ಮಾಹಿತಿ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ
ಚಿತ್ರದುರ್ಗ,(ನ.08) : ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ, ಚಿತ್ರದುರ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ, ಚಿತ್ರದುರ್ಗ ಜಿಲ್ಲಾ ಸಹಕಾರ ಯೂನಿಯನ್ ನಿಯಮಿತ ಹಾಗೂ ಜಿಲ್ಲೆಯಲ್ಲಿ ಬರುವ ಎಲ್ಲಾ ಸಹಕಾರ ಸಂಘಗಳ ಮತ್ತು ಬ್ಯಾಂಕ್‍ಗಳ ಸಂಯಕ್ತ ಆಶ್ರಯದಲ್ಲಿ ಇದೇ ನವೆಂಬರ್ 14 ರಿಂದ 20 ರವರೆಗೆ ಜಿಲ್ಲೆಯಾದ್ಯಂತ 69ನೇ ಅಖಿಲ ಭಾರತ ಸಹಕಾರ ಸಪ್ತಾಹ ಆಚರಿಸಲಾಗುವುದು.
ನವೆಂಬರ್ 14ರಂದು ಬೆಳಿಗ್ಗೆ 10.30ಕ್ಕೆ ಚಿತ್ರದುರ್ಗ ನಗರದ ಕೆಳಗೋಟೆಯ ಬಿ.ಎಲ್.ಗೌಡ ಲೇಔಟ್‍ನ ಸಹಕಾರ ಭವನದ ಆವರಣದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ರಾಮರೆಡ್ಡಿ ಸಹಕಾರ ಧ್ವಜಾರೋಹಣ ನೆರವೇರಿಸುವರು.
“ಭಾರತ 75-ಸಹಕಾರ ಸಂಸ್ಥೆಗಳ ಬೆಳವಣಿಗೆ ಮತ್ತು ಮುಂದಿನ ಭವಿಷ್ಯ” ಈ ವರ್ಷದ ಅಖಿಲ ಭಾರತ ಸಹಕಾರ ಸಪ್ತಾಹದ ಧ್ಯೇಯವಾಗಿದೆ. ಅಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದ ಅಂಗವಾಗಿ 7 ದಿನಗಳ ಆಚರಣೆಯ ವಿವರ ಇಂತಿದೆ.
ನವೆಂಬರ್ 14ರಂದು ಚಿತ್ರದುರ್ಗದ ಜಿಲ್ಲಾ ಸಹಕಾರ ಯೂನಿಯನ್ ಸಹಕಾರ ಭವನದಲ್ಲಿ “ಸಹಕಾರ ಸಂಸ್ಥೆಗಳಲ್ಲಿ ವ್ಯಾಪಾರ ಸರಳೀಕರಣ, ರಪ್ತು ವೃದ್ಧಿಗಾಗಿ ಜೆಮ್-ಫೋರ್ಟಲ್ ಬಳಕೆ” ಕಾರ್ಯಕ್ರಮ ಆಯೋಜಿಸಲಾಗಿದೆ.
ನವೆಂಬರ್ 15ರಂದು ಮೊಳಕಾಲ್ಮುರು ತಾಲ್ಲೂಕು ರಾಂಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ “ಸಹಕಾರ ಮಾರುಕಟ್ಟೆ, ಗ್ರಾಹಕ, ರೂಪಾಂತರ ಮತ್ತು ಮೌಲ್ಯವರ್ಧನೆ” ಕುರಿತು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ನವೆಂಬರ್ 16ರಂದು ಹಿರಿಯೂರು ತಾಲ್ಲೂಕು ಯರಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ “ಸಹಕಾರ ಶಿಕ್ಷಣ, ವೃತ್ತಿಪರ ನಿರ್ವಹಣೆಯನ್ನು ಮುಖ್ಯವಾಹಿನಿಗೆ ತರಲು ಪುನರ್ ನಿರ್ಮಿಸುವುದು” ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 17ರಂದು ಹೊಳಲ್ಕೆರೆ ತಾಲ್ಲೂಕು ತಾಳ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ “ಅವಿಷ್ಕಾರ ಪೋಷಣೆ, ಸ್ಪಾರ್ಟ್ ಅಪ್‍ಗಳಿಗೆ ಉತ್ತೇಜನ ಮತ್ತು ತಂತ್ರಜ್ಞಾನದ ಉನ್ನತೀಕರಣದಲ್ಲಿ ಸಹಕಾರ ಸಂಸ್ಥೆಗಳ ಪಾತ್ರ” ಕುರಿತು ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 18ರಂದು ಚಿತ್ರದುರ್ಗ ತಾಲ್ಲೂಕು ಭರಮಸಾಗರದಲ್ಲಿ “ಉದ್ಯಮಶೀಲತೆ ಅಭಿವೃದ್ಧಿ ಸಾರ್ವಜನಿಕ-ಖಾಸಗಿ ಸಹಕರಿ ಸಹಭಾಗಿತ್ವವನ್ನು ಬಲಗೊಳಿಸುವುದು” ಎಂಬ ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 19ರಂದು ಹೊಸದುರ್ಗ ವಾಸವಿ ಕಲ್ಯಾಣ ಮಂಟಪದಲ್ಲಿ “ಯುವಜನ ಮಹಿಳೆ ಮತ್ತು ಅಬಲ ವರ್ಗ ಮತ್ತು ಆರೋಗ್ಯಕ್ಕಾಗಿ ಸಹಕಾರ ಸಂಸ್ಥೆ” ಕುರಿತು ಕಾರ್ಯಕ್ರಮ ನಡೆಯಲಿದೆ.
ನವೆಂಬರ್ 20ರಂದು ಚಳ್ಳಕೆರೆ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರಿನ ಕಂಬಳಿ ಮಾರುಕಟ್ಟೆ ಭವನದ ಸಭಾಂಗಣದಲ್ಲಿ “ಆರ್ಥಿಕ ಸೇರ್ಪಡೆ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಸ್ಥೆಗಳ ಡಿಜಿಟಲೀಕರಣ ಮತ್ತು ಸಹಕಾರ ಸಂಘಗಳ ದತ್ತಾಂಶವನ್ನು ಬಲಪಡಿಸುವುದು” ಎಂಬ ವಿಷಯ ಕುರಿತು ಕಾರ್ಯಕ್ರಮ ನಡೆಯಲಿದೆ ಎಂದು ಜಿಲ್ಲಾ ಸಹಕಾರ ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ ಪಾಟೀಲ್ ತಿಳಿಸಿದ್ದಾರೆ.