ಚಿತ್ರದುರ್ಗ, (ಅಕ್ಟೋಬರ್. 24) : ಪ್ರಸಕ್ತ ವರ್ಷದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಲಾಗಿರುವ “ಕನ್ನಡಕ್ಕಾಗಿ ನಾವು” ಅಭಿಯಾನದಲ್ಲಿ ಅಚ್ಚ ಕನ್ನಡದಲ್ಲಿ ಮಾತನಾಡುವ ಸ್ಪರ್ಧೆ ನಡೆಸಲಾಗುತ್ತಿದ್ದು, ಸ್ಪರ್ಧೆಯಲ್ಲಿ ಎಲ್ಲ ಸಾರ್ವಜನಿಕರು ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಹಂತದ ಹಾಗೂ ಹೊರನಾಡಿನವರಿಗಾಗಿ ಇರುವ ಮೊದಲ ಹಂತದ ಸ್ಪರ್ಧೆಯಲ್ಲಿ ಅಕ್ಟೋಬರ್ 24ರ ಬೆಳಿಗ್ಗೆ 8 ಗಂಟೆಯಿಂದ ಅಕ್ಟೋಬರ್ 26ರ ರಾತ್ರಿ 10 ಗಂಟೆಯೊಳಗೆ ಸಾರ್ವಜನಿಕರು ತಮ್ಮ ಮಾಹಿತಿಯೊಂದಿಗೆ ವಿಡಿಯೋ ಕೊಂಡಿಯನ್ನು https://forms.gle/CRfQAZonSGQh83Sf7 ಈ ಗೂಗಲ್ ಲಿಂಕ್ ನಮೂನೆಯಲ್ಲಿ ನಮೂದಿಸಬಹುದಾಗಿದೆ.
ಜಿಲ್ಲಾ ಹಂತದಲ್ಲಿ ಮೊದಲನೇ, ಎರಡನೇ ಹಾಗೂ ಮೂರನೇ ಸ್ಥಾನದಲ್ಲಿನ ವಿಜೇತರಿಗೆ ಕ್ರಮವಾಗಿ ಐದು ಸಾವಿರ, ಮೂರು ಸಾವಿರ ಮತ್ತು ಎರಡು ಸಾವಿರ ಬಹುಮಾನ ನೀಡಲಾಗುತ್ತದೆ. ಸ್ಪರ್ಧೆಯ ಮೌಲ್ಯಮಾಪನಕ್ಕಾಗಿ ಜಿಲ್ಲೆಯಲ್ಲಿ ಮೂರು ಜನ ತಜ್ಞರನ್ನು ಕಾರ್ಯಕ್ರಮ ಸಮಿತಿಯು ಈಗಾಗಲೇ ಆಯ್ಕೆ ಮಾಡಿದ್ದು, ಮೌಲ್ಯಮಾಪನವನ್ನು ಸಮಿತಿಗೆ ಸಲ್ಲಿಸಲಾಗುತ್ತದೆ. ಮೌಲ್ಯಮಾಪನದ ಆಯ್ಕೆಮೇರೆಗೆ ಆಯ್ಕೆಗೊಂಡವರ ವಿವರಗಳನ್ನು ಅಕ್ಟೋಬರ್ 28 ರಂದು ಅವರ ಇಮೇಲ್ ಅಥವಾ ದೂರವಾಣಿ ಪಠ್ಯ ಸಂದೇಶದ ಮೂಲಕ ಮಾಹಿತಿ ನೀಡಲಾಗುವುದು.
ಬೆಂಗಳೂರಿನಲ್ಲಿ ಅಕ್ಟೋಬರ್ 30ರಂದು ಅಂತಿಮ ಹಂತದ ಸ್ಪರ್ಧೆಯನ್ನು ನಡೆಸಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ.ಧನಂಜಯ ತಿಳಿಸಿದ್ದಾರೆ.