಬೆಲ್ಲ ಹೀಗೆ ಪರಾಮರ್ಶೆಗೆ, ಆತ್ಮಾವಲೋಕನಕ್ಕೆ ಬದುಕಿನ ಪುಟಗಳನ್ನು ತಿರುವಿ ಅವಲೋಕಿಸಿ ವಿರ್ಮಶಿಸುವುದಕ್ಕೆ ಸದವಕಾಶ. ಬಾಳ್ವೆಯ ನಾವೆ ಅಲೆಗಳ ಉಬ್ಬರವಿಳಿತಗಳನ್ನು ಎದುರಿಸಿ ಮುಂದೆ ಸಾಗಬೇಕಲ್ಲವೇ?

ಹಬ್ಬದ ಆಚರಣೆಯೂ ಬದುಕಿಗೆ ಸಂಸ್ಕಾರ ನೀಡುತ್ತದೆ. ವಿಶೇಷವಾದ ಸವಿಯಾದ ಊಟೋಪಚಾರವನ್ನು ಸವಿಯುವುದಲ್ಲ. ಅಂದು ಉಷ:ಕಾಲದಲ್ಲೇ ಎದ್ದು ಸೂರ್ಯೋದಯಕ್ಕೂ ಮೊದಲೇ ಜಗಚ್ಚಕ್ಷುವಾದ ಆದಿತ್ಯನ ಸ್ಮರಣೆ ಮಾಡಬೇಕು.

ನಮಸ್ಸವಿತ್ರೇ ಜಗದೇಕಚಕ್ಷುಷೇ
ಜಗತ್ಪ್ರಸೂತಿಸ್ಥಿತಿನಾಶಹೇತವೇ !
ತ್ರಯೀಮಯಾಯ ತ್ರಿಗುಣಾತ್ಮಧಾರಿಣೆ
ವಿರಿಂಚಿನಾರಾಯಣಶಂಕರಾತ್ಮನೇ !!

ತೈಲವನ್ನು ಲೇಪಿಸಿಕೊಂಡು ಅಭ್ಯಂಜನ ಮಾಡಬೇಕು. ಮನೆಯ ವಾಸ್ತು ಬಾಗಿಲಿಗೆ ಮಾವು ಬೇವುಪತ್ರೆಗಳಿಂದ ಸಿಂಗರಿಸಿ ಹೊಸ್ತಿಲಿನಲ್ಲಿ ಪೂಜೆ ಮಾಡಿ ಶ್ರೀಲಕ್ಷ್ಮಿಯನ್ನು ಸ್ವಾಗತಿಸಬೇಕು. ಪಂಚಾಂಗದ ಪೂಜೆ ಇಂದಿನ ವಿಶೇಷ. ಬೇವುಬೆಲ್ಲ ನೈವೇದ್ಯ ನಿವೇದಿಸಬೇಕು. ಬೇವುಬೆಲ್ಲವನ್ನು ಸ್ವೀಕರಿಸುವಾಗ ಈ ಪುಣ್ಯಶ್ಲೋಕವನ್ನು ಪಠಿಸಬೇಕು.

“ಶತಾಯುರ್ವಜ್ರದೇಹಾಯ ಸರ್ವಸಂಪತ್ಕರಾಯ ಚ !
ಸರ್ವಾರಿಷ್ಟ ವಿನಾಶಾಯ ನಿಂಬಕದಲಭಕ್ಷಣಮ್ !!

ಸರ್ವವಿಧವಾದ ಬಾಧೆ ತೊಲಗಲಿ ಸಂಪತ್ತು ಹರಿದು ಸದೃಢ ಆರೋಗ್ಯ ಬೆಳಗಲಿ, ಶತಾಯುಷ್ಯ ಬಂದೊದಗಲೆಂದು ಹಾರೈಸೋಣ. ಬೇವು ಸ್ವಭಾವತಃ ಕಹಿ ಸುಭಾಷಿತಕಾರನೊಬ್ಬ ಉಲಿಯುವಂತೆ ಸಕ್ಕರೆಯ ಕಟ್ಟೆ ಕಟ್ಟಿ, ಜೇನುತುಪ್ಪ ಸುರಿದರೂ ಬೇವು ಸಿಹಿಯಾಗದು. ಆದ್ದರಿಂದ ಬೇವು ಕಾರ್ಪಣ್ಯದ ಪ್ರತೀಕ. ಬೆಲ್ಲ ಸಿಹಿ ಸಂತಸದ ಪ್ರತೀಕ. ಬಾಳಲ್ಲೂ ಸಹ ಕಹಿಯನ್ನೆದುರಿಸುವ ಸಿಹಿಯನ್ನು ಆತ್ಮೀಯವಾಗಿ ಸವಿಯುವ ಮನಸ್ಸು ಸಜ್ಜಾಗಬೇಕು.

ಕ್ಯಾಲೆಂಡರನ್ನು ಅದರ ಹಾಳೆಯನ್ನು ತಿರುವಿಹಾಕಿದಂತೆ ನಮ್ಮ ಹೊಸವರ್ಷವಲ್ಲ. ಇದರ ಹೊಸ ಹರುಷದ ನವನವೋಲ್ಲಾಸದ ಪ್ರವೇಶ ಅಪರರಾತ್ರಿಯಲ್ಲಲ್ಲ. ರಕ್ಕಸ ಪ್ರವೃತ್ತಿ ಮಾತ್ರ ಜಾಗೃತವಾಗಿರುವ ಘನಾಂಧಕಾರ ಕವಿದ ತಾಮಸದ ನಡುರಾತ್ರಿಯಲ್ಲಿ ಯುಗಾದಿ ಮದವೇರಿದ ಮತ್ತಿನ ಮುಸುಕಿನ ಕರಾಳರಾತ್ರಿಯಲ್ಲಿ ಪ್ರವೇಶಿಸದು.

ಅದೇನಿದ್ದರೂ ಶುದ್ಧಸತ್ವ. ಸೂರ್ಯೋದಯವೇ ನಮಗೆಲ್ಲಾ
“ ಧಿಯೊ ಯೋ ನಃ ಪ್ರಚೋದಯಾತ್” ಸಂಜೆ,  ರಾತ್ರಿ ಮೊಗ್ಗಾದ ಕಮಲ ಸೂರ್ಯರಶ್ಮಿಯಿಂದ ಅರಳುವಂತೆ ಮೊಗ್ಗಾದ ನಮ್ಮ ಮನಸ್ಸೂ ಸಹ ಅರಳಬೇಕಿದೆ. ಆದ್ದರಿಂದ ಸಂಜೆ ಪಂಚಾಂಗ ಶ್ರವಣ, ಮಳೆ, ಬೆಳೆ, ಬೆಲೆ, ಗ್ರಹಣ, ಗ್ರಹಗತಿ ಮುಂತಾದುವೆಲ್ಲವನ್ನು ಪಂಚಾಂಗದಲ್ಲಿ ಉಲ್ಲೇಖಿಸಿದ್ದನ್ನು ಶ್ರವಣ ಮಾಡಿ ಆಪತ್ತು ಎದುರಿಸುವ, ಸಂಪತ್ತು ಗಳಿಸುವ ಮನಸ್ಸನ್ನು ಅಣಿಗೊಳಿಸುತ್ತದೆ. ಆದ್ದರಿಂದಲೇ ನಾವೆಲ್ಲಾ ಯುಗಾದಿಯಂದು ಸಂಭ್ರಮಿಸುತ್ತೇವೆ.

ಪ್ರಕೃತಿಯ ಹೊಸತನದೊಂದಿಗೆ, ಅದರ ಆಗು ಹೋಗುಗಳೊಂದಿಗೆ ನಮ್ಮ ಬಾಳ್ವೆಯೂ ಬೆಸೆದಿದೆ, ಹಾಸು ಹೊಕ್ಕಾಗಿ ಅಲಂಕಾರ ಶಾಸ್ತ್ರದ ಲಾಕ್ಷಣಿಕ ಗ್ರಂಥರತ್ನ “ಧ್ವನ್ಯಾಲೋಕ” ದಲ್ಲಿ ಲಾಕ್ಷಣಿಕ ಆನಂದವರ್ಧನಾಚಾರ್ಯ ಸೊಗಸಾದ ಮಾತನ್ನಾಡಿದ್ದಾನೆ. ಮನೆಯ ಮುಂದಿರುವ ಮರವೊಂದು ವಸಂತ ಋತುವಿನಲ್ಲಿ ನವವಧುವಿನಂತೆ ಸಿಂಗರಿಸಿಕೊಂಡು ಮನಸ್ಸಿಗೆ ಮುದ ನೀಡುತ್ತದೆ. ಮರ ಹೊಸತಲ್ಲ, ಅದೇ ಮರ, ಹಳೆಯ ಮರ. ಅದರ ನವನವೋನ್ಮೇಷ ಮಾತ್ರ ಹೃದಯಾಹ್ಲಾದಕ. ಹೃನ್ಮನಗಳನ್ನು ಹೊಸ ಚಿಗುರಿನಿಂದ ಹೂವಿನ ತೇರಿನಿಂದ ಸೆಳೆದು ಬೆರಗು ಮೂಡಿಸುತ್ತದೆ. ಶಶಿರ ಋತುವಿನಲ್ಲಿ ಹಣ್ಣಾದ ಎಲೆಗಳು ಉದುರಿ ಹೊಸ ಎಲೆಗಳು ಚಿಗುರುತ್ತವೆ. ವಸಂತದಲ್ಲಿ ನಳನಳಿಸಿ ಹೂವಿನಿಂದ ಸಿಂಗಾರಗೊಳ್ಳುತ್ತದೆ. ಆಗ ಬೀಸುವ ಮಾರುತವೂ ಅಷ್ಟೇ ಉನ್ಮಾದಕ, ಸುವಾಸಿತ, ಮೈಮನಗಳಿಗೆ ಉತ್ಸಾಹ, ಆಹ್ಲಾದ ನೀಡಿ ತಂಪೆರೆಯುತ್ತದೆ. ವಸಂತದಲ್ಲಿ ನಳನಳಿಸುವ ಸುವಾಸಿತ ಗಾಳಿ ಜಡಜೀವಿಯನ್ನು ಬಡಿದೆಬ್ಬಿಸಿ ನವಚೈತನ್ಯ ತುಂಬುವ ಸಂಜೀವಿನಿ. ಹಕ್ಕಿಗಳ ಕಲರವ, ಗಂಧರ್ವಗಾನ ಮಧುಮಧುರ. ಸಾರ್ಥಕ ಮಧುಮಾಸ. ಮುಕ್ತ ಕಂಠದಲ್ಲಿ ಹಾಡುವ ಕೋಗಿಲೆ. ಕಾಗೆಯೂ ಕಪ್ಪು ಕೋಗಿಲೆಯೂ ಸಹ. “ವಸಂತಕಾಲೇ ಸಂಪ್ರಾಪ್ತೆ ಕಾಕಃ ಕಾಕಃ ಪಿಕಃ ಪಕಃ”

ಹಿರಿಯ ಚೇತನ ಬಿ.ಎಂ.ಶ್ರೀ – ಹೀಗೆ ಹಾಡಿದ್ದಾರೆ.
“ವಸಂತ ಬಂದ ಋತುಗಳ ರಾಜ
ತಾ ಬಂದ ಚಿಗುರನು ತಂದ
ಚಳಿಯನು ಕೊಂದ ಹಕ್ಕಿಗಳುಲಿಗಳ ಚಂದ”

ಇಹದಿಂದ ಪರಕ್ಕೆ ಏಣಿ ಚಾಚಿದಂತೆ ಭಾಸವಾಗುತ್ತದೆ ಈ ಯುಗಾರಂಭ ಯುಗಾದಿ. ವಸಂತದ ಆರಂಭದ ದಿನವನ್ನು ಯುಗದ ಮೊದಲ ದಿನವೆಂದು ಭಾವಿಸಿ ಪರಮಾತ್ಮ-ಪ್ರಕೃತಿ-ಪುರುಷ ಸಂಬಂಧವನ್ನು ಬೆಸೆದಿರುವುದರಿಂದ ಲೌಕಿಕ ಮತ್ತು ಪಾರಮಾರ್ಥಿಕ ಒಂದಾದವು. ಚೈತ್ರಮಾಸದ ಮೊದಲ ದಿನ ಶ್ರೀಕೃಷ್ಣನ ದೇಹತ್ಯಾಗ,  ನಿರ್ಯಾಣವಾಗಿದೆ. ಬಿದಿಗೆ ಶ್ರೀಮನ್ನಾರಾಯಣನ ದಶಾವತಾರವಾದ ಸುದಿನ. ಯುಗಧರ್ಮಕ್ಕೆ ಅನುಗುಣವಾಗಿ ಪ್ರಕೃತಿಯಲ್ಲಿ ಜೀವೋತ್ಪತ್ತಿ ವಿಕಸಿತವಾದಂತೆ ಜಲಚರ ಮತ್ಸ್ಯ ರೂಪಿಯಾಗಿ ಹರಿಸರ್ವೋತ್ತಮ ವೇದ ವಾಙ್ಮಯವನ್ನು ಧರೆಗೆ ತಂದ ಪಾವನದ ದಿನ. ತದಿಗೆ ಗೌರಿಗೆ ವಿಶಿಷ್ಟ. ಚತುರ್ಥಿ ಗಣೇಶನಿಗೆ ಮೀಸಲು. ನಾಗದೇವತೆಗಳು ಪಂಚಮಿಯಂದು ಪೂಜೆ ಪುನಸ್ಕಾರಗಳನ್ನು ಸ್ವೀಕರಿಸುತ್ತವೆ. ಸ್ಕಂದ ಧರೆಗಿಳಿದಿದ್ದು ಷಷ್ಠಿ. ಸಪ್ತಮಿ ರಥಸಪ್ತಮಿಯಾಗಿ ಸೂರ್ಯಾರಾಧನೆ. ಅಷ್ಟಮಿ ಸಪ್ತಮಾತೃಕೆಯರಿಗೂ, ದುರ್ಗೆಗೂ ಪ್ರಿಯ. ನವಮಿ ಮರ್ಯಾದಾ ಪುರುಷೋತ್ತಮ, ಧರ್ಮಮೂರ್ತಿ ಶ್ರೀ ರಾಮನದು.

ಚೈತ್ರದ ಮತ್ತೊಂದು ಹೆಸರೇ ಮಧುಮಾಸ. ಹೆಸರೇ ಆಪ್ಯಾಯಮಾನ. ಜೇನಿನಷ್ಟು ಮಧು ಮಧುರ ಸ್ವಾದಿಷ್ಟ. ಬೇಸಿಗೆಯ ಹೆಬ್ಬಾಗಿಲು ಇದು. ಕೆರೆ, ಸರೋವರ, ಜಲರಾಶಿಗಳು ಬತ್ತಲಾರಂಭಿಸುತ್ತವೆ. ಜೀವಧಾತು ಜೀವಜಲ,  ಜನತೆ, ಪಶು, ಪಕ್ಷಿ, ಜೀವ ಜಂತುಗಳಿಗೆ ನೀರುಣಿಸುವುದು ಪರಮ ಪಾವನ. ಪ್ರಯಾಣಿಕರಿಗೆ ಅರವಟ್ಟಿಗೆಗಳನ್ನು ವ್ಯವಸ್ಥೆಗೊಳಿಸಿದ್ದು ಇತಿಹಾಸದಿಂದಲೂ ಇದೆ.

ಚೈತ್ರಪೌರ್ಣಮೀ ವೈಶಾಖಸ್ನಾನದ ಆರಂಭದ ದಿನ. ಬ್ರಾಹ್ಮೀ ಮುಹೂರ್ತದಲ್ಲಿ ಸ್ನಾನ ಶ್ರೇಯಸ್ಕರ.

“ವೈಶಾಖಂ ಸಕಲಂ ಮಾಸಂ
ಪ್ರಾತಃ ಸನಿಯಮಃ ಸ್ನಾಸ್ಯೆ!”

ಬೇಸಿಗೆಯ ಬಿರುಬಿಸಿಲು ಸೆಖೆ ಇರುವುದರಿಂದ ತಣ್ಣೀರು ಸ್ನಾನ ಆಪ್ಯಾಯಮಾನ.
ಭರತಭೂಮಿಯ ಪ್ರತಿ ಕಣವೂ ಪವಿತ್ರ. ನಮ್ಮ ಪ್ರತಿ ಆಚರಣೆಗೂ ಒಂದು ಐತಿಹ್ಯವಿದೆ. ಕುರುಡಾಗಿ ಬರಡಾಗಿ ಆಚರಿಸುವುದಲ್ಲ. ಸರ್ವವೂ ನಶಿಸುತ್ತಿರುವ, ಸಂಸ್ಕೃತಿ – ಸಂಸ್ಕಾರಗಳಿಗೆ ಕೊಡಲಿಯ ಏಟೇ ಬೀಳುತ್ತಿರುವುದು. ಕಾಲ ಮಾನ, ಯುಗಧರ್ಮ ಅರಿತು ಬೆರೆತು ಆಚರಿಸಿದರೆ ಬದುಕು ಹೆಚ್ಚು ಸಾರ್ಥಕ, ಅರ್ಥಪೂರ್ಣ.
ಶುಭವಾಗಲಿ.

ವಿದ್ವಾನ್ ಜಿ.ಎಸ್. ಗಣಪತಿ ಭಟ್ಟ
ಸಂಸ್ಕೃತ ಪಂಡಿತರು, ಚಿತ್ರದುರ್ಗ.
9448948486

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!