ರಾಮನಗರ: ಮಳೆಗಾಲದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲೂ ರಸ್ತೆ ಗುಂಡಿಗಳ ಸಮಸ್ಯೆಗಳಿಂದ ಸಾಕಷ್ಟು ತೊಂದರೆಗೀಡಾಗುತ್ತಾರೆ. ಸಾಕಷ್ಟು ರಸ್ತೆಗಳು ಹದಗೆಟ್ಟಿವೆ. ಹೀಗಾಗಿ ರಸ್ತೆಯಲ್ಲಿ ಬಿದ್ದ ಗುಂಡಿಯಿಂದಾಗಿ ನೀರು ತುಂಬಿ, ವಾಹನ ಸವಾರರು, ಸಂಚಾರಿಗಳು ಪರದಾಡುವಂತಾಗಿದೆ. ಇಂಥ ಸಾಕಷ್ಟು ಸುದ್ದಿಗಳನ್ನ ನಾವೂ ನೀವೂ ನೋಡಿದ್ದೇವೆ. ಆದ್ರೆ ಇದೀಗ ರಾಮನಗರದಲ್ಲೂ ಅಂಥದ್ದೇ ಸನ್ನಿವೇಶ ಕಂಡು ಬಂದಿದ್ದು, ಯೂಥ್ ಕಾಂಗ್ರೆಸ್ ಭತ್ತ ನಾಟಿ ಮಾಡಿದೆ.
ಹುಣಸನಹಳ್ಳಿಯ ಗ್ರಾಮದ ರಸ್ತೆ ಕಂಪ್ಲೀಟ್ಲಿ ಅವ್ಯವಸ್ಥೆಯ ತಾಣವಾಗಿದೆ. ಈ ರಸ್ತೆ ಸುಮಾರು 15ಕ್ಕೂ ಹೆಚ್ಚು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿದ್ದು, ಮಳೆಗೆ ನೀರಿನಿಂದ ತುಂಬಿ ಹೋಗಿದೆ. ಅಷ್ಟು ಹಳ್ಳಿಗಳ ಸಂಪರ್ಕ ರಸ್ತೆಯಾದರೂ ಸರಿ ಮಾಡಿಸದ ಕಾರಣ ಯೂಥ್ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಡೆಗೆ ಆ ರಸ್ತೆಯಲ್ಲಿ ಭತ್ತ ನಾಟಿ ಮಾಡಿ ವಿರೋಧ ವ್ಯಕ್ತಪಡಿಸಿದ್ದಾರೆ. ಜೊತೆಗೆ ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ವಿರುದ್ಧ ಘೋಷಣೆ ಕೂಗಿದ್ದಾರೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರು ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶಭರಿತರಾಗಿದ್ದಾರೆ. ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಅತ್ತ ಗಮನ ಹರಿಸ್ತಾರಾ ನೋಡ್ಬೇಕಿದೆ.