ಟರ್ಕಿಯಲ್ಲಿ ಭೂಕಂಪನ ದಿನೇ ದಿನೇ ಪ್ರಬಲವಾಗುತ್ತಿದೆ. ಮನೆಗಳು ಕುಸಿಯುತ್ತಿವೆ, ರಸ್ತೆಗಳು ಬಾಯ್ಬಿಡುತ್ತಿವೆ. ಜೀವಗಳು ಲೆಕ್ಕವಿಲ್ಲದ್ದಷ್ಟು ಹಾರಿ ಹೋಗುತ್ತಿವೆ. ಭೂಕಂಪದ ಹೊಡೆತಕ್ಕೆ ಸಿಲುಕಿ ಸುಮಾರು ಈಗಾಗಲೇ 7800 ಜನ ಅಸುನೀಗಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಟರ್ಕಿಯ ಭೂಕಂಪದ ನಡುವೆ ವಿಡಿಯೋವೊಂದು ಹರಿದಾಡುತ್ತಿದ್ದು, ಎಂಥ ಕಲ್ಲು ಹೃದಯವೇ ಆದರೂ ಕಣ್ಣೀರು ತರಿಸುತ್ತೆ. ಏಳು ವರ್ಷದ ಪುಟಾಣಿ ಬಾಲಕಿ ಅವಶೇಷಗಳಡಿ ತನ್ನ ತಮ್ಮನನ್ನು ರಕ್ಷಿಸಿದ್ದಾಳೆ. ಸಿಮೆಂಟ್ ಚಪ್ಪಡಿ ಬಿದ್ದಾಗಲೂ ಅದು ತಮ್ಮನ ಮೇಲೆ ಬೀಳದಂತೆ ಕಾಪಾಡಿದ್ದಾಳೆ. ಅದು ಒಂದು ಎರಡು ಗಂಟೆಯಲ್ಲ ಸುಮಾರು 17 ಗಂಟೆಗಳ ಕಾಲ.
ಕಾಪಾಡಿದ ಅಕ್ಕನಿಗೂ ದೊಡ್ಡ ವಯಸ್ಸೇನು ಅಲ್ಲ. ಒಂದು ಕೊಡ ಬಿಂದಿಗೆಯನ್ನು ಎತ್ತುವುದಕ್ಕೆ ಆಗದಷ್ಟು ವಯಸ್ಸದು. ಬರೀ ಏಳು ವರ್ಷ. ಆಯಸ್ಸು ಮುಗಿಯದೆ ಇದ್ದರೆ ಬಂಡೆ ಕಲ್ಲು ಬಿದ್ದರು ಏನು ಆಗುವುದಿಲ್ಲ. ಆಯಸ್ಸು ಮುಗಿದಿದ್ದರೇ ಹುಲ್ಲು ಕಡ್ಡಿಯೇ ಸಾಕು ಪ್ರಾಣ ಹೋಗುವುದಕ್ಕೆ ಅಂತಾರಲ್ಲ ಹಾಗೇ ಇದು ಒಂದು ಉದಾಹರಣೆಯೇ ಆಗಿದೆ.
ಅಲ್ಲಿನ ಸರ್ಕಾರ ಅವಶೇಷದಡಿ ಸಿಲುಕಿದವರನ್ನು ಕಾಪಾಡುತ್ತಿದೆ. ರಕ್ಷಣಾ ಕಾರ್ಯ ಮುಂದುವರೆದಿದೆ. ದಿನೇ ದಿನೇ ಸಾಯುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಟ್ಟಡಗಳು ಕುಸಿದು ಬೀಳುತ್ತಿರುವುದು ನೋಡುಗರ ಕಣ್ಣಿಗೆ ಅಯ್ಯೋ ಎನಿಸುತ್ತಿದೆ.