ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದಲ್ಲಿ ಜನರು ಪ್ರಾಣದ ಭಯದಲ್ಲೇ ಸಮಯ ಕಳೆಯುತ್ತಿದ್ದಾರೆ. ಅದರಲ್ಲೂ ಕರ್ನಾಟಕದ ವಿದ್ಯಾರ್ಥಿಗಳು ಅಲ್ಲಿ ಇರುವುದಕ್ಕೂ ಆಗದೆ, ದೇಶಕ್ಕೆ ಮರಳುವುದಕ್ಕೂ ಆಗದ ತ್ರಿಶಂಕು ಸ್ಥಿತಿಯಲ್ಲಿ ಸಿಲುಕಿದ್ದಾರೆ. ಸುಮಾರು ವಿದ್ಯಾರ್ಥಿಗಳು ಪ್ರಾಣ ರಕ್ಷಣೆಗಾಗಿ ಮೆಟ್ರೋ ಸುರಂಗ ಮಾರ್ಗದಲ್ಲೇ ಉಳಿದು ಬಿಟ್ಟಿದ್ದಾರೆ.
ನಿನ್ನೆಯಿಂದಲೂ ಬಾಂಬ್ ಬ್ಲಾಸ್ಟ್ ಸೌಂಡ್ ಕೇಳಿ ಇಲ್ಲಿ ಪೋಷಕರು ಆತಂಕಗೊಂಡಿದ್ದಾರೆ. ಮಕ್ಕಳ ಸ್ಥಿತಿ ಅಲ್ಲಿ ಹೇಗಿದೆಯೋ ಎಂದು ಕೊರಗುತ್ತಿದ್ದಾರೆ. ಭಾರತ ಸರ್ಕಾರವೂ ಕೂಡ ವಿದ್ಯಾರ್ಥಿಗಳನ್ನ ಸುರಕ್ಷಿತವಾಗಿ ಕರೆ ತರಲು ಎಲ್ಲಾ ಪ್ರಯತ್ನಗಳನ್ನ ಮಾಡ್ತಿದೆ. ಈ ಮಧ್ಯೆ ಅಲ್ಲಿನ ವಿದ್ಯಾರ್ಥಿಗಳು ಕೂಡ ನಾವೂ ಸೇಫಾಗಿಯೇ ಇದ್ದೇವೆ ಎಂದು ಹೇಳುತ್ತಿದ್ದಾರೆ.
ಉಕ್ರೇನ್ ನಲ್ಲಿ ಸುಮಾರು 16 ಸಾವಿರ ಮಂದಿ ಭಾರತೀಯರಿದ್ದಾರೆ. ಅದರಲ್ಲಿ ಹೆಚ್ಚು ವಿದ್ಯಾರ್ಥಿಗಳೇ ಆಗಿದ್ದಾರೆ. ಹಲವರು ಅಪಾರ್ಟ್ಮೆಂಟ್ ನಲ್ಲಿ ಹೊರಗೆ ಬರದಂತೆ ಇದ್ದರೆ, ಇನ್ನು ಹಲವರು ಮೆಟ್ರೋ ಸುರಂಗ ಮಾರ್ಗಗಳಲ್ಲಿ ಅವಿತುಕೊಂಡಿದ್ದಾರೆ. ಬಾಂಬ್ ದಾಳಿಯಿಂದ ರಕ್ಷಣೆ ಪಡೆಯಲು ಸುಮಾರು 30 ಗಂಟೆಗಳ ಕಾಲ ಕಳೆಯುತ್ತಿದ್ದಾರೆ.
ಹೀಗೆ ಇಕ್ಕಟ್ಟಿಗೆ ಸಿಲುಕಿರುವ ವಿದ್ಯಾರ್ಥಿಗಳು ಆದಷ್ಟು ಬೇಗ ನಮ್ಮನ್ನು ರಕ್ಷಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡುತ್ತಿದ್ದಾರೆ. ಅವರ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.