ಬಳ್ಳಾರಿ,(ಫೆ.06) : ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡುವ ವಿಷಯದಲ್ಲಿ ಒಂದು ತಿಂಗಳೊಳಗೆ ವಿಮ್ಸ್ ಆಸ್ಪತ್ರೆಯಲ್ಲಿ ಸುಧಾರಣೆಯಾಗದಿದ್ದರೇ ನನ್ನದೇ ಕ್ರಮಕೈಗೊಳ್ಳಬೇಕಾಗುತ್ತದೆ.
ಹೀಗೆಂದು ವಿಮ್ಸ್ ನ ಅಧಿಕಾರಿಗಳಿಗೆ ಎಚ್ಚರಿಕೆಯ ಗಡುವು ನೀಡಿದ್ದು, ಸಾರಿಗೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಶನಿವಾರ ಬೆಳಗ್ಗೆ ದಿಢೀರ್ ವಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿ ರೋಗಿಗಳ ಅಹವಾಲು ಆಲಿಸಿದ್ದ ಹಾಗೂ ವ್ಯವಸ್ಥೆ ಕಣ್ಣಾರೆ ಕಂಡಿದ್ದ ಸಚಿವ ಶ್ರೀರಾಮುಲು ಅವರು ಭಾನುವಾರ ವಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಆಸ್ಪತ್ರೆಯ ನಿರ್ದೇಶಕರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರ ಸಭೆ ಕರೆದು ವಿಮ್ಸ್ನಲ್ಲಿರುವ ಸಮಸ್ಯೆಗಳು ಮತ್ತು ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮಾರ್ಗಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅವರು ಮಾತನಾಡಿದರು.
ಕರ್ನಾಟಕ ಮತ್ತು ಆಂಧ್ರಪ್ರದೇಶದ ನಿತ್ಯ ಸಾವಿರಾರು ಜನರು ಈ ಆಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಿದ್ದು,ಈ ಆಸ್ಪತ್ರೆಯಲ್ಲಿ ಬದಲಾವಣೆ ತರಬೇಕು ಮತ್ತು ಪರಿಣಾಮಕಾರಿಯಾದ ಚಿಕಿತ್ಸೆ ಜನರಿಗೆ ದೊರಕಬೇಕು ಎನ್ನುವ ಉದ್ದೇಶದಿಂದ ಶನಿವಾರ ಭೇಟಿ ನೀಡಿ ಪರಿಶೀಲಿಸಿ ಮತ್ತು ಭಾನುವಾರ ಸಭೆ ಮಾಡುತ್ತಿದ್ದೇನೆ ಎಂದು ಅವರು ತಿಳಿಸಿದರು.
ಈ ವಿಮ್ಸ್ ಆಸ್ಪತ್ರೆ 1100 ಹಾಸಿಗೆಗಳಿಂದು ಕೂಡಿದ್ದು,550 ಹಾಸಿಗೆಗಳ ಬಿಲ್ಡಿಂಗ್ ಶಿಥೀಲಗೊಂಡಿದ್ದು,ಅದನ್ನು ಡೆಮಾಲಿಶ್ ಮಾಡಿ; ಹೊಸದಾಗಿ ನಿರ್ಮಾಣಕ್ಕೆ ಸರಕಾರದ ನೆರವು ಪಡೆಯಲಾಗುವುದು ಎಂದರು.
ವೈದ್ಯರು ಮತ್ತು ಅಗತ್ಯ ಸಿಬ್ಬಂದಿಗಳು ಸಕಾಲಕ್ಕೆ ಆಸ್ಪತ್ರೆಯಲ್ಲಿ ಲಭ್ಯವಿದ್ದು,ಜನರಿಗೆ ಚಿಕಿತ್ಸೆ ನೀಡಬೇಕು ಮತ್ತು ಔಷಧಿಗಳ ಸಮಸ್ಯೆ ಬಾರದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.
ವಿಮ್ಸ್ ಆಸ್ಪತ್ರೆಯಲ್ಲಿರುವ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಶ್ರೀರಾಮುಲು ಅವರು ವಿಮ್ಸ್ನಲ್ಲಿ ಆಗುತ್ತಿರುವ ಸಮಸ್ಯೆಗಳಾದರೂ ಏನು..? ಎಂದು ಪ್ರಶ್ನಿಸಿದ ಅವರು ಏನು ಮಾಡಿದರೂ ನಡೆಯುತ್ತದೆ ಅಂತ ತಿಳಿದುಕೊಂಡರೇ ನಡೆಯುವುದಿಲ್ಲ;ನಾವು
ಕಣ್ಮುಚ್ಚಿಕೊಂಡು ಕುಳಿತುಕೊಳ್ಳುವುದಕ್ಕೆ ಬಂದಿಲ್ಲ ಎಂದರು.
ಆಸ್ಪತ್ರೆಯ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು;ತಮ್ಮ ಮನೆಯ ರೀತಿಯಲ್ಲಿ ಇದನ್ನು ಚೊಕ್ಕವಾಗಿಟ್ಟುಕೊಳ್ಳಿ ಎಂದು ಅವರು ಹೇಳಿದ ಸಚಿವರು ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸಿ;ತಮಗೆ ಬೇಕಾದ ಸಂಪೂರ್ಣ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದರು.
ವಿಮ್ಸ್ ಆಸ್ಪತ್ರೆಯ ನಿರ್ದೇಶಕರಿಗೆ ಎಲ್ಲ ಜವಾಬ್ದಾರಿಗಳನ್ನು ವಹಿಸುವುದಕ್ಕಾಗುವುದಿಲ್ಲ. ಆಸ್ಪತ್ರೆಯಲ್ಲಿರುವ ವಿವಿಧ ವಿಭಾಗಗ ಮುಖ್ಯಸ್ಥರಿಗೆ ಅವರವರ ವಿಭಾಗದ ಆರೋಗ್ಯ ಸಿಬ್ಬಂದಿ ಮತ್ತು ಗ್ರೂಪ್ ಡಿ ಸಿಬ್ಬಂದಿ ವಹಿಸಬೇಕು; ಅವರ ಉಪಸ್ಥಿತಿ ಮತ್ತು ಚಿಕಿತ್ಸೆ;ದೂರು ಬರದಂತೆ ಕ್ರಮ ವಹಿಸಬೇಕು ಮತ್ತು ಇಲ್ಲಿನ ಹೊರಗುತ್ತಿಗೆ ಸಿಬ್ಬಂದಿಯ ಸಂಬಳ ಮತ್ತು ಪಿಎಫ್ ಹಾಗೂ ಇಎಸ್ಐ ಸಮರ್ಪಕವಾಗಿ ತುಂಬಲಾಗುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಅವರು ಸಚಿವರಿಗೆ ವಿವರಿಸಿದರು.
ವಿಮ್ಸ್ ಆಸ್ಪತ್ರೆಯಲ್ಲಿರುವ ವೈದ್ಯರು ಬೆಳಗ್ಗೆ ಆಸ್ಪತ್ರೆಗೆ ಬಂದು ಹಾಜರಿ ಹಾಕಿ;ಅವರವರ ಕ್ಲಿನಿಕ್ಗೆ ಹೋಗುತ್ತಿದ್ದಾರೆ;ಇದರಿಂದಲೇ ಸಮಸ್ಯೆಯಾಗುತ್ತಿದೆ.ಇದನ್ನು ಎಚ್ಒಡಿಗಳು ಅರ್ಥಮಾಡಿಕೊಂಡರೇ ಯಾವುದೇ ಸಮಸ್ಯೆಗಳಾಗಲ್ಲ ಎಂದು ಅವರು ಹೇಳಿದರು.
ವಿಮ್ಸ್ ಆಸ್ಪತ್ರೆಯ ವೈದ್ಯರು,ಸಿಬ್ಬಂದಿಗಳು ಮತ್ತು ಹೊರಗುತ್ತಿಗೆ ಸಿಬ್ಬಂದಿಗಳ ಅಹವಾಲುಗಳನ್ನು ಸಹ ಸಚಿವ ಶ್ರೀರಾಮುಲು ಅವರು ಇದೇ ಸಂದರ್ಭದಲ್ಲಿ ಆಲಿಸಿದರು.
ಈ ಸಂದರ್ಭದಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ, ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ವಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ, ಬುಡಾ ಅಧ್ಯಕ್ಷ ಪಾಲನ್ನ,ಮಾಜಿ ಸಂಸದೆ ಜೆ.ಶಾಂತಾ, ಮಹಾನಗರ ಪಾಲಿಕೆ ಸದಸ್ಯರು ಹಾಗೂ ವಿಮ್ಸ್ ಆಸ್ಪತ್ರೆಯ ವಿವಿಧ ವಿಭಾಗಗಳ ವೈದ್ಯರು ಮತ್ತು ಸಿಬ್ಬಂದಿ ಇದ್ದರು.