ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸಾಕಷ್ಟು ನಷ್ಟ ಉಂಟಾಗಿದೆ. ನಿನ್ನೆ ಹೇಗೋ ಮಳೆರಾಯ ಕೊಂಚ ಬಿಡುವು ಕೊಟ್ಟ ಎಂದು ಖುಷಿ ಪಟ್ಟುಕೊಳ್ಳುವಾಗಲೇ ಸಂಜೆ ವೇಳೆಗೆ ಮಳೆ ಹಿಡಿದುಕೊಂಡಿತ್ತು. ರಾತ್ರಿಯಾಗುತ್ತಿದ್ದಂತೆ ಜೋರು ಮಳೆ ಬಂದಿದೆ.
ರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿ ತುಂಬೆಲ್ಲಾ ನೀರಿನ ಮಯವಾಗಿದೆ. ಯಲಹಂಕದ ಅಪಾರ್ಟ್ಮೆಂಟ್ ಒಂದರ ವಾಸಿಗಳು ಅಕ್ಷರಶಃ ನಲುಗಿ ಹೋಗಿದ್ದಾರೆ. ಮನೆಯೊಳಗೆಲ್ಲಾ ನೀರು ತುಂಬಿ ದಿನ ರಾತ್ರಿ ಕಳೆಯೋದೆ ಸಾಹಸವಾದಂತಾಗಿದೆ.
ಪೀಣ್ಯ, 8ನೇ ಮೈಲಿ, ಯಲಹಂಕ, ವಿದ್ಯಾರಣ್ಯಪುರ ಸೇರಿದಂತೆ ಹಲವು ಭಾಗಗಳಲ್ಲಿ ನದಿಯಾದಂತಾಗಿದೆ. ಯಲಹಂಕ ಕೆರೆ ಮತ್ತೊಮ್ಮೆ ಕೋಡಿ ಬಿದ್ದಿದ್ದು, ಕೋಗಿಲು ಕ್ರಾಸ್ ಬಳಿ ಇರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಗೆ ನೀರು ನುಗ್ಗಿದೆ. ಮನೆಗಳಿಗೆಲ್ಲಾ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇನ್ನು ಈ ಸಂಬಂಧ ಮಾತನಾಡಿರುವ ಶಾಸಕ ಹೆಚ್ ವಿಶ್ವನಾಥ್, ಪರಿಶೀಲನೆ ನಡೆಸಿದ್ದೇವೆ. ಕಳೆದ ಮೂರು ದಿನದಿಂದ ಆದ ಮಳೆ ಅವತ್ತೆ ಒಣಗಿತ್ತು. ಆದ್ರೆ ರಾತ್ರಿ ನಿರೀಕ್ಷೆಗೂ ಮೀರಿ ಮಳೆಯಾಗಿದೆ. ಡಿಸಿ ಹಾಗೂ ಬಿಬಿಎಂಪಿ ಆಯುಕ್ತರಿಗೆ ಇಲ್ಲಿನ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದೇವೆ. ಎನ್ಡಿಆರ್ಎಫ್ ನಿಂದ ಬೋಟ್ ತರಿಸಲಾಗುತ್ತಿದೆ. ನಿವಾಸಿಗಳಿಗೆ ಊಟ, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.