ಹೊನ್ನಾವರ: ವಿಧಾನಸಭಾ ಚುನಾವಣೆಗೆ ಇನ್ನು ಕೆಲವೇ ಕೆಲವು ದಿನಗಳು ಬಾಕಿ ಇದೆ. ಹೀಗಾಗಿ ಮೂರು ಪಕ್ಷಗಳ ನಾಯಕರು ರಭಸದ ಓಡಾಟ ಶುರು ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ನಾಯಕರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಓಡಾಡುತ್ತಿದ್ದಾರೆ. ಆದರೆ ಈ ಓಡಾಟದ ನಡುವೆ ಅದ್ಯಾಕೋ ಪದೇ ಪದೇ ಡಿಕೆ ಶಿವಕುಮಾರ್ ಅವರಿಗೆ ಹೆಲಿಕಾಪ್ಟರ್ ನಿಂದ ಆತಂಕ ಜಾಸ್ತಿಯಾಗುತ್ತಿದೆ.
ಮೊನ್ನೆಯಷ್ಟೇ ಹೆಲಿಕಾಪ್ಟರ್ ನಲ್ಲಿ ಹೋಗುವಾಗ ಹದ್ದು ಅಡ್ಡವಾಗಿ, ಹೆಲಿಕಾಪ್ಟರ್ ಕಿಟಕಿಯ ಗಾಜು ಹೊಡೆದಿತ್ತು. ಈಗ ಮತ್ತೆ ಹೆಲಿಕಾಪ್ಟರ್ ಗೆ ಬೆಂಕಿ ಕಾಣಿಸಿಕೊಂಡಿದೆ. ಇದು ಆತಂಕಕ್ಕೆ ಕಾರಣವಾಗಿದೆ. ಚುನಾವಣಾ ಪ್ರಚಾರದ ಬಿಸಿಯಲ್ಲಿರುವಾಗ ಹೀಗೆ ಪದೇ ಪದೇ ಯಡವಟ್ಟು ಆಗುತ್ತಿರುವುದು ಸಹಜವಾಗಿಯೇ ಭಯದ ವಾತಾವರಣವನ್ನು ನಿರ್ಮಾಣ ಮಾಡಿದೆ.
ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಚುನಾವಣಾ ಪ್ರಚಾರಕ್ಕಾಗಿ ಹೊನ್ನಾವರಕ್ಕೆ ಭೇಟಿ ನೀಡಿದ್ದಾರೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್ ಮೂಲಕ ತೆರಳುತ್ತಿದ್ದರು. ಈ ವೇಳೆ ಹೆಲಿಕಾಪ್ಟರ್, ರಾಮತೀರ್ಥ ಬಳಿಯಿರುವ ಹೆಲಿಪ್ಯಾಡ್ ಗೆ ಬರುತ್ತಿದ್ದಂತೆ ಈ ಅವಘಡ ಸಂಭವಿಸಿದೆ. ಡಿಕೆಶಿ ಇದ್ದ ಹೆಲಿಕಾಪ್ಟರ್ ಗೆ ಸೂಚನೆ ಕೊಡುವ ದೃಷ್ಟಿಯಿಂದ ಸ್ಮೂಕ್ ಕ್ಯಾಂಡಲ್ ಮೂಲಕ ಹೆಲಿಪ್ಯಾಡ್ ಬಳಿ ಬೆಂಕಿ ಹಾಕಲಾಗಿತ್ತು. ಆದರೆ ಪಕ್ಕದಲ್ಲಿಯೇ ಇದ್ದ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಪೈಲಟ್ ಕೂಡ ಸುರಕ್ಷಿತವಾಗಿ ಹೆಲಿಕಾಪ್ಟರ್ ಲ್ಯಾಂಡ್ ಮಾಡಿದ್ದಾರೆ.