ಚಿತ್ರದುರ್ಗ, (ಫೆ.22): ಕಟ್ಟಡ ಕಾರ್ಮಿಕರಲ್ಲದವರು ಗುರುತಿನ ಚೀಟಿ ಪಡೆಯುತ್ತಿರುವುದಕ್ಕೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಆಪಾದಿಸಿದರು.
ಪ್ರವಾಸಿ ಮಂದಿರದಲ್ಲಿ ಮಂಗಳವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ನಕಲಿ ಕಟ್ಟಡ ಕಾರ್ಮಿಕರು ನೊಂದಣಿ ಮಾಡಿಸಿಕೊಂಡು ಗುರುತಿನ ಚೀಟಿ ಪಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ.
ವರದಿ ಬಂದ ಮೇಲೆ ನಕಲಿ ಗುರುತಿನ ಚೀಟಿಗಳನ್ನು ನೀಡಿರುವವರ ವಿರುದ್ದ ಕ್ರಮ ಕೈಗೊಳ್ಳುವುದಾಗಿ ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ವಿಧಾನಸಭೆ ಕಲಾಪದಲ್ಲಿ ಶಾಸಕ ಡಾ.ತಳವಾರ ಪ್ರಶ್ನೆಗೆ ಉತ್ತರಿಸಿರುವುದನ್ನು ನೋಡಿದರೆ ಅನರ್ಹರಿಗೂ ಕಾರ್ಮಿಕ ಇಲಾಖೆಯಲ್ಲಿ ಗುರುತಿನ ಚೀಟಿ ನೀಡಿರುವುದನ್ನು ಸ್ವತಃ ಕಾರ್ಮಿಕ ಸಚಿವರೆ ಒಪ್ಪಿಕೊಂಡಂತಾಗಿದೆ.
ಮುಂದಿನ ದಿನಗಳಲ್ಲಿ ನಕಲಿ ಗುರುತಿನ ಚೀಟಿಗಳನ್ನು ರದ್ದುಪಡಿಸಿ ನಿಜವಾದ ಕಟ್ಟಡ ಕಾರ್ಮಿಕರಿಗೆ ಸರ್ಕಾರದಿಂದ ಸೌಲಭ್ಯಗಳನ್ನು ಒದಗಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಒಂದೊಂದು ಮನೆಯಲ್ಲಿ ಮೂರು ಮೂರು ಕಟ್ಟಡ ಕಾರ್ಮಿಕರ ನಕಲಿ ಗುರುತಿನ ಚೀಟಿಗಳು ಪತ್ತೆಯಾಗಿದೆ. ಸಾಮಾನ್ಯ ಸೇವಾ ಕೇಂದ್ರ ಹಾಗೂ ಮೊಬೈಲ್‌ಗಳಲ್ಲಿ ನೊಂದಣಿಗೆ ಅರ್ಜಿ ಹಾಕಲು ಅವಕಾಶ ಮಾಡಿರುವುದರಿಂದ ನಕಲಿ ಗುರುತಿನ ಚೀಟಿ ಪಡೆಯುವವರ ಹಾವಳಿ ಜಾಸ್ತಿಯಾಗಿದೆ.
ಜಿಲ್ಲೆಯಲ್ಲಿ ನೊಂದಣಿಯಾಗಿರುವ ಒಂದು ಲಕ್ಷ ಹನ್ನೊಂದು ಸಾವಿರ ಗುರುತಿನ ಕಾರ್ಡ್ಗಳಲ್ಲಿ ಅರ್ಧಕ್ಕರ್ಧ ಬೋಗಸ್ ಇದೆ. ಕಟ್ಟಡ ಕಾರ್ಮಿಕರಿಗೆ ತಲೆ ಮೇಲೆ ಸೂರು ಇಲ್ಲದಂತಾಗಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿರುವ ಸೆಸ್ ಹಣ ಕಾರ್ಮಿಕರಿಗೆ ಮಾತ್ರ ಬಳಕೆಯಾಗಬೇಕು. ಕಾರ್ಮಿಕರ ಸೆಸ್ ಹಣ ಒಂಬತ್ತು ಸಾವಿರ ಕೋಟಿ ರೂ.ಗಳು ಬಿಜೆಪಿ.ಅಧಿಕಾರಕ್ಕೆ ಬಂದಾಗಿನಿಂದಲೂ ಕರಗುತ್ತಿದೆ.
ಪ್ರತಿಷ್ಠಿತ ಕಟ್ಟಡಗಳನ್ನು ಹೊಂದಿರುವವರಿಂದ ಹತ್ತು ಸಾವಿರ ಕೋಟಿ ರೂ.ಸೆಸ್ ಹಣ ಬರಬೇಕಿದೆ. ಸರ್ಕಾರ ವಸೂಲಿಗೆ ಮುಂದಾಗಿಲ್ಲ. ಇದರಿಂದ ನಿಜವಾದ ಕಟ್ಟಡ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಆರಂಭವಾಗಿ ಹದಿನೈದು ವರ್ಷಗಳಾದರೂ ನಿಜವಾದ ಕಾರ್ಮಿಕರು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕಾರ್ಮಿಕ ಸಚಿವರು ಈ ವಿಚಾರವನ್ನು ಗಂಭೀರಾಗಿ ಪರಿಗಣಿಸಿ ನಕಲಿ ಗುರುತಿನ ಚೀಟಿ ಪಡೆದಿರುವವರ ವಿರುದ್ದ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಮಂಜುನಾಥ್ ಜೆ, ರಾಜ್ಯ ಉಪಾಧ್ಯಕ್ಷರುಗಳಾದ ಎಂ.ಆರ್.ನರಸಿಂಹಸ್ವಾಮಿ, ನಾದಿ ಆಲಿ, ಖಜಾಂಚಿ ಡಿ.ಈಶ್ವರಪ್ಪ, ಇಮಾಮ್ ಮೊಹಿದ್ದೀನ್, ರಾಜಣ್ಣ ಹಳಿಯೂರು, ಮುಜೀಬುಲ್ಲಾ, ರಾಜಣ್ಣ ಕುರುಬರಹಳ್ಳಿ, ತಿಪ್ಪೇಸ್ವಾಮಿ ಟಿ, ಸತೀಶ್ ಎಸ್, ಕಟ್ಟಡ ಕಾರ್ಮಿಕರ ಮುಖಂಡ ಹಾಗೂ ಅನ್ನೆಹಾಳ್ ಗ್ರಾಮ ಪಂಚಾಯಿತಿ ಸದಸ್ಯ ತಿಮ್ಮಯ್ಯ, ಫೈರೋಜ್, ಗೌಸ್‌ಖಾನ್, ರಘು, ಹೇಮಂತಣ್ಣ, ಮಹಂತೇಶಣ್ಣ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.