ಸುದ್ದಿಒನ್ , ಚಳ್ಳಕೆರೆ,(ಸೆ.17): ಬರದನಾಡು ಚಳ್ಳಕೆರೆ ಕ್ಷೇತ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತಿರುವ, ಸರಳ ವ್ಯಕ್ತಿತ್ವ ಹೊಂದಿರುವ ಶಾಸಕ ಟಿ.ರಘುಮೂರ್ತಿ ಅವರ ಇಚ್ಛಾಶಕ್ತಿಯ ಫಲದಿಂದ ನಗರದಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಜಿಟಿಟಿಸಿ ತರಬೇತಿ ಕೇಂದ್ರ ನಾಳೆ(ಸೆ.18) ಉದ್ಘಾಟನೆಗೊಳ್ಳಲಿವೆ.
ಕಳೆದ 2016-17 ನೇ ಸಾಲಿನಲ್ಲಿ ಸುಮಾರು 61 ಕೋಟಿ ವೆಚ್ಚದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಕಟ್ಟಡ ನಿರ್ಮಾಣ ಪ್ರಾರಂಭಿಸಲಾಗಿತ್ತು. ನಾಳೆ ಉದ್ಘಾಟನೆಗೊಳ್ಳಲಿದೆ.
ಇನ್ನೂ ಜಿಟಿಡಿಸಿ ಕೇಂದ್ರವು 2017-18ನೇ ಸಾಲಿನಲ್ಲಿ ಸುಮಾರು 44.34 ಕೋಟಿ ವೆಚ್ಚದಲ್ಲಿ ಬಳ್ಳಾರಿ ರಸ್ತೆಯಲ್ಲಿ 10 ಎಕರೆಯಲ್ಲಿ ನಿರ್ಮಾಣ ಮಾಡಲಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 1972ರಲ್ಲಿ ಮೊದಲಿಗೆ ಜಿಟಿಟಿಸಿ ತರಬೇತಿ ಸೆಂಟರ್ ಆರಂಭವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ರಾಜ್ಯದಲ್ಲಿ 28 ಕೇಂದ್ರಗಳು ತೆರೆಯಲಾಗಿದ್ದು, ಬೆಂಗಳೂರು ಹೊರತು ಪಡಿಸಿದರೆ ಈಗ ಚಳ್ಳಕೆರೆಯಲ್ಲಿ ಜಿಟಿಡಿಸಿ ಕೇಂದ್ರ ಕ್ಯಾಂಪಸ್ ನಿರ್ಮಾಣವಾಗಿ ನಾಳೆ ಉದ್ಘಾಟನೆಗೊಳ್ಳಲಿದೆ.
ಶಾಸಕ ಟಿ.ರಘುಮೂರ್ತಿ ಅವರ ಇಚ್ಛಾಶಕ್ತಿಯ ಫಲ
ಚಿತ್ರದುರ್ಗದಲ್ಲಿ ಜಿಟಿಟಿಸಿ ಕೇಂದ್ರ ತೆರೆಯಲು ಸರ್ಕಾರ ಅನುಮತಿ ನೀಡಿತ್ತು.ಆದರೆ ಜಾಗ ಮತ್ತು ಇಚ್ಛಾಶಕ್ತಿಯ ಕೊರತೆಯಿಂದ ಚಿತ್ರದುರ್ಗದಲ್ಲಿ ಜಿಟಿಟಿಸಿ ಸೆಂಟರ್ ನೆನೆಗುದಿಗೆ ಬಿದ್ದಿತ್ತು.
ಚಳ್ಳಕೆರೆಯಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಶಾಸಕ ಟಿ.ರಘುಮೂರ್ತಿ ಅಂದಿನ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚಿಸಿ ಇಂಜಿನಿಯರಿಂಗ್ ಕಾಲೇಜು ಮತ್ತು ಜಿಟಿಟಿಸಿ ಕೇಂದ್ರ ಎರಡನ್ನು ಚಳ್ಳಕೆರೆಗೆ ತರಲು ಒಪ್ಪಿಗೆ ಪಡೆದು, ಬಳ್ಳಾರಿ ರಸ್ತೆಯಲ್ಲಿ 10 ಎಕರೆಗೆ ಜಾಗ ಮಂಜೂರು ಮಾಡಿಸಿ ಬೃಹತ್ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸೆ.18ರಂದು ಉದ್ಘಾಟನೆ; ವಿವಿಧ ಗಣ್ಯರು ಭಾಗಿ
ನಾಳೆ(ಸೆ.18) ರಂದು 3 ಗಂಟೆಗೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ಜಿಟಿಡಿಸಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ರಾಜ್ಯ ಸಚಿವರಾದ ಎ. ನಾರಾಯಣಸ್ವಾಮಿ ಉಪಸ್ಥಿತರಿರುವರು.
ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ಸಚಿವರಾದ ಡಾ:ಸಿ.ಎನ್. ಅಶ್ವಥ್ನಾರಾಯಣ್ ಅವರು ಉದ್ಘಾಟನೆ ನೆರವೇರಿಸುವರು.
ಸಾರಿಗೆ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಶ್ರೀರಾಮುಲು ಅವರು ಜಿಟಿಟಿಸಿ ಕೇಂದ್ರ ಸಂಕೀರ್ಣದ ಉದ್ಘಾಟನೆ ನೆರವೇರಿಸುವರು. ಶಾಸಕರಾದ ಟಿ.ರಘುಮೂರ್ತಿ ಅಧ್ಯಕ್ಷತೆ ವಹಿಸುವರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಶಾಸಕರಾದ ಎಂ. ಚಂದ್ರಪ್ಪ, ಶಾಸಕರಾದ ಜಿ.ಹೆಚ್ ತಿಪ್ಪಾರೆಡ್ಡಿ, ಗೂಳಿಹಟ್ಟಿ ಡಿ. ಶೇಖರ್, ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಜಿ. ರಘುಆಚಾರ್, ಡಾ. ವೈ.ಎ ನಾರಾಯಣಸ್ವಾಮಿ, ಡಾ; ಚಿದಾನಂದ ಎಂ. ಗೌಡ, ಕರ್ನಾಟಕ ರಾಜ್ಯ ಖನಿಜ ನಿಗಮದ ಅಧ್ಯಕ್ಷರಾದ ಎಸ್. ಲಿಂಗಮೂರ್ತಿ, ಚಳ್ಳಕೆರೆ ನಗರಸಭೆ ಅಧ್ಯಕ್ಷೆ ಸಿ.ಬಿ ಜಯಲಕ್ಷ್ಮಿ ಕೃಷ್ಣಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ
ಚಳ್ಳಕೆರೆ ಭಾಗದ ಸಾವಿರಾರು ವಿದ್ಯಾರ್ಥಿಗಳು ಇಂಜಿನಿಯರಿಂಗ್ ಶಿಕ್ಷಣ ಪಡೆಯಲು ದೂರದ ನಗರಗಳಿಗೆ ವಲಸೆ ಹೋಗಬೇಕಿತ್ತು. ಆದರೆ ಈಗ ಚಳ್ಳಕೆರೆ ನಗರದಲ್ಲೇ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಾಲೇಜು ನಿರ್ಮಾಣಗೊಂಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದ ಬುನಾದಿ ಆಗಲಿದೆ.
ಟಿ.ರಘುಮೂರ್ತಿ, ಶಾಸಕರು, ಚಳ್ಳಕೆರೆ
GIPHY App Key not set. Please check settings