ಕಾಂಗ್ರೆಸ್ ಹಿರಿಯ ನಾಯಕ ಸಿಎಂ ಇಬ್ರಾಹಿಂ ಕಾಂಗ್ರೆಸ್ ಗೆ ಗುಡ್ ಬೈ ಹೇಳಿದ್ದಾರೆ. ಇದಕ್ಕೆ ಬಿಜೆಪಿ ಸರಣಿ ಟಾಂಗ್ ಕೊಟ್ಟಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗುವ ಭ್ರಮೆಯಿಂದ ಗಾಜಿನ ಮನೆಯಲ್ಲಿ ಕುಳಿತು ಕಲ್ಲುಹೊಡೆಯುತ್ತಿದ್ದರು. ಈಗ ಆ ಕಲ್ಲನ್ನು ಇಬ್ರಾಹಿಂ ಅವರು ತಿರುಗಿಸಿ ಸಿದ್ದರಾಮಯ್ಯ ಅವರ ಗಾಜಿನ ಮನೆಗೆ ಎಸೆದಿದ್ದಾರೆ. ಸಿದ್ದರಾಮಯ್ಯ ಅವರೇ, ಅವರಿವರು ಬರುತ್ತಾರೆ ಎಂಬ ಭ್ರಮೆಯಿಂದ ಹೊರಗೆ ಬನ್ನಿ. ನಿಮ್ಮವರನ್ನು ಉಳಿಸಿಕೊಳ್ಳಿ.
ಸಿದ್ದರಾಮಯ್ಯನವರ ಜೊತೆಗೆ ಜನತಾ ಪರಿವಾರದ ಮಹದೇವಪ್ಪ, ಇಬ್ರಾಹಿಂ, ಉಗ್ರಪ್ಪ ಮೊದಲಾದವರು ಕಾಂಗ್ರೆಸ್ ಪಕ್ಷಕ್ಕೆ ಬಂದರು. #ಕಾಂಗ್ರೆಸ್‌ಕಲಹ ದಿಂದಾಗಿ ಅವರ್ಯಾರು ಈಗ ಸಿದ್ದರಾಮಯ್ಯ ಜೊತೆ ಉಳಿದಿಲ್ಲ. ಸ್ವಾರ್ಥಕ್ಕಾಗಿ ತಮ್ಮ ಗೆಳೆಯರ ಕತ್ತನ್ನೇ ಅವರು ಕೊಯ್ದಿದ್ದಾರೆ. ಜೆಡಿಎಸ್ ಪಕ್ಷದಿಂದ ಉಚ್ಛಾಟಿಸಿದ್ದೇಕೆ ಎಂಬುದಕ್ಕೆ ಈಗ ಉತ್ತರ ಸಿಗುತ್ತಿದೆ.
ಇಬ್ರಾಹಿಂ ಅವರ ರಾಜೀನಾಮೆಯೊಂದಿಗೆ ಸಿದ್ದರಾಮಯ್ಯನವರ ಅಹಿಂದ ಮುಖ ಕಳಚಿ ಬಿದ್ದಿದೆ. ಅಲ್ಪಸಂಖ್ಯಾತ ನಾಯಕ ಹಾಗೂ ತಮ್ಮ ಗೆಳೆಯನಿಗೆ ಕೊಟ್ಟ ಭರವಸೆಯನ್ನೇ ನೀವು ಈಡೇರಿಸುವಲ್ಲಿ ಅಸಮರ್ಥರಾಗಿದ್ದೀರಿ. ಹೀಗಿರುವಾಗ ನಿಮ್ಮ ನಾಯಕತ್ವ ನಂಬಿ ಅನ್ಯಪಕ್ಷದವರು ಬರುತ್ತಾರೆಯೇ?.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಬೆಳೆದ ಪರಿಸರವೇ ಬೇರೆ, ನಮ್ಮದು ಬೇರೆ. ಅವರ ಚಿಂತನೆಗಳೇ ಬೇರೆ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಪಕ್ಷ ಬಿಡುವುದಕ್ಕೆ ಮುನ್ನ ಡಿಕೆಶಿಯವರ ಪರಿಸರ ಮಹಾತ್ಮೆಯನ್ನು ಇನ್ನಷ್ಟು ವಿವರಿಸಬಹುದಿತ್ತಲ್ಲವೇ?.
ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ಮುಖಂಡ ಸಿ.ಎಂ.ಇಬ್ರಾಹಿಂ ಪಕ್ಷ ತ್ಯಜಿಸುವ ನಿರ್ಧಾರ ಮಾಡಿದ್ದಾರೆ. ಅಲ್ಪಸಂಖ್ಯಾತರಿಗೂ ಉಸಿರುಗಟ್ಟಿಸುವಂಥ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿ ಇದೆಯೆಂದಾದರೆ ಆ ಪಕ್ಷ ಕೇವಲ ಪ್ರಭಾವಿಗಳು ಹಾಗೂ ಗುಲಾಮರ ಕೂಟ ಎಂಬುದು ಸಾಬೀತಾದಂತಾಯಿತಲ್ಲವೇ?.
ಕಾಂಗ್ರೆಸ್ ಪರಿಸ್ಥಿತಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಾಂಗ್ರೆಸ್ ಸೇರುವವರ ಪಟ್ಟಿ ನಮ್ಮಲ್ಲಿದೆ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರೇ, ಮೊದಲು ನಿಮ್ಮ ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ. #ಕಾಂಗ್ರೆಸ್‌ಕಲಹ ದಿಂದಾಗಿ ಇಬ್ರಾಹಿಂ ಅವರು ಪಕ್ಷ ತೊರೆಯುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಬೀಗ ಜಡಿಯುವ ಸಮಯ ದೂರವೇನಿಲ್ಲ ಎಂದು ಟ್ವೀಟ್ ಮಾಡಿದೆ.