ಪಣಜಿ: ಸಿಡಿ ಪ್ರಕರಣದಲ್ಲಿ ಸಿಲುಕಿ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಮತ್ತೆ ಸಚಿವರಾಗಲೂ ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಆದ್ರೆ ಈ ಮಧ್ಯೆ ಗೋವಾದಲ್ಲಿ ಕಂಡ ರಮೇಶ್ ಜಾರಕಿಹೊಳಿ ಅವರನ್ನ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ಮಾತಾಡಿಸಿದ್ದಾರೆ.
ಸದ್ಯ ಗೋವಾ ಚುನಾವಣೆಯ ಪ್ರಚಾರದಲ್ಲಿ ಬಿಜೆಪಿ ಬ್ಯುಸಿಯಾಗಿದೆ. ಅಮಿತ್ ಶಾ, ಬಿಚೋಲಿಮ್, ಸಾಕ್ಲಿ, ಮಾಯೇಮ್ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಮನೆ ಮನೆಗೆ ತೆರಳಿ ಬಿಜೆಪಿ ಗೆಲ್ಲಿಸಲು ಮನವಿ ಮಾಡುತ್ತಿದ್ದಾರೆ. ಈ ವೇಳೆ ಬಿಚೋಲಿಂ ನಲ್ಲಿ ಅಮಿತ್ ಶಾ ಅವರನ್ನ ಭೇಟಿಯಾಗಲು ರಮೇಶ್ ಜಾರಕಿಹೊಳಿ ಹೋಗಿದ್ದು, ಅಮಿತ್ ಶಾ ಅವರೇ ಜಾರಕಿಹೊಳಿಯನ್ನ ಗುರತಿಸಿ ಮಾತಾಡಿಸಿದ್ದಾರೆ.
ಜಾರಕಿಹೊಳಿ ಇದರ್ ಆವೋ ಎಂದು ಮಾತಾಡಿಸಿದ್ದಾರೆ. ಈ ವೇಳೆ ಅಮಿತ್ ಶಾ ಅವರ ಪ್ರಚಾರದಲ್ಲಿ ರಮೇಶ್ ಜಾರಕಿಹೊಳಿ ಕೂಡ ಭಾಗಿಯಾಗಿದ್ದರು. ಮತ್ತೆ ಅದೇ ದಿನ ಔತಣಕೂಟದಲ್ಲೂ ರಮೇಶ್ ಜಾರಕಿಹೊಳಿ ಜೊತೆಯಾಗಿದ್ದರು.
ಇನ್ನು ಗೋಕಾಕ್ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಗಟ್ಟಿ ಬಸವಣ್ಣ ಡ್ಯಾಂ ಕಾಮಗಾರಿಗೆ ಚಾಲನೆ ನೀಡಲು ಅಮಿತ್ ಶಾ ಅವರನ್ನ ಆಹ್ವಾನ ಮಾಡಲಾಗಿದೆ. ಆಗಲೂ ಬರ್ತೇನೆ ಬರ್ತೇನೆ ಎಂದಿದ್ದಾರೆ. ರಮೇಶ್ ಜಾರಕಿಹೊಳಿ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಸಾಕಷ್ಟು ಕಸರತ್ತು ನಡೆಸುತ್ತಿದ್ದಾರೆ. ಹೈಕಮಾಂಡ್ ಭೇಟಿಯಾಗಿ, ಸಂಪುಟ ವಿಸ್ತರಣೆ ವೇಳೆ ಮತ್ತೆ ಲಾಭ ಪಡೆಯುವ ಹಾದಿಯಲ್ಲಿ ಸಾಗುತ್ತಿದ್ದಾರೆ.