ಹೊಳಲ್ಕೆರೆ, (ಮೇ 5) : ಸುಳ್ಳುಗಳ ಸರಮಾಲೆ, ಕೋಮು ಸಂಘರ್ಷದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಯುವ ಪೀಳಿಗೆಯ ಬದುಕಿಗೆ ಕಂಟಕವಾಗಿ ಎರಗಿದೆ ಎಂದು ನಟಿ ಭಾವನಾ ಆರೋಪಿಸಿದರು.
ತಾಲೂಕಿನ ಹಿರೇಕಂದವಾಡಿ, ಕಲ್ಲವ್ವನಾಗತಿಹಳ್ಳಿ, ಬಿ.ದುರ್ಗ ಗ್ರಾಮಗಳಲ್ಲಿ ಕಾಂಗ್ರೆಸ್ ಪಕ್ಷ ಅಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.
ಈಗಾಗಲೇ ನಿರುದ್ಯೋಗ, ಬೆಲೆ ಏರಿಕೆ, ಖಾಸಗೀಕರಣದಿಂದ ಯುವಪೀಳಿಗೆ, ರೈತರು, ಕಾರ್ಮಿಕರ ಬದುಕು ಮೂರಾಬಟ್ಟೆ ಆಗಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಬಣ್ಣದ, ಸುಳ್ಳಿನ ಮಾತಿಗೆ ಮಾರು ಹೋದರೇ ಯುವ ಪೀಳಿಗೆ ವಿನಾಶದ ಅಂಚಿಗೆ ತಲುಪುವುದು ಖಚಿತ ಎಂದು ಎಚ್ಚರಿಸಿದರು.
ಬಿಜೆಪಿಯು ಚುನಾವಣಾ ಪೂರ್ವದಲ್ಲಿ ನಾವು ಅಧಿಕಾರಕ್ಕೆ ಬಂದರೆ ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ಸೃಷ್ಟಿಸಲಾಗುವುದು ಎಂಬ ಹುಸಿ ಭರವಸೆಯನ್ನು ಕೊಟ್ಟು ಯುವ ಸಮುದಾಯದ ಮತಗಳನ್ನು ಪಡೆದು ಅಧಿಕಾರಕ್ಕೆ ಬಂದ ನಂತರ ಉದ್ಯೋಗದ ಭದ್ರತೆ ಇಲ್ಲದಂತಾಯಿತು. ಹೀಗಾಗಿ ಬರೀ ಸುಳ್ಳು ಭರವಸೆಗಳನ್ನು ನೀಡಿದ ಬಿಜೆಪಿಗೆ ತಕ್ಕ ಪಾಠ ಕಳಿಸಲು ಈ ಚುನಾವಣೆ ಉತ್ತಮ ಮಾರ್ಗ ಎಂದರು.
ಕ್ಷೇತ್ರದಲ್ಲಿನ ಭ್ರಷ್ಟಾಚಾರ ರಾಜ್ಯದಲ್ಲಿನ ಶೇ.40 ಮೀರಿಸಿದೆ ಎಂಬ ಮಾತು ಜನರ ಮನದಲ್ಲಿದೆ. ಎಚ್.ಆಂಜನೇಯ ಅಧಿಕಾರ ಅವಧಿ ಸುವರ್ಣಯುಗ ಆಗಿತ್ತು ಎಂದು ಜನ ಸ್ಮರಿಸುತ್ತಿದ್ದಾರೆ.ಹೊಳಲ್ಕೆರೆ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ದಿನವೇ ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಅವರು ಗೆಲುವು ನಿಶ್ಚಿತವಾಗಿದ್ದು, ಘೋಷಣೆಯೊಂದು ಬಾಕಿ ಉಳಿದಿದೆ ಎಂದು ಹೇಳಿದರು.
ಕ್ಷೇತ್ರದ ಎಲ್ಲೆಡೆ ಸಂಚರಿಸುತ್ತಿದ್ದು, ಯಾವ ಹಳ್ಳಿಗೆ ಹೋದರು ಸ್ವಯಂ ಆಗಿ ಜನ ಪಾಲ್ಗೊಳ್ಳುತ್ತಿದ್ದು, ಕ್ಷೇತ್ರದ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಆಂಜನೇಯ ಅವರ ಗೆಲುವು ನಮ್ಮ ಸ್ವಾಭಿಮಾನದ ಪ್ರಶ್ನೇ ಎಂದು ಜನ ಹೇಳುತ್ತಿದ್ದಾರೆ. ಜತೆಗೆ ಬಿಜೆಪಿಯ ಸಾವಿರಾರು ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಆಂಜನೇಯ ಅವರ ಕೈಬಲಪಡಿಸುತ್ತಿದ್ದಾರೆ. ಈ ಬಾರಿ ಶೇ. 100 ರಷ್ಟು ಅವರು ಗೆಲುವು ಸಾಧಿಸಲಿದ್ದು, ಅದು ದಾಖಲೆ ಮತಗಳ ಅಂತರದಲ್ಲಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನುಡಿದಂತೆ ನಡೆಯುವ ಪಕ್ಷ ಅಂದರೆ ಅದು ಕಾಂಗ್ರೆಸ್ ಮಾತ್ರ. ಸಿದ್ದರಾಮಯ್ಯ ಅವರ ಅವಧಿಯಲ್ಲಿ ಸರ್ವರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿದೆ. ಇದೀಗ ಕಾಂಗ್ರೆಸ್ ಪಕ್ಷದ 10 ಕೆಜಿ ಪಡಿತರ, 200 ಯುನಿಟ್ ವಿದ್ಯುತ್, 3000 ನಿರುದ್ಯೋಗಿ ಭತ್ಯೆ, ಮನೆ ಒಡತಿಗೆ 2000, ಎಲ್ಲ ಮಹಿಳೆಯರಿಗೆ ಉಚಿತ ಬಸ್ ಸೌಲಭ್ಯದ ಭರವಸೆ ನೀಡಿದೆ. ಇವು ಜನಸಾಮಾನ್ಯರಿಗೆ ಅತ್ಯವಶ್ಯಕವಾಗಿವೆ ಎಂದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಫಲಾನುಭವಿಗಳಿಗೆ ದೊರೆಯಬೇಕಾದ ಶೇ 85ರಷ್ಟು ಹಣವನ್ನು ನುಂಗಿ ನೀರು ಕುಡಿದಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಸುಳ್ಳಿನ ಕಂತೆ. ಅವರದ್ದೇ ಸರ್ಕಾರ ಕೇಂದ್ರ, ರಾಜ್ಯದಲ್ಲಿದ್ದು ತನಿಖೆ ಏಕೆ ನಡೆಸಲಿಲ್ಲ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಆಡಳಿತದಲ್ಲಿ ಬಡವರು, ಶ್ರೀಮಂತರು ಎನ್ನದೇ ಸರ್ವರಿಗೂ ಸಮಾನ ಅವಕಾಶಗಳನ್ನು ನೀಡಲಾಗುತ್ತಿತ್ತು. ಇದೀಗ ಬಿಜೆಪಿ ಸರ್ಕಾರದಲ್ಲಿ ಶೇ.40 ಪರ್ಸೆಂಟ್ ಭ್ರಷ್ಟಾಚಾರ ಕೂಪಕ್ಕೆ ಅನೇಕ ಗುತ್ತಿಗೆದಾರರು ತಮ್ಮ ಪ್ರಾಣವನ್ನೆ ಕಳೆದುಕೊಂಡಿದ್ದಾರೆ.
ಇದನ್ನ ಕಾಂಗ್ರೆಸ್ ಪಕ್ಷದವರು ಆರೋಪಿಸುತ್ತಿಲ್ಲ ಬದಲಿಗೆ ಗುತ್ತಿಗೆದಾರರೇ, ಅವರ ಪಕ್ಷದ ಶಾಸಕರೇ ನೇರ ಆರೋಪ ಮಾಡಿದ್ದಾರೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಚಕಾರವೆತ್ತುತ್ತಿಲ್ಲ. ಪ್ರಧಾನಿ ಹುದ್ದೆಯಲ್ಲಿರುವವರು ಸಡಿಲವಾದ ಮಾತುಗಳನ್ನು ಆಡುವುದು ಅವರ ಘನತೆಗೆ ಶೋಭೆತರುವುದಿಲ್ಲ ಎಂದು ಹೇಳಿದರು.
ಮಾಜಿ ಶಾಸಕ ಎ.ವಿ.ಉಮಾಪತಿ ಮಾತನಾಡಿ, ಈ ಬಾರಿ ಚುನಾವಣೆಗೆ ನಮ್ಮೆಲ್ಲರ ಪ್ರೀತಿಗೆ ಮಣಿದು ಆಂಜನೇಯ ಸ್ಪರ್ಧೆ ಮಾಡಿದ್ದಾರೆ, ಅವರ ಗೆಲುವು ನಮ್ಮೆಲ್ಲರ ಹೊಣೆ ಆಗಿದೆ.
ಎಐಸಿಸಿ ಆಂಜನೇಯ ಅವರಿಗೆ ಉನ್ನತ ಸ್ಥಾನಮಾನ ನೀಡಿ, ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆ ಎಂಎಲ್ಸಿ ಮಾಡಿಕೊಂಡು ಮಂತ್ರಿ ಮಾಡುವುದಾಗಿ ತಿಳಿಸಿತ್ತು. ಆದರೆ, ಹೊಳಲ್ಕೆರೆ ಕ್ಷೇತ್ರದ ಜನರ ಪ್ರೀತಿಗೆ ಈ ಬಾರಿ ಸ್ಪರ್ಧೆ ಮಾಡಿದ್ದಾರೆ, ಅವರು ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲಿಸಿಕೊಳ್ಳಬೇಕು ಎಂದು ಹೇಳಿದರು.
ಕೆಪಿಸಿಸಿ ಅಸಂಘಟಿತ ಕಾರ್ಮಿಕರ ಘಟಕದ ಅಧ್ಯಕ್ಷ ಜಿ.ಎಸ್.ಮಂಜುನಾಥ್ ಮಾತನಾಡಿ, ಕ್ಷೇತ್ರದಲ್ಲಿ ಅಹಂಕಾರ, ಹಣದ ಮದದಿಂದ ಮೆರೆಯುತ್ತಿರುವ ಶಾಸಕ ಚಂದ್ರಪ್ಪನಿಗೆ ತಕ್ಕಪಾಠ ಕಲಿಸಲು ಬಿಜೆಪಿ ಕಾರ್ಯಕರ್ತರು ಸಹಸ್ರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.ಉಡಾಫೆ, ದೊಡ್ಡವರ ಕುರಿತು ಅಶ್ಲೀಲ ಮಾತು, ಸಮುದಾಯಗಳ ಮಧ್ಯೆ ಜಗಳ ತಂದಿಟ್ಡು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವ ಚಂದ್ರಪ್ಪನ ಅಹಂಕಾರಕ್ಕೆ ಈ ಬಾರಿ ಚುನಾವಣೆ ತಕ್ಕ ಪಾಠ ಕಲಿಸಲಿದೆ ಎಂದು ಹೇಳಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿನ ಒಗ್ಗಟ್ಡು, ಬಿಜೆಪಿಯ ಅನೇಕ ನಾಯಕರು ಪಕ್ಷಕ್ಕೆ ಸೇರ್ಪಡೆ ಆಗಿರುವುದು ಕ್ಷೇತ್ರದಲ್ಲಿ ಕಾಂಗ್ರೆಸ್ ಪರ ಬಹುದೊಡ್ಡ ಅಲೆ ಸೃಷ್ಟಿಸಿದೆ.
ಕಾಂಗ್ರೆಸ್ ಪಕ್ಷದ ಸಭೆ, ಪ್ರಚಾರಕ್ಕೆ ವ್ಯಕ್ತವಾಗುತ್ತಿರುವ ಜನಬೆಂಬಲ ಕಂಡು, ಶಾಸಕ ಚಂದ್ರಪ್ಪ ಆತಂಕದಿಂದ ತನ್ನ ನಾಲಿಗೆ ಹರಿಬಿಡುತ್ತಿದ್ದಾರೆ. ಅವರ ಅಸಂಬದ್ಧ ಮಾತು, ಉಡಾಫೆ ಹೇಳಿಕೆಗಳು ಜನರನ್ನು ಕೆರಳಿಸಿದ್ದು, ಅನೇಕ ಹಳ್ಳಿಗಳಿಗೆ ಪ್ರವೇಶವನ್ನೇ ಕೊಡುತ್ತಿಲ್ಲ ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಟಿ.ಹನುಮಂತಪ್ಪ, ಜಿಪಂ ಮಾಜಿ ಅಧ್ಯಕ್ಷರಾದ ಗಿರಿಜಮ್ಮ ಬಸವರಾಜ್, ವಿಶಾಲಾಕ್ಷಿ ನಟರಾಜ್, ಸದಸ್ಯರಾದ ಭಾರತೀ ಕಲ್ಲೇಶ್, ಎಸ್.ಜೆ.ರಂಗಸ್ವಾಮಿ, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ಕಾಟೀಹಳ್ಳಿ ಶಿವಣ್ಣ, ಕೆಪಿಸಿಸಿ ಕೋ ಆರ್ಡಿನೇಟರ್ ಲೋಕೇಶ್‍ನಾಯ್ಕ್, ತಾಪಂ ಮಾಜಿ ಉಪಾಧ್ಯಕ್ಷ ಓಂಕಾರಸ್ವಾಮಿ, ಮುಖಂಡ ಗೋಡೆಮನೆ ಹನುಮಂತಪ್ಪ, ರುದ್ರಣ್ಣ ಮೊದಲಾದವರಿದ್ದರು.