ಕೋಲಾರ: ಈಗಂತು ದೊಡ್ಡ ದೊಡ್ಡ ಸ್ಟಾರ್ ಸಿನಿಮಾಗಳಿಗೆ ಪೈರಸಿ ಕಾಟ ತಪ್ಪಿದ್ದಲ್ಲ. ಪೈರಸಿಯಿಂದಾಗಿ ನಿರ್ಮಾಪಕರು ನಷ್ಟ ಅನುಭವಿಸಿದಂತಾಗುತ್ತಿದೆ. ಇದೀಗ ವಿಕ್ರಾಂತ್ ರೋಣ ಸಿನಿಮಾಗೂ ಪೈರಸಿಯ ಭೂತ ಮೆಟ್ಟಿಕೊಂಡಿದೆ. ದೇಶಾದ್ಯಂತ ರಿಲೀಸ್ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿರುವ ವಿಕ್ರಾಂತ್ ರೋಣ ಪೈರಸಿಯ ಕಾಟಕ್ಕೆ ಸಿಲುಕಿದೆ.
ಅದರಲ್ಲೂ ಮಕ್ಕಳನ್ನು ಒಳ್ಳೆ ದಾರಿಯಲ್ಲಿ ನಡೆಸಬೇಕಾದ, ಉತ್ತಮ ಶಿಕ್ಷಣ ನೀಡಬೇಕಾದ ಶಿಕ್ಷಕರೇ ಪೈರಸಿ ಮಾಡಿ, ಮಕ್ಕಳಿಗೆ ಸಿನಿಮಾ ತೋರಿಸಿದ್ದಾರೆ. ಕೋಲಾರದ ಮುಳಬಾಗಿಲು ತಾಲೂಕಿನ ಮೊರಾರ್ಜಿ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ವಾರ್ಡನ್ ವೆಂಕಟಸ್ವಾಮಿ ಹಾಗೂ ಪ್ರಿನ್ಸಿಪಾಲ್ ದೇವರಾಜ್ ಸೇರಿ ವಿಕ್ರಾಂತ್ ರೋಣ ಸಿನಿಮಾದ ಪೈರಸಿಯನ್ನು ಮಕ್ಕಳಿಗೆ ಸಾಮೂಹಿಕ ಪ್ರದರ್ಶನ ಮಾಡಿಸಿದ್ದಾರೆ.
ಈ ಸಂಬಂಧ ನಿರ್ಮಾಪಕ ಜಾಕ್ ಮಂಜು ಈಗಾಗಲೇ ಕೋಲಾರದ ಎಸ್ಪಿಗೆ ದೂರು ನೀಡಿದ್ದಾರೆ. ಶಿಕ್ಷಕರೇ ಇಲ್ಲಿ ಪೈರಸಿ ಸಿನಿಮಾ ತೋರಿಸಿದ್ದಾರೆ. ಮಕ್ಕಳಿಗೆ ಯಾವುದು ಸರಿ, ಯಾವುದು ತಪ್ಪು ಅಂತ ಹೇಳಿಕೊಡಬೇಕಾದ ಶಿಕ್ಷಕರೇ ಈ ರೀತಿ ಮಾಡಿದರೆ, ಮಕ್ಕಳು ಏನು ಕಲಿಯುತ್ತಾರೆ. ದಯವಿಟ್ಟು ಈ ರೀತಿಯ ತಪ್ಪು ಮಾಡಬೇಡಿ. ಪೈರಸಿ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ ಎಂದಿದ್ದಾರೆ. ಇನ್ನು ಕಲಬಿರಗಿಯಲ್ಲಿಯೂ ವಿಕ್ರಾಂತ್ ರೋಣ ಸಿನಿಮಾ ಕೇಬಲ್ ಚಾನೆಲ್ ಒಂದರಲ್ಲಿ ಪ್ರಸಾರವಾಗಿದೆ.