ಮನೆಗೊಂದು ಮಗುವಿರಲಿ ಮನೆ ತುಂಬಾ ನಗುವಿರಲಿ, ಚಿಕ್ಕ ಕುಟುಂಬದ ಆದರ್ಶ ಪಾಲಿಸಿ : ಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ದೇವರಾಜ್

suddionenews
2 Min Read

ಚಿತ್ರದುರ್ಗ,(ಜುಲೈ 02) : ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದ ಪರಿಸರದ ಮೇಲೆ ಹೆಚ್ಚು ಒತ್ತಡ ಬಿದ್ದು ಅರಣ್ಯ ನಾಶ, ವಾಯು, ಜಲ ಮತ್ತು ಶಬ್ದ ಮಾಲಿನ್ಯ ಉಂಟಾಗಿ, ಸಾರ್ವಜನಿಕ ಆರೋಗ್ಯ ಹದಗೆಡುತ್ತಿದೆ, ಅದಕ್ಕಾಗಿ ಸರ್ಕಾರದಿಂದ ಸಿಗುವ ಆರೋಗ್ಯ ಸೇವಾ ಸೌಲಭ್ಯಗಳನ್ನು ಸಾರ್ವಜನಿಕರು ಪಡೆದು ಚಿಕ್ಕ ಕುಟುಂಬ ಹೊಂದುವುದು ಬಹುಮುಖ್ಯ ಎಂದು ಸಿರಿಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಎಂ.ಜಿ ದೇವರಾಜ್ ಹೇಳಿದರು.

ಚಿತ್ರದುರ್ಗ ತಾಲ್ಲೂಕಿನ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಜನಸಂಖ್ಯಾ ನಿಯಂತ್ರಣ ಪಾಕ್ಷಿಕ ಅಂಗವಾಗಿ ಏರ್ಪಡಿಸಿದ್ದ ದಂಪತಿ ಸಂಪರ್ಕ ಸಭೆ ಕಾರ್ಯಕ್ರಮದಲ್ಲಿ ಕರಪತ್ರ ಪ್ರದರ್ಶನದ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಚಿಕ್ಕ ಕುಟುಂಬ ಚೊಕ್ಕ ಕುಟುಂಬ ಮನೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದ್ದಲ್ಲಿ ಉನ್ನತ ಶಿಕ್ಷಣವನ್ನು ಮಕ್ಕಳಿಗೆ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬಹುದು. ಒಂದೆರಡು ಮಕ್ಕಳ ನಂತರ ಅಪಾಯದ ಹಂಚಿನಲ್ಲಿರುವ ತಾಯಂದಿರುಗಳಿಗೆ ಕುಟುಂಬ ಕಲ್ಯಾಣ  ಶಸ್ತ್ರ ಚಿಕಿತ್ಸೆ ಮಾಡಿಸಿ ಅಪಾಯ ತಂದೊಡ್ಡಿಕೊಳ್ಳುವುದಕ್ಕಿಂತ, ಒಂದು ವೇಳೆ ಹೆಣ್ಣು ಮಕ್ಕಳಿಗೆ ಮಕ್ಕಳು ಬೇಡವೆಂದು ನಿರ್ಧರಿಸಿ ಕುಟುಂಬ ಕಲ್ಯಾಣ ಶಸ್ತ್ರಚಿಕಿತ್ಸೆ ಮಾಡಿಸಿದಾಗ ಕನಿಷ್ಠ ಮೂರು ತಿಂಗಳು ಆರೈಕೆ  ಮಾಡಬೇಕಾದ ಸಂಗತಿ ಬರುತ್ತಿದೆ. ಆದರೆ ಪುರುಷರು ಮುಂದೆ ಬಂದು ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ಬಹು ಮುಖ್ಯವಾಗಿ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ ಸುಲಭ, ಮತ್ತು ಸರಳ ವಿಧಾನ, ಎಂಬುದಾಗಿ ಅರಿತ ನಾವುಗಳು ಯಾವುದೇ ಪುರುಷತ್ವಕ್ಕೆ ಹಾನಿಯಾಗದ ದಾಂಪತ್ಯ ಜೀವನಕ್ಕೆ ಅಡ್ಡಿಯಾಗದ ಈ ಶಸ್ತ್ರ ಚಿಕಿತ್ಸೆಯನ್ನು ಪುರುಷರು ಮಾಡಿಸಿಕೊಳ್ಳಬಹುದು ಎಂದರು.

ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಬಿ.ವಿ ಗಿರೀಶ್ ಮಾತನಾಡಿ, ಕುಟುಂಬ ಕಲ್ಯಾಣ ಕಾರ್ಯಕ್ರಮಗಳಲ್ಲಿ ಶಾಶ್ವತ ವಿಧಾನಗಳಾದ ಹೆಣ್ಣು ಮಕ್ಕಳಿಗೆ ಟುಬೆಕ್ಟಮಿ. ಲ್ಯಾಪ್ರೋಸ್ಕೋಪಿಕ್ ಮತ್ತು ಪುರುಷರಿಗೆ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ  ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿದ್ದು ಮತ್ತು ತಾತ್ಕಾಲಿಕ ವಿಧಾನಗಳಾದ ಮೂರು ತಿಂಗಳಿಗೊಮ್ಮೆ ಹೆಣ್ಣು ಮಕ್ಕಳಿಗೆ ಡಿಂಪ ಇಂಜೆಕ್ಷನ್ ಅಥವಾ ವಾರಕ್ಕೆ ಒಂದು ಬಾರಿ ಛಾಯಾ ಮಾತ್ರೆ ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಆಶಾ ಕಾರ್ಯಕರ್ತೆಯರಲ್ಲಿ ಪಡೆದು ಕುಟುಂಬದ ಗಾತ್ರವನ್ನು ನಿಯಂತ್ರಿಸಿಕೊಳ್ಳಬಹುದು.ನವ ವಿವಾಹಿತರು ಕುಟುಂಬ ಕಲ್ಯಾಣ ವಿಧಾನಗಳನ್ನು ಅಳವಡಿಸಿಕೊಂಡು ಮೊದಲ ಮಗುವನ್ನು ಎರಡು ವರ್ಷದ ನಂತರ ಪಡೆಯುವುದು ಒಳಿತು ಮತ್ತು ಕುಟುಂಬ ಕಲ್ಯಾಣ ವಿಧಾನಗಳಿಂದ ಮಕ್ಕಳ ಮಧ್ಯೆ ಮೂರು ವರ್ಷಗಳ ಅಂತರ ಕಾಪಾಡುವುದು ಹಾಗೂ ತಾಯಿ ಮರಣ ಮತ್ತು ಶಿಶುಮರಣ ತಗ್ಗಿಸಬಹುದು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ ಮಾತನಾಡಿ, ಜನಸಂಖ್ಯಾ ನಿಯಂತ್ರಣ ಕುರಿತು ಜಾಗೃತಿ ಗೀತೆಯನ್ನು ಹಾಡುವುದರ ಮುಖಾಂತರ ಕುಟುಂಬ ಕಲ್ಯಾಣ ತಾತ್ಕಾಲಿಕ ಮತ್ತು ಶಾಶ್ವತ ವಿಧಾನಗಳ ಬಗ್ಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಸಿರಿಗೆರೆ ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿಗಳಾದ ತಿಮ್ಮೇಗೌಡ ಮತ್ತು ಹಿರಿಯ ವೈದ್ಯರಾದ ತುಳಸಿ ರಂಗನಾಥ್ ಹಾಗೂ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್ ಮಂಜುನಾಥ್. ಫಾರ್ಮಸಿ ಅಧಿಕಾರಿ ಮೋಹನ್ ಕುಮಾರ್. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್. ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿ ಶಾರದಮ್ಮ. ವೇದ. ದಂತ ಸಹಾಯಕ ರವೀಂದ್ರನಾಥ ಐಸಿಟಿಸಿ ಕೌನ್ಸಲರ್ ಪ್ರಶಾಂತ್. ಪ್ರದೀಪ್ ಹಾಗೂ ಆಶಾ ಕಾರ್ಯಕರ್ತೆರಾದ ಉಮಾದೇವಿ. ವನಜಾಕ್ಷಮ್ಮ. 25ಕ್ಕೂ ಹೆಚ್ಚು ತಾಯಂದಿರು ಮತ್ತಿತರ ಆರೋಗ್ಯ ಸಿಬ್ಬಂದಿ ಹಾಜರಿದ್ದರು.

Share This Article
Leave a Comment

Leave a Reply

Your email address will not be published. Required fields are marked *