ಈ ವಿಧಾನಪರಿಷತ್ ಚುನಾವಣೆಯಲ್ಲಿ ಗೆಲುವು ನನ್ನದೆ : ಕೆ.ಎಸ್.ನವೀನ್

2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಸುದ್ದಿಒನ್, ಚಿತ್ರದುರ್ಗ, (ನ.23): ವಿಧಾನಪರಿಷತ್ ಚುನಾವಣೆಯಲ್ಲಿ ಕಳೆದ ಎರಡು ಬಾರಿ ಸೋತಿದ್ದರೂ ರಾಜ್ಯ ಹಾಗೂ ರಾಷ್ಟ್ರ ನಾಯಕರುಗಳು ನನ್ನ ಮೇಲೆ ವಿಶ್ವಾಸವಿಟ್ಟು ಈ ಬಾರಿಯೂ ವಿಧಾನಪರಿಷತ್ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿದ್ದಾರೆ. ಹಾಗಾಗಿ ಈ ಚುನಾವಣೆಯಲ್ಲಿ ಗೆಲುವು ನನ್ನದೆ ಎಂದು ಅಭ್ಯರ್ಥಿ ಕೆ.ಎಸ್.ನವೀನ್ ತಮ್ಮ ಇಂಗಿತ ವ್ಯಕ್ತಪಡಿಸಿದರು.

ಸಹಸ್ರಾರು ಕಾರ್ಯಕರ್ತರು, ಮುಖಂಡರು, ಅಭಿಮಾನಿಗಳೊಂದಿಗೆ ಭವ್ಯವಾದ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಮಂಗಳವಾರ ನಾಮಪತ್ರ ಸಲ್ಲಿಸಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಕೆ.ಎಸ್.ನವೀನ್ ಕಳೆದ ಚುನಾವಣೆಯಲ್ಲಿ ಸೋತೆನೆಂದು ಬೇಸರಪಟ್ಟುಕೊಳ್ಳದೆ ಗ್ರಾಮ ಪಂಚಾಯಿತಿ ಸದಸ್ಯರುಗಳ ಜೊತೆ ನಿಕಟ ಸಂಪರ್ಕವಿಟ್ಟುಕೊಂಡಿದ್ದೇನೆ.

ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿರುವುದರಿಂದ ಗ್ರಾಮ ಪಂಚಾಯಿತಿಗೆ ಅನೇಕ ಯೋಜನೆಗಳು ನೇರವಾಗಿ ತಲುಪಲಿವೆ. ಆರು ವರ್ಷಗಳಿಂದಲೂ ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಸುತ್ತಾಡಿ ಸದಸ್ಯರುಗಳ ಸಮಸ್ಯೆ ಹಾಗೂ ಕುಂದುಕೊರತೆಗಳನ್ನು ಹತ್ತಿರದಿಂದ ಕಂಡಿದ್ದೇನೆ. ನಮ್ಮ ಪಕ್ಷದ ಕಾರ್ಯಕರ್ತರೆ ಗ್ರಾಮ ಪಂಚಾಯಿತಿ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಹೆಚ್ಚಾಗಿರುವುದರಿಂದ ನನ್ನ ಬಗ್ಗೆ ಉತ್ತಮ ಒಲವು ಕಂಡು ಬರುತ್ತಿದೆ. ನಾಮನಿರ್ದೇಶನ ಸದಸ್ಯರುಗಳು ಕೂಡ ನನಗೆ ಬೆಂಬಲವಾಗಿದ್ದಾರೆ.

ಆದ್ದರಿಂದ ಮುಂದಿನ ತಿಂಗಳು ನಡೆಯುವ ಚುನಾವಣೆಯಲ್ಲಿ ನನ್ನನ್ನು ಆಶೀರ್ವದಿಸಿ ಗೆಲ್ಲಿಸಿದರೆ ಗ್ರಾಮ ಪಂಚಾಯಿತಿಗಳ ಅಭಿವೃದ್ದಿಗೆ ಶಕ್ತಿ ಮೀರಿ ಶ್ರಮಿಸುತ್ತೇನೆ. ಹೊರಗಿನಿಂದ ವಲಸೆ ಬಂದವರನ್ನು ಗೆಲ್ಲಿಸುವುದಕ್ಕಿಂತ ಸ್ಥಳೀಯ ದಿನದ 24 ಗಂಟೆಯೂ ಎಲ್ಲರ ಕೈಗೆ ಸುಲಭವಾಗಿ ಸಿಗುವ ನನ್ನನ್ನು ಗೆಲ್ಲಿಸಿ ಎಂದು ವಿನಂತಿಸಿದರು.

ಯಾರಿಗೂ ಆಸೆ ಆಮಿಷ ತೋರಿಸದೆ ಕೇವಲ ದೂರವಾಣಿ ಕರೆಗೆ ಸ್ಪಂದಿಸಿ ಗ್ರಾಮ ಪಂಚಾಯಿತಿ ಸದಸ್ಯರು, ಕಾರ್ಯಕರ್ತರು, ಮುಖಂಡರುಗಳು ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡಿರುವುದನ್ನು ನೋಡಿ ಉತ್ಸಾಹ, ಹುರಪು, ಹೆಚ್ಚಾಗಿದೆ, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಜಿಲ್ಲೆಯ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಂ.ಚಂದ್ರಪ್ಪ, ಪೂರ್ಣಿಮ ಶ್ರೀನಿವಾಸ್, ಗೂಳಿಹಟ್ಟಿ ಡಿ.ಶೇಖರ್, ವಿಧಾನಪರಿಷತ್ ಸದಸ್ಯರುಗಳಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದಗೌಡ ಸೇರಿದಂತೆ ಸಹಸ್ರಾರು ಕಾರ್ಯಕರ್ತರ ಪಡೆಯ ಬೆಂಬಲವಿದೆ. ಹಾಗಾಗಿ ಗೆಲುವು ನನ್ನದೆ ಎಂದು ವಿಶ್ವಾಸದಿಂದ ನುಡಿದರು.

Share This Article
Leave a Comment

Leave a Reply

Your email address will not be published. Required fields are marked *