in ,

ರೈತರನ್ನು ರಕ್ಷಣೆ ಮಾಡುವವರ್ಯಾರು? ಟಿ.ನುಲೇನೂರು ಶಂಕರಪ್ಪ

suddione whatsapp group join

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಡಿ.13): ದೇಶಕ್ಕೆ ಆಹಾರ ಕೊಡಲು ಹೋಗಿ ಸಾಲಗಾರರಾಗಿರುವ ರೈತರನ್ನು ರಕ್ಷಣೆ ಮಾಡುವವರ್ಯಾರು? ಯಾವುದನ್ನು ಸುಮ್ಮನೆ ಒಪ್ಪಿಕೊಳ್ಳಬೇಡಿ. ಪ್ರಶ್ನೆ ಮಾಡುವುದನ್ನು ಕಲಿಯಿರಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ ರೈತರನ್ನು ಎಚ್ಚರಿಸಿದರು.

ಕ್ಯಾದಿಗೆರೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಗ್ರಾಮ ಶಾಖೆಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಒಕ್ಕಲುತನ ದುಬಾರಿಯಾಗಿದ್ದು, ರೈತ ಕೃಷಿಯಿಂದ ಹಿಂದೆ ಸರಿಯುವಂತಾಗಿದೆ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವುದನ್ನು ರೈತರು ಇನ್ನು ಏಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎನ್ನುವುದೇ ಬೇಸರದ ಸಂಗತಿ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ನಿಲ್ಲುತ್ತಿಲ್ಲ. ಪ್ರಧಾನಿ ಮೋದಿ ರೈತರ ಭೂಮಿಯನ್ನು ಕಾರ್ಪೊರೇಟ್‍ಗಳಿಗೆ ಮಾರುವ ಕುತಂತ್ರ ನಡೆಸುತ್ತಿರುವುದರ ವಿರುದ್ದ ರೈತರು ಎಚ್ಚೆತ್ತುಕೊಳ್ಳಬೇಕು. ಬೆಳೆ ಬೆಳೆಯಲಿ, ಬಿಡಲಿ ಭೂಮಿ ರೈತರ ಕೈಯಲ್ಲಿರಬೇಕು ಎನ್ನುವುದು ನಮ್ಮ ಉದ್ದೇಶ.

ಎ.ಪಿ.ಎಂ.ಸಿ.ನಾಶವಾದರೆ ರೈತ ಬೆಳೆದ ಬೆಳೆಗಳಿಗೆ ಟೆಂಡರ್ ಹಾಕುವವರ್ಯಾರು ಎಂದು ಪ್ರಶ್ನಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಜಿ.ಸುರೇಶ್‍ಬಾಬು ಮಾತನಾಡಿ ವಿಧಾನಸಭೆಯಲ್ಲಿ ಯಾವ ಪಕ್ಷದವರು ರೈತರ ಪರವಾಗಿ ಏಕೆ ಧ್ವನಿಎತ್ತುತ್ತಿಲ್ಲ. ಮೌನವಹಿಸಿರುವುದರ ಹಿನ್ನೆಲೆ ಏನು?

ಆಳುವ ಸರ್ಕಾರಗಳು ರೈತರ ಮೇಲೆ ಗಧಾ ಪ್ರಹಾರ ನಡೆಸುತ್ತಿದ್ದಾರೆ. ಒಗ್ಗಟ್ಟಿನಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎನ್ನುವುದಕ್ಕೆ ದೆಹಲಿ ಗಡಿಯಲ್ಲಿ ಕಳೆದ ಹದಿನೈದು ತಿಂಗಳಿನಿಂದಲೂ ರೈತರು ಕೇಂದ್ರ ಸರ್ಕಾರದ ವಿರುದ್ದ ಚಳುವಳಿ ನಡೆಸಿದ್ದರ ಫಲವಾಗಿ ಮೂರು ಕೃಷಿ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆದಿರುವುದೇ ಸಾಕ್ಷಿ ಎಂದು ಸಂಘಟನೆಗಿರುವ ಶಕ್ತಿಯ ಮಹತ್ವ ತಿಳಿಸಿದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ರಾಜಕಾರಣಿಗಳು ರೈತರಿಗೆ ನಿರಂತರವಾಗಿ ಮೋಸ ಮಾಡಿಕೊಂಡು ಬರುತ್ತಿದ್ದಾರೆ. ಮುಂದೆ ದೊಡ್ಡ ಹೋರಾಟ ಕಟ್ಟಿ ಬದುಕಿನ ಬಗ್ಗೆ ಚಿಂತನೆ ಮಾಡಬೇಕಿದೆ. ನೀರು, ವಿದ್ಯುತ್, ಬೆಂಬಲ ಬೆಲೆಯನ್ನು ಸರ್ಕಾರದಿಂದ ಕೇಳಿ ಪಡೆಯುವುದಕ್ಕೆ ಮೊದಲು ಕ್ಯಾದಿಗೆರೆ ರೈತರು ಸಂಘಟಿತರಾಗಿ ಎಂದು ತಾಕೀತು ಮಾಡಿದರು.

ರೈತ ಮುಖಂಡ ಮಲ್ಲಾಪುರದ ತಿಪ್ಪೇಸ್ವಾಮಿ ಮಾತನಾಡುತ್ತ ಯುವಕರು ಕೃಷಿಯಿಂದ ದೂರ ಸರಿಯುತ್ತಿರುವುದು ಒಕ್ಕಲುತನಕ್ಕೆ ಮಾರಕವಾಗಿ ಪರಿಣಮಿಸಿದೆ. ಯುವ ಜನಾಂಗ ಎಚ್ಚೆತ್ತುಕೊಳ್ಳಬೇಕಿದೆ. ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಯಲ್ಲಿ ಹಸಿರುಶಾಲು ಇರಬೇಕು. ಆಗ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಗೌರವಾಧ್ಯಕ್ಷ ಮುದ್ದಾಪುರದ ನಾಗರಾಜ್ ಮಾತನಾಡಿ ರೈತರು ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಸಂಘಟನೆ ಮುಖ್ಯ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರನ್ನು ಕಡೆಗಣಿಸುತ್ತಲೆ ಬರುತ್ತಿವೆ. ರೈತ ಚಳುವಳಿಗೆ ತಲೆಬಾಗಿದ ಕೇಂದ್ರ ಸರ್ಕಾರ ಮೂರು ಕೃಷಿ ವಿರೋಧಿ ಕಾಯಿದೆಗಳನ್ನು ವಾಪಸ್ ಪಡೆದುಕೊಂಡಿತು. ಹಸಿರುಶಾಲಿಗೆ ಶಕ್ತಿಯಿದೆ.

ಒಗ್ಗಟ್ಟಿನಿಂದ ಬೇಡಿಕೆಗಳನ್ನು ಈಡೇರಿಸಿಕೊಂಡು ಹಕ್ಕುಗಳನ್ನು ಪಡೆದುಕೊಳ್ಳಬಹುದೆಂದು ತಿಳಿಸಿದರು.
ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡುತ್ತ ದೇಶದಲ್ಲಿ ಎಲ್ಲಿಯೇ ರೈತರಿಗೆ ಅನ್ಯಾಯವಾದರೆ ಇಡೀ ರೈತ ಕುಲವೇ ಒಂದಾಗಬೇಕು. ಸಂಘಟನೆ, ಹೋರಾಟವಿದ್ದರೆ ಮಾತ್ರ ಎಲ್ಲಾ ಸರ್ಕಾರಗಳು ರೈತರ ಬಗ್ಗೆ ಹುಷಾರಾಗಿರುತ್ತವೆ. ಚುನಾವಣೆ ಬಂದಾಗ ರಾಜಕೀಯ ಮಾಡುವುದನ್ನು ಈಗಲಾದರೂ ಬಿಡಿ. ಮತ ಯಾರಿಗಾದರೂ ಹಾಕಿ. ಆದರೆ ಸಂಘಟನೆಯನ್ನು ಮಾತ್ರ ಬಲಹೀನಗೊಳಿಸಬೇಡಿ. ಕೃಷಿ ಪಂಪ್‍ಸೆಟ್‍ಗಳಿಗೆ ಮೀಟರ್ ಹಾಕಲು ಹೊರಟಿದ್ದಾರೆ. ಸಮಸ್ಯೆಗಳು ಬಂದಾಗ ಒಗ್ಗಟ್ಟಾಗದಿದ್ದರೆ ರೈತರಿಗೆ ಉಳಿಗಾಲವಿಲ್ಲ. ಒಕ್ಕಲುತನ ಉಳಿಸಿಕೊಳ್ಳುವತ್ತ ಗಮನ ಕೊಡಿ ಎಂದು ಕ್ಯಾದಿಗೆರೆ ರೈತರಿಗೆ ಕಿವಿಮಾತು ಹೇಳಿದರು.

ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ ಮಾತನಾಡಿ ಸಂಘಟನೆಯಲ್ಲಿ ಒಗ್ಗಟ್ಟಿದೆ. ಏನು ಬೇಕಾದರೂ ಸಾಧಿಸಬಹುದು. ರೈತರಿಗೆ ಜಾತಿಯಿಲ್ಲ. ಜಾತಿಯಿಂದ ಏನು ಸಾಧಿಸಿಕೊಳ್ಳಲು ಆಗುವುದಿಲ್ಲ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮನಬಂದಂತೆ ಕಾನೂನು ಜಾರಿಗೆ ತರಲು ಹೊರಟಿರುವುದರ ವಿರುದ್ದ ಮೊದಲು ರೈತರು ಸೆಟೆದು ನಿಲ್ಲಬೇಕು. ಇಲ್ಲದಿದ್ದರೆ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ರೈತ ಸಂಘದ ತಾಲ್ಲೂಕು ಅಧ್ಯಕ್ಷ ಧನಂಜಯ ಹಂಪಯ್ಯನಮಾಳಿಗೆ, ಸಜ್ಜನಕೆರೆ ರೇವಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮಂಜು, ಸತ್ಯಪ್ಪ, ರೇಣುಕರಾಜು ಇವರುಗಳು ಮಾತನಾಡಿದರು.
ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.

What do you think?

Written by suddionenews

Leave a Reply

Your email address will not be published. Required fields are marked *

GIPHY App Key not set. Please check settings

ಸರ್ಕಾರಿ ಆಸ್ಪತ್ರೆ ವೈದ್ಯರು ಸಹಿ ಹಾಕಿ ಬೇರೆ ಕಡೆ ಡ್ಯೂಟಿ ಮಾಡ್ತಾರೆ : ಲಕ್ಷ್ಮಣ ಸವದಿ ಪ್ರಶ್ನೆಗೆ ಸುಧಾಕರ್ ಏನಂದ್ರು..?

ಅಂಧಕಾರದಿಂದ ಬೆಳಕಿನೆಡೆಗೆ ಸಾಗಲು ಬುದ್ದ, ಅಂಬೇಡ್ಕರ್ ದಾರಿದೀಪ : ಬಿ.ಪಿ.ತಿಪ್ಪೇಸ್ವಾಮಿ