ಬೆಂಗಳೂರು: ಇಂದು 2022-23 ರಾಜ್ಯ ಬಜೆಟ್ ಮಂಡನೆಯಾಗಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರ ಚೊಚ್ಚಲ ಬಜೆಟ್ ಬಗ್ಗೆ ಜೆಡಿಎಸ್ ನಾಯಕ ಟಿ ಎ ಶರವಣ ಟೀಕೆ ಮಾಡಿದ್ದಾರೆ. ಇದೊಂದು ಜೊಳ್ಳು ಬಜೆಟ್ ಎಂದು ವ್ಯಂಗ್ಯವಾಡಿದ್ದಾರೆ.
ಕೃಚು, ಕೈಗಾರಿಕೆ, ಸಮಾಜಕಲ್ಯಾಣ, ಶಿಕ್ಷಣ, ನೀರಾವರಿ, ಈ ಪ್ರಮುಖ ವಲಯದಲ್ಲಿ ಯಾವುದೇ ಹೊಸ ಯೋಜನೆಯನ್ನು ಮಾಡಿಲ್ಲ. ಬದಲಿಗೆ ಇರುವ ಯೋಜನೆಗಳಿಗೆ ಹಣ ಹೊಂದಾಣಿಕೆ ಮಾಡಲಾಗಿದೆ. ಇಲಾಖಾವಾರು ವಿವರ ನೀಡದೆ ಕೇವಲ ಅಂಕಿ ಅಂಶಗಳ ಚಮತ್ಕಾರ ಮಾಡಿದೆ. ರೈತರ ಸಾಲಾ ಯೋಜನೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ವಿಸ್ತರಿಸಿಲ್ಲ. ಇದೊಂದು ಪುಸ್ತಕದ ಲೆಕ್ಕಾಚಾರದ ಜೊಳ್ಳು ಬಜೆಟ್ ಆಗಿದೆ ಎಂದಿದ್ದಾರೆ.
ಅಂಗನವಾಡಿ, ಬಿಸಿಯೂಟ ನೌಕರರಿಗೂ ಕಡಿಮೆ ವೇತನ ಹೆಚ್ಚಿಸಿದ್ದಾರೆ. ಮೇಕೆದಾಟು ಯೋಜನೆಗೆ, ತುಂಗಭದ್ರಾ ಹೂಳೆತ್ತುವ ಯೋಜನೆ, ಮಹದಾಯಿ ಯೋಜನೆ, ಈ ಯೋಜನೆಗಳಿಗೆ ಸರ್ಕಾರ ನಿಗದಿ ಪಡಿಸಿರುವ ಹಣ ಕಣ್ಣೊರೆಸುವ ತಂತ್ರವಾಗಿದೆ. ಕಾರ್ಮಿಕರಿಗೆ, ಕೃಷಿ ಕೂಲಿಕಾರರಿಗೆ, ಸರ್ಕಾರದಿಂದ ಯಾವುದೇ ನೆರವು ಘೋಷಿಸಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.