ಕೋಲ್ಕತ್ತಾ.ಜೂನ್.21: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡರು. ಪಶ್ಚಿಮ ಬಂಗಾಳದ ರಾಜ್ಯಪಾಲ ಆರ್.ಎನ್. ರವಿ ಮತ್ತು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರೊಂದಿಗೆ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, ಸಮಾವೇಶವನ್ನುದ್ದೇಶಿಸಿ ಮಾತನಾಡಿ ಇಡೀ ವಿಶ್ವಕ್ಕೆ ಯೋಗ ದಿನದ ಶುಭಾಶಯಗಳನ್ನು ಕೋರಿದರು.
ಇದೇ ವೇಳೆ, ಜಗತ್ತಿನಾದ್ಯಂತ ಜನರನ್ನು ಒಂದುಗೂಡಿಸುವಲ್ಲಿ ಯೋಗದ ಪಾತ್ರವನ್ನು ಅವರು ಶ್ಲಾಘಿಸಿದರು. ಅಲ್ಲದೆ, ಯೋಗ ದಿನದ ಅಂಗವಾಗಿ ಬಂಗಾಳದ ಜನತೆ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಇಡೀ ದೇಶ ಮತ್ತು ಜಗತ್ತು ಇಂದು ಒಂದಕ್ಕೊಂದು ಬೆಸೆದುಕೊಂಡಿರುವಂತೆ ಕಾಣುತ್ತಿದೆ. ಇದು ಯೋಗದ ಶಕ್ತಿ. ಯೋಗವು ಎಲ್ಲರನ್ನೂ ಒಟ್ಟುಗೂಡಿಸುತ್ತದೆ. ಈ ಸಂದರ್ಭದಲ್ಲಿ ನಾನು ಇಡೀ ಜಗತ್ತಿಗೆ, ಇಡೀ ಮಾನವ ಸಮುದಾಯಕ್ಕೆ ಅಂತರರಾಷ್ಟ್ರೀಯ ಯೋಗ ದಿನದ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ. ಇಂದು ಯೋಗ ದಿನದಂದು ಬಂಗಾಳದ ಜನತೆ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನವನ್ನು ನಾನು ವಿಶೇಷವಾಗಿ ಅಭಿನಂದಿಸುತ್ತೇನೆ. ಇದು ಅತ್ಯಂತ ಅದ್ಭುತವಾದ ಉಪಕ್ರಮ,” ಎಂದು ಪ್ರಧಾನಿ ಹೇಳಿದರು.
ಬಂಗಾಳದ ಆಧ್ಯಾತ್ಮಿಕವಾಗಿ ಶ್ರೀಮಂತವಾಗಿರುವ ಮಣ್ಣಿನಲ್ಲಿ ಈ ಸುದಿನವನ್ನು ಆಚರಿಸುತ್ತಿರುವುದು ನನ್ನ ಸೌಭಾಗ್ಯ ಎಂದ ಪ್ರಧಾನಿ ಮೋದಿ, ಯೋಗ ಪರಂಪರೆಗೆ ಬಂಗಾಳ ರಾಜ್ಯ ನೀಡಿರುವ ನಿರಂತರ ಕೊಡುಗೆಯನ್ನು ಸ್ಮರಿಸಿದರು. ಯೋಗದ ಮಹತ್ವವನ್ನು ಜಗತ್ತಿನಾದ್ಯಂತ ಪಸರಿಸಲು ಶ್ರಮಿಸಿದ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು ಮತ್ತು ಲಹರಿ ಮಹಾಶಯರಂತಹ ಪೂಜ್ಯ ಆಧ್ಯಾತ್ಮಿಕ ಸಂತರ ಪರಂಪರೆಯನ್ನು ಅವರು ಈ ವೇಳೆ ಉಲ್ಲೇಖಿಸಿದರು. ಇಂತಹ ಮಹಾನ್ ಸಂತರು ಮತ್ತು ಯೋಗಿಗಳನ್ನು ಪೋಷಿಸಿದ ಭೂಮಿಯಲ್ಲಿ ಸಾಮೂಹಿಕ ಯೋಗದ ಭಾಗವಾಗುವುದು ಅತ್ಯಂತ ಆಧ್ಯಾತ್ಮಿಕ ಅನುಭವ ನೀಡುತ್ತದೆ ಎಂದು ಅವರು ಹೇಳಿದರು.
ಯೋಗವನ್ನು ‘ಜೀವನ ವಿಧಾನ’ವನ್ನಾಗಿ ಮಾಡಿಕೊಳ್ಳಲು ಪ್ರಧಾನಿ ಕರೆ
ಆಧುನಿಕ ಕಾಲದಲ್ಲಿ ಯೋಗದ ಪ್ರಸ್ತುತತೆಯನ್ನು ಒತ್ತಿಹೇಳಿದ ಪ್ರಧಾನಮಂತ್ರಿಯವರು, “ಯೋಗವು ಕೇವಲ ವೈಯಕ್ತಿಕ ಆರೋಗ್ಯಕ್ಕೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ ಮಾನವಕುಲದ ಆರೋಗ್ಯಕರ ಮತ್ತು ಸಾಮರಸ್ಯದ ಭವಿಷ್ಯವನ್ನು ನಿರ್ಮಿಸಲು ಇದು ಅತ್ಯಗತ್ಯವಾಗಿದೆ. ಆಧುನಿಕ ಸಮಾಜ ಎದುರಿಸುತ್ತಿರುವ ಹಲವು ಸವಾಲುಗಳಿಗೆ ಯೋಗವು ಪರಿಹಾರಗಳನ್ನು ನೀಡುತ್ತದೆ. ದೈಹಿಕ ಫಿಟ್ನೆಸ್, ಮಾನಸಿಕ ಸಮತೋಲನ ಮತ್ತು ಆಂತರಿಕ ಶಾಂತಿಯ ನಡುವೆ ಯೋಗವು ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ” ಎಂದರು.
ಯೋಗವನ್ನು ಕೇವಲ ವಾರ್ಷಿಕ ಕಾರ್ಯಕ್ರಮವನ್ನಾಗಿ ನೋಡದೆ, ಅದನ್ನು ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನಿ ಜನರಲ್ಲಿ ಮನವಿ ಮಾಡಿದರು. ಯೋಗ ದಿನದ ನಿಜವಾದ ಯಶಸ್ಸು ಅದನ್ನು ದೈನಂದಿನ ದಿನಚರಿಯಲ್ಲಿ ಅಳವಡಿಸಿಕೊಳ್ಳುವುದರಲ್ಲಿದೆ. ಪ್ರತಿಯೊಬ್ಬರೂ ತಮ್ಮ 30ರ ಹರೆಯದಲ್ಲಿದ್ದಕ್ಕಿಂತ 50ರ ಹರೆಯದಲ್ಲಿ ಹೆಚ್ಚು ಫಿಟ್, ಹೆಚ್ಚು ಶಕ್ತಿಯುತ (ಎನರ್ಜಿಟಿಕ್) ಮತ್ತು ಹೆಚ್ಚು ಚುರುಕಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.








