ಚಿತ್ರದುರ್ಗ,( ಜೂನ್.02): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಜೂನ್ 4 ರಂದು ಜಿಲ್ಲೆಗೆ ಆಗಮಿಸುವರು. ಹಿರಿಯೂರು ಹಾಗೂ ಹೊಸದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಟ್ಟು 161 ಕೋಟಿ ವೆಚ್ಚದ, 136 ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಹಿರಿಯೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ 41 ಕಾಮಗಾರಿಗಳು ಹಾಗೂ ಹೊಸದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 95 ಕಾಮಗಾರಿಗಳಿದ್ದು, ಇದರಲ್ಲಿ 43 ಶಂಕುಸ್ಥಾಪನೆ ಕಾಮಗಾರಿಗಳು, 92 ಉದ್ಘಾಟನಾ ಕಾರ್ಯಕ್ರಮಗಳಿವೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜೂನ್ 04 ರಂದು ಬೆಳಿಗ್ಗೆ 10.20ಕ್ಕೆ ಹೆಲಿಕಾಪ್ಟರ್ ಮೂಲಕ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದ ಹೆಲಿಪ್ಯಾಡ್‍ಗೆ ಮುಖ್ಯಮಂತ್ರಿಗಳು ಆಗಮಿಸುವರು. ನಂತರ ರಸ್ತೆಯ ಮೂಲಕ ಹೊಸಹಳ್ಳಿ ಗ್ರಾಮದ ವೇದಾವತಿ ನದಿಯ ಬ್ಯಾರೇಜ್‍ಗೆ ಮುಖ್ಯಮಂತ್ರಿಗಳು ಆಗಮಿಸಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ, ಹಿರಿಯೂರು ತಾಲ್ಲೂಕು ಆಡಳಿತ ಇವರುಗಳ ಸಂಯುಕ್ತಾಶ್ರಯದಲ್ಲಿ ಹಿರಿಯೂರು ತಾಲ್ಲೂಕಿನ ಧರ್ಮಪುರ ಕೆರೆ ಮತ್ತು ಇತರೆ ಏಳು ಕೆರೆಗಳಿಗೆ ವೇದಾವತಿ ನದಿಯಿಂದ ಏತ ನೀರಾವರಿ ಮೂಲಕ ನೀರನ್ನು ಕೆರೆಗಳಿಗೆ ತುಂಬಿಸುವ ಕಾಮಗಾರಿಯ ಶಂಕುಸ್ಥಾಪನೆ ಸಮಾರಂಭದಲ್ಲಿ ಭಾಗವಹಿಸುವರು.
ನಂತರ ಹರಿಯಬ್ಬೆ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಹಿರಿಯೂರು ವಿಧಾನ ಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದರು.
ನಂತರ ಮರಳಿ ದೇವರಕೊಟ್ಟ ಹೆಲಿಪ್ಯಾಡ್‍ಗೆ ತೆರಳಿ ಹೆಲಿಕಾಪ್ಟರ್ ಮೂಲಕ ಮಧ್ಯಾಹ್ನ 1ಕ್ಕೆ ಹೊಸದುರ್ಗ ತಾಲೂಕಿನ ಮಧುರೆ ಆಗಮಿಸಿ ಭಗೀರಥ ಪೀಠ ಮಹಾಸಂಸ್ಥಾನದ ವತಿಯಿಂದ ಆಯೋಜಿಸಲಾದ ಅಖಿಲ ಭಾರತ ಶ್ರೀ ಭಗೀರಥ ಜಯಂತ್ಯೋತ್ಸವ ಹಾಗೂ ಶ್ರೀ ಭಗೀರಥ ದೇವಸ್ಥಾನ ಲೋಕಾರ್ಪಣೆ ಹಾಗೂ ಉಪ್ಪಾರರ ಬೃಹತ್ ಸಮಾವೇಶದಲ್ಲಿ ಪಾಲ್ಗೊಳ್ಳುವರು.
ನಂತರ 2.50ಕ್ಕೆ ಹೊಸದುರ್ಗ ಕ್ಷೇತ್ರದ ಇಂಡಿದೇವರ ಹಟ್ಟಿ ಗ್ರಾಮದಲ್ಲಿ ಹೊಸದುರ್ಗ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಲ ಸಂಪನ್ಮೂಲ ಇಲಾಖೆ ವತಿಯಿಂದ ರೂ. 136.50 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಅಳ ಮತ್ತು ಉದ್ದ ಸೇತುವೆಯ ಭೂಮಿಪೂಜೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ, ನಂತರ ಸಂಜೆ 4ಕ್ಕೆ ಬೆಂಗಳೂರಿಗೆ ಪ್ರಯಾಣ ಬೆಳೆಸುವರು. ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಹಾಗೂ ಸೂಕ್ತ ಬಂದೋಬಸ್ತ್, ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಮುಖ್ಯಮಂತ್ರಿಗಳೊಂದಿಗೆ ಅಂದು ಕೇಂದ್ರ ಪಂಚಾಯತ್ ರಾಜ್ ಖಾತೆ ರಾಜ್ಯ ಸಚಿವ ಕಪಿಲ್ ಮೋರೇಶ್ವರ ಪಾಟೀಲ್, ರಾಜ್ಯ ಕಂದಾಯ ಸಚಿವ ಆರ್.ಅಶೋಕ್, ಸಣ್ಣ ನೀರಾವರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಭಗೀರಥ ಗುರುಪೀಠದಲ್ಲಿ ನಡೆಯುವ ಅಖಿಲ ಭಾರತ ಶ್ರೀ ಭಗೀರಥ ಜಯಂತ್ಯೋತ್ಸವದಲ್ಲಿ ಬಿಹಾರ ರಾಜ್ಯದ ಉಪಮುಖ್ಯಮಂತ್ರಿ ರೇಣುದೇವಿ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಮಾತನಾಡಿ, ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಖ್ಯಮಂತ್ರಿಗಳ ಭದ್ರತೆಗಾಗಿ ದಾವಣಗೆರೆ ವಲಯದಿಂದ 877 ಪೊಲೀಸ್ ಸಿಬ್ಬಂದಿ, 80 ಅಧಿಕಾರಿಗಳು, ಮೂರು ಕೆಎಸ್‍ಆರ್‍ಪಿ, ಕ್ಯೂಆರ್‍ಪಿ ಹಾಗೂ ಎಆರ್‍ಪಿ ತುಕಡಿಗಳನ್ನು ನಿಯೋಜಿಸಲಾಗುವುದು ಎಂದರು.
ಹಿರಿಯೂರಿನ ದೇವರಕೊಟ್ಟ ಹೆಲಿಪ್ಯಾಡ್‍ನಲ್ಲಿ ಮತ್ತು ಹೊಸದುರ್ಗದ ಭಗೀರಥ ಗುರಪೀಠದ ಹೆಲಿಪ್ಯಾಡ್‍ನಲ್ಲಿ ಸಾರ್ವಜನಿಕರು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ ಇದ್ದರು.