ಚಿತ್ರದುರ್ಗ. ಏ.03: ನರೇಗಾ ಯೋಜನೆಯ ಮಾರ್ಗಸೂಚಿ ಅನ್ವಯವೇ ಕೆಲಸ ನಿರ್ವಹಿಸಬೇಕು ಹಾಗೂ ಕಾಮಗಾರಿಯ ಗುಣಮಟ್ಟ ಕಾಪಾಡಿಕೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹೊಸದುರ್ಗ ತಾಲ್ಲೂಕಿನ ಹೆಬ್ಬಳ್ಳಿ ಸೇರಿದಂತೆ ವಿವಿಧ ಗ್ರಾಮ ಪಂಚಾಯಿತಿಗೆ ಮಂಗಳವಾರ ಭೇಟಿ ನೀಡಿ, ಚಾಲನೆಯಲ್ಲಿರುವ ಮಹಾತ್ಮಾಗಾಂಧಿ ನರೇಗಾ ಯೋಜನೆಯ ಗ್ರಾಮೀಣ ಗೋದಾಮು ಕಟ್ಟಡ ವೀಕ್ಷಣೆ ಹಾಗೂ ಕಾಮಗಾರಿಯ ಕಡತ ಪರಿಶೀಲಿಸಿದರು.
ಹೆಬ್ಬಳ್ಳಿಯಲ್ಲಿರುವ ಗೋದಾಮು ಕಟ್ಟಡವು ಗ್ರಾಮೀಣ ಭಾಗದ ರೈತರಿಗೆ ಅನುಕೂಲವಾಗಬೇಕು ಎಂದು ನರೇಗಾ ಇಂಜಿನಿಯರ್ ಅವರಿಗೆ ಸೂಚಿಸಿದರು. ನಂತರ ಅದೇ ಗ್ರಾಮದ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರಕ್ಕೆ ಭೇಟಿ ನೀಡಿ, ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದು, ಔಷಧಿ ಕೊಠಡಿಗೆ ತೆರಳಿ ಪರಿಶೀಲಿಸಿದರು. ಈ ಕೇಂದ್ರಕ್ಕೆ ಬರುವ ರೋಗಿಗಳಿಗೆ ಆರೋಗ್ಯಕ್ಕೆ ಸಂಬಂಧಿಸಿದ ಉತ್ತಮ ಸಲಹೆ ಮತ್ತು ಔಷಧೋಪಚಾರಗಳನ್ನು ನೀಡಿ ಆರೋಗ್ಯವಂತರನ್ನಾಗಿ ಮಾಡುವುದು ನಿಮ್ಮ ಜವಾಬ್ದಾರಿ ಎಂದು ವೈದ್ಯಾಧಿಕಾರಿಗೆ ಸೂಚಿಸಿದರು.
ಸಾಮಾಜಿಕ ಅರಣ್ಯ ವಲಯ ವತಿಯಿಂದ ಕುಂಬಾರಗಟ್ಟೆ ನರ್ಸರಿಯಲ್ಲಿ ನರೇಗಾ ಯೋಜನೆಯಡಿ ನರ್ಸರಿ ಸಸಿಗಳನ್ನು ಬೆಳೆಸಿದ್ದು, ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು. ವಲಯ ಅರಣ್ಯ ಅಧಿಕಾರಿ ದಯಾನಂದ ಅವರಿಂದ ಮಾಹಿತಿ ಪಡೆದ ಜಿ.ಪಂ ಸಿಇಒ, ಮಳೆಗಾಲ ಪ್ರಾರಂಭದಲ್ಲಿ ಸಸಿಗಳನ್ನು ನೆಡಬೇಕು. ಇದಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ಧತೆಗಳನ್ನು ಈ ಕೂಡಲೇ ಮಾಡಿಕೊಂಡು, ಸಕಾಲದಲ್ಲಿ ಸಸಿಗಳ ವಿತರಿಸಿ, ಮಳೆಗಾಲ ಪ್ರಾರಂಭ ಹಂತದಲ್ಲೇ ಸಸಿಗಳನ್ನು ನೆಡುವಂತೆ ತಾಕೀತು ಮಾಡಿದರು. ನಂತರ ದೇವಿಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನವಾದ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ವೀಕ್ಷಿಸಿ, ಕಲ್ಯಾಣಿ ಸುತ್ತ-ಮುತ್ತ ಗಿಡ-ಗಂಟೆಗಳಿದ್ದು, ಅವುಗಳನ್ನು ತೆಗೆಸಿ, ಸ್ವಚ್ಛಗೊಳಿಸಿ, ಕಲ್ಯಾಣಿ ಸುತ್ತ-ಮುತ್ತ ಉತ್ತಮ ಪರಿಸರ ಕಾಪಾಡುವಂತೆ ನರೇಗಾ ಸಹಾಯಕ ಇಂಜಿನಿಯರ್‍ಗೆ ಸೂಚಿಸಿದರು.
ಕೊಂಡಾಪುರದ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಲಾದ ಹೈಟೆಕ್ ಶೌಚಾಲಯ ಮತ್ತು ಅಡುಗೆ ಕೋಣೆ ವೀಕ್ಷಣೆ ಮಾಡಿ, ನಂತರ ಶಾಲಾ ಕೊಠಡಿಗಳಿಗೆ ತೆರಳಿ ಪರಿಶೀಲಿಸಿದರು. ಶಾಲಾ ಆವರಣದಲ್ಲಿರುವ ಆಟದ ಮೈದಾನ (ಶಟಲ್ ಕಾಕ್) ವೀಕ್ಷಿಸಿ, ಶಾಲಾ ಮುಖ್ಯ ಶಿಕ್ಷಕ ಶೇಖರಪ್ಪ ಅವರಿಂದ ಮಾಹಿತಿ ಪಡೆದು, ಶೌಚಾಲಯ ಮತ್ತು ಅಡುಗೆ ಕೋಣೆ ಸಮರ್ಪಕವಾಗಿ ಇಲ್ಲಿನ ವಿದ್ಯಾರ್ಥಿಗಳಿಗೆ ಸದ್ಭಳಕೆ ಮಾಡಿಕೊಳ್ಳುವಂತೆ ಮನವರಿಕೆ ಮಾಡುವಂತೆ ಶಾಲಾ ಮುಖ್ಯ ಶಿಕ್ಷಕರು ಮತ್ತು ಸಹಶಿಕ್ಷಕರಿಗೆ ತಿಳಿಸಿದರು.
ಬಾಗೂರು ಗ್ರಾಮ ಪಂಚಾಯತಿಗೆ ಭೇಟಿ ನೀಡಿ, ನರೇಗಾ ಯೋಜನೆಯಡಿಯಲ್ಲಿ ಅನುಷ್ಠಾನಗೊಳಿಸಿರುವ ಸಂಜೀವಿನಿ ಶೆಡ್ ಪೂರ್ಣಗೊಂಡ ಕಾಮಗಾರಿ ವೀಕ್ಷಣೆ ಮಾಡಿ, ಈ ಕೊಠಡಿಯನ್ನು ಸ್ವ-ಸಹಾಯ ಸಂಘದ ಸದಸ್ಯರಿಗೆ ಉಪಯೋಗವಾಗುವಂತೆ ನೋಡಿಕೊಳ್ಳಬೇಕು ಎಂದು ಪಿಡಿಒ ಮತ್ತು ಸಿಬ್ಬಂದಿಗಳಿಗೆ ಸೂಚಿಸಿದರು. ನಂತರ ಅದೇ ಗ್ರಾಮದ ಮೂಡಲ ಮುತ್ತಿನ ಕೆರೆಗೆ ಭೇಟಿ ನೀಡಿದರು. ಈ ಕೆರೆಯಲ್ಲಿ ಕಳೆದ ವರ್ಷದಲ್ಲಿ ನರೇಗಾ ಯೋಜನೆಯಿಂದ ಕೆರೆ ಹೂಳು ತೆಗೆಯುವ ಮತ್ತು ಕೆರೆ ಏರಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗಿತ್ತು. ಕಳೆದ ಬಾರಿ ಉತ್ತಮ ಮಳೆ ಬಂದಿದ್ದ ಪ್ರಯುಕ್ತ ಕೆರೆ ತುಂಬಿದೆ ಎಂದು ಪಿಡಿಒ ಮತ್ತು ಸಾರ್ವಜನಿಕರು ಜಿ.ಪಂ ಸಿಇಒ ಅವರಿಗೆ ಮಾಹಿತಿ ನೀಡಿದರು.
ಜಿಲ್ಲಾ ಅಂತರ್ಜಲ ಇಲಾಖೆಯು ಅಂತರ್ಜಲಮಟ್ಟ ಮಾಪನ ಮಾಡುವ ಹೆಬ್ಬಳ್ಳಿ ಮತ್ತು ಬಾಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಅಧ್ಯಯನ ಕೊಳವೆ ಬಾವಿಗಳ ಅಂತರ್ಜಲ ಸ್ಥಿರ ಜಲಮಟ್ಟವನ್ನು ಜಿ.ಪಂ ಸಿಇಒ ಪರಿಶೀಲಿಸಿದರು. ಹೆಬ್ಬಳ್ಳಿ ಗ್ರಾಮದಲ್ಲಿ ನೆಲಮಟ್ಟದಿಂದ 22 ಮೀಟರ್ ಆಳದಲ್ಲಿ ಅಂತರ್ಜಲಮಟ್ಟ ಮತ್ತು ಬಾಗೂರು ಗ್ರಾಮದ ಅಧ್ಯಯನ ಕೊಳವೆ ಬಾವಿಯಲ್ಲಿ 14.38 ಮೀಟರ್ ಆಳದಲ್ಲಿ ಅಂತರ್ಜಲ ಮಟ್ಟ ಇರುವುದು ವಾಟರ್ ಲೆವಲ್ ಇಂಡಿಕೇಟರ್ ಉಪಕರಣದ ಮೂಲಕ ಮಾಪನಮಾಡಿಸಿ, ಪ್ರತಿ ತಿಂಗಳು ಈ ಮಾಪನದ ಮೂಲಕ ಅಂತರ್ಜಲಮಟ್ಟ ಪರೀಕ್ಷಿಸಿ, ಮಾಹಿತಿ ನೀಡುವಂತೆ ಭೂ ವಿಜ್ಞಾನಿಗಳಿಗೆ ಸೂಚಿಸಿದರು.
ಅಹಮ್ಮದ್ ನಗರ ಗಡಿಯಲ್ಲಿ ಹೊಸದುರ್ಗ ಪಟ್ಟಣ ಮತ್ತು 346 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಮೊದಲನೇ ಹಂತದ 3 ಲಕ್ಷ ಲೀಟರ್ ಸಾಮಥ್ರ್ಯ ಮತ್ತು 4.5 ಲಕ್ಷ ಲೀಟರ್ ಸಾಮಥ್ರ್ಯದ ಪಂಪ ಹೌಸ್‍ಗೆ ಭೇಟಿ ನೀಡಿ ವೀಕ್ಷಿಸಿದರು. ಈ ಕಾಮಗಾರಿ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಕುರಿತು ಮುಖ್ಯ ಇಂಜಿನಿಯರ್ ಅವರಿಂದ ಮಾಹಿತಿ ಪಡೆದರು. ಅರಣ್ಯ ಇಲಾಖೆಯಿಂದ ವಿಳಂಬವಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಸಂಬಂಧಿಸಿದ ಇಲಾಖೆಗಳಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು, ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಇಂಜಿನಿಯರ್ ಬಸನಗೌಡ ಪಾಟೀಲ್, ಹಿರಿಯ ಭೂ ವಿಜ್ಞಾನಿ ಬಸಂತ್, ಹೊಸದುರ್ಗ ತಾ.ಪಂ ಇಒ ಸುನೀಲ್, ಸಹಾಯ ನಿರ್ದೇಶಕ (ನರೇಗಾ) ನಯಾಜ್, ನರೇಗಾ ಯೋಜನೆಯ ಸಂಯೋಜಕ ಸಂತೋಷ್ ಕುಮಾರ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್‍ಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಇದ್ದರು.
ದಾವಣಗೆರೆ. ಏ.15: ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರಸಕ್ತ ಸಾಲಿನ ಹಿಂಗಾರು ಹಂಗಾಮಿನಲ್ಲಿ ಭತ್ತ ಹಾಗೂ ಬಿಳಿ…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್ 15…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್…
ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್…