ಭರಮಸಾಗರ, (ಮೇ 5) : ದೇಶ, ರಾಜ್ಯದಲ್ಲಿ ಸಿಲಿಂಡರ್, ಅಡುಗೆ ಎಣ್ಣೆ, ಪೆಟ್ರೋಬ್ ಸೇರಿ ಅಗತ್ಯ ವಸ್ತುಗಳ ಬೆಲೆಯನ್ನು ತ್ರಿಬಲ್ ಏರಿಕೆ ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಎನ್.ಚಂದ್ರಪ್ಪ ಆರೋಪಿಸಿದರು.
ಭರಮಸಾಗರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಗುರುವಾರ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆ ಹಾಗೂ ರೋಡ್ ಶೋ ನಲ್ಲಿ ಮಾತನಾಡಿದರು.
ಬೆಲೆ ಏರಿಕೆಗೆ ಜನಸಾಮಾನ್ಯರು ತತ್ತರಿಸಿದ್ದಾರೆ. ಸಿಲಿಂಡರ್ ಬಿಟ್ಟು, ಕಟ್ಟಿಗೆ ಹೊಲೆಗಳತ್ತ ಜನ ಗಮನಹರಿಸುತ್ತಿದ್ದಾರೆ. ಗ್ಯಾಸ್, ಪೆಟ್ರೋಲ್ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ನಿತ್ಯ ಬಿಜೆಪಿ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಮಾತೇತಿದಾರೆ ನಮ್ಮದು ಡಬಲ್ ಇಂಜಿನ್ ಸರ್ಕಾರ ಎಂದು ಹೇಳುವ ಬಿಜೆಪಿಯವರು, ಬೆಲೆ ಏರಿಕೆ, ಗಲಭೆ, ಭ್ರಷ್ಟಾಚಾರವನ್ನು ತ್ರಿಬಲ್ ಹೆಚ್ಚಿಸಿದ್ದಾರೆ ಎಂದು ದೂರಿದರು.
ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಭ್ರಷ್ಟಾಚಾರದಲ್ಲಿ ನಂ.1. ಕೆರೆ ಹೂಳೆತ್ತುವುದು ಸೇರಿ ವಿವಿಧ ಕಾಮಗಾರಿಗಳಲ್ಲಿ ಅವರು ನಡೆಸಿರುವ ಅವ್ಯವಹಾರ ತನಿಖೆಗೆ ವಹಿಸಬೇಕು ಎಂಬ ನಮ್ಮ ಆಗ್ರಹಕ್ಕೆ ಜಿಲ್ಲಾಡಳಿತ ಮನ್ನಣೆ ನೀಡಿದ್ದಲ್ಲಿ ಬಹಳಷ್ಟು ಮಂದಿ ಜೈಲು ಸೇರಲಿದ್ದಾರೆ ಎಂದರು.
ಜಾತಿ, ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿರುವ ಬಿಜೆಪಿ ನಾಯಕರಿಗೆ ಕರ್ನಾಟಕ ರಾಜ್ಯದಲ್ಲಿ ಮತದಾದರರು ತಕ್ಕ ಉತ್ತರ ನೀಡಲು ಸಿದ್ಧತೆ ಮಾಡಿಕೊಂಡಿದ್ದು, ಮೇ 10 ಮತದಾನ, ಮೇ 13ರ ಫಲಿತಾಂಶ ಇಡೀ ರಾಷ್ಟ್ರ ರಾಜಕಾರಣದ ಚಿತ್ರವಣವನ್ನೇ ಬದಲಾಯಿಸಲಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಭಗವದ್ಗೀತೆ, ಬೈಬಲ್, ಕುರಾನ್ ಸೇರಿದಂತೆ ಎಲ್ಲ ಧರ್ಮಗ್ರಂಥಗಳ ಕುರಿತು ಗೌರವ ಇದೆ. ಆದರೆ, ಬಿಜೆಪಿ ನಾಯಕರಿಗೆ ಯಾವ ಧರ್ಮಗಳ ಗ್ರಂಥದ ಬಗ್ಗೆ ಗೌರವ ಇಲ್ಲ. ಭಗವದ್ಗೀತೆಗೆ ಕುರಿತು ಕೂಡ ಗೌರವ ಇಲ್ಲ ಎಂಬುದಕ್ಕೆ ಅವರು ನಡೆಸಿರುವ ಭ್ರಷ್ಟಾಚಾರ, ಗಲಭೆ, ಕೋಮುಧ್ವೇಷದ ಭಾಷಣವೇ ಸಾಕ್ಷಿ ಎಂದರು.
ಈಗಾಗಲೇ ಕ್ಷೇತ್ರದಲ್ಲಿ ಆಂಜನೇಯ ಅವರನ್ನು ಗೆಲ್ಲಿಸಬೇಕೆಂದು ಎಲ್ಲ ಸಮುದಾಯದವರು ಸ್ವಯಂ ಆಗಿ ಸಂಘಟನೆಗೊಂಡಿದ್ದು, ದಾಖಲೆ ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ರೀತಿ ಇನ್ನೂ ಹೆಚ್ಚು ಪ್ರಚಾರ ನಡೆಸಬೇಕು. ಈ ಮೂಲಕ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಆಂಜನೇಯ ಗೆಲ್ಲಬೇಕು ಎಂದು ಹೇಳಿದರು.
ಬಸವಣ್ಣನ ಆಶಯದಡಿ ರಚನೆಗೊಂಡಿರುವ ಸಂವಿಧಾನವನ್ನೇ ಬದಲು ಮಾಡಲು ಮುಂದಾಗಿರುವ ಬಿಜೆಪಿಗೆ ಮತ ಹಾಕುವುದು ವಿಷಕಕ್ಕುವ ಮನುಷ್ಯರಿಗೆ ಹಾಲಿಟ್ಟಂತೆ ಎಂದು ಎಚ್ಚರಿಸಿದರು.
ಕೆಪಿಸಿಸಿ ಸದಸ್ಯ, ಜಿಪಂ ಮಾಜಿ ಉಪಾಧ್ಯಕ್ಷ ಎಸ್.ಎಂ.ಎಲ್.ತಿಪ್ಪೇಸ್ವಾಮಿ ಮಾತನಾಡಿ, ನೋಟ್ ಬ್ಯಾನ್, ಜಿ.ಎಸ್.ಟಿ., ಬೆಲೆ ಏರಿಕೆ ಕಾರಣಕ್ಕೆ ಈಗಾಗಲೇ ಜನರು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ಬರುವ ದಿನಗಳಲ್ಲಿ ನೆಮ್ಮದಿ ಜೀವನಕ್ಕೆ ಕಾಂಗ್ರೆಸ್ ಪಕ್ಷವನ್ನು 150ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಗೆಲ್ಲಿಸಲು ಜನರೇ ಸ್ವಯಂ ನಿರ್ಧಾರ ಕೈಗೊಂಡಿದ್ದಾರೆ ಎಂದರು.
ಆಂಜನೇಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ಕೊಳವೆಬಾವಿ ಕೊರೆಯಿಸಿದರು. ಈಗಿನ ಶಾಸಕ ಚಂದ್ರಪ್ಪ ಸುಳ್ಳುಗಳನ್ನೇ ಹೇಳಿಕೊಂಡು ಕ್ಷೇತ್ರದಲ್ಲಿ ತಿರುಗಿದ್ದಾರೆ ಎಂದು ದೂರಿದರು.
ಲಿಂಗಾಯತ ಸಮುದಾಯ ಹೆಸರು ಹೇಳಿಕೊಂಡು ಕಳೆದ ಬಾರಿ ಗೆಲುವು ಸಾಧಿಸಿದ ಚಂದ್ರಪ್ಪ, ಲಿಂಗಾಯತ ಸಮುದಾಯದವರ ಮೇಲೆ ಇಟ್ಟಿಗೆಯಿಂದ ಹೊಡೆಸಿದ್ದು, ಜೊತೆಗೆ ಹಲ್ಲೆ ನಡೆಸಿದ ವ್ಯಕ್ತಿ ರಾಜಾರೋಷವಾಗಿ ತೀರುಗುವಂತೆ ಮಾಡಿರುವುದನ್ನು ಸಮುದಾಯದ ಜನ ಮರೆತಿಲ್ಲ ಎಂದರು.
ಕ್ಷೇತ್ರದ ತುಂಬ ರಸ್ತೆ ಮಾಡಿಸಿದ್ದೇನೆ ಎಂದು ಹೇಳುವ ಚಂದ್ರಪ್ಪ ಇಸಾಮುದ್ರ ರಸ್ತೆಯ ಗುಣಮಟ್ಟ ಯಾವರೀತಿ ಇದೆ. ಮತ್ತು ಭರಮಸಾಗರ ದೊಡ್ಡಕೆರೆಯ ರಸ್ತೆ ಯಾವ ರೀತಿ ಇದೆ ಎಂದು ಪ್ರಶ್ನಿಸಿದರು.
ಜಿಪಂ ಮಾಜಿ ಅಧ್ಯಕ್ಷ ಆರ್.ಶಿವಕುಮಾರ್ ಮಾತನಾಡಿ, ಬಿಜೆಪಿ ಪಕ್ಷದಲ್ಲಿದ್ದ 15 ವರ್ಷಗಳು ಜೈಲಿನಲ್ಲಿ ಇದ್ದ ಅಗಿತ್ತು. ಅಲ್ಲಿನ ಶಾಸಕ ಎಂ.ಚಂದ್ರಪ್ಪನ ಸರ್ವಾಧಿಕಾರ ಧೋರಣೆ ಯಾವ ವ್ಯಕ್ತಿಗೂ ಮಾತನಾಡುವ ಹಕ್ಕಿರಲಿಲ್ಲ.
ಇದೀಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿ 15 ದಿನಗಳಲ್ಲಿ ಕಂಡ ಪ್ರೀತಿ, ವಿಶ್ವಾಸ, ಅತ್ಯಂತ ವಿಶಾಲತೆ, ವಾಕ್ ಸ್ವಾತಂತ್ರ್ಯ ಕ್ಕೆ ಹೆಚ್ಚು ಮಾನ್ಯತೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಸಂಘಟನೆ ಮೂಲಕ ಬಡವರಿಗೆ ನಿರ್ಗತಿಕರಿಗೆ, ಗಂಗಾ ಕಲ್ಯಾಣ, ಮನೆಗಳ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು.
ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ಎಚ್.ಆಂಜನೇಯ ಮಾತನಾಡಿ, ಕಳಪೆ ರಸ್ತೆ ನಿರ್ಮಾಣ ಮಾಡಿದ್ದೆ ಎಂ.ಚಂದ್ರಪ್ಪನ ಸಾಧನೆ. ಭರಮಸಾಗರದಲ್ಲಿ ರಾಜವೀರ ಭರಮಣ್ಣನಾಯಕ ನಿರ್ಮಿಸಿದ ಕೆರೆಗೆ ಸಿರಿಗೆರೆ ಶ್ರೀಗಳ ಇಚ್ಚ ಶಕ್ತಿಯಿಂದ 44 ಕೆರೆಗಳಿಗೆ ನೀರುಣಿಸಲಾಯಿತು. ಶಾಸಕ ಚಂದ್ರಪ್ಪ 300 ಕೆರೆ ನಿರ್ಮಿಸಿದ್ದೇನೆ ಎಂದು ಸುಳ್ಳು ಹೇಳಿದ್ದು, ಆ ಕೆರೆಗಳು ಯಾವುವು ಎಂದು ಬಹಿರಂಗ ಪಡೆಸಲಿ ಎಂದು ಸವಾಲು ಹಾಕಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಎ.ವಿ.ಉಮಾಪತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆರ್.ಕೃಷ್ಣಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಪ್ರಕಾಶ್, ಬಂಜಾರ ಅಭಿವೃದ್ಧಿ ನಿಗಮದ ಮಾಜಿ ನಿರ್ದೇಶಕ ಅನಿಲ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಿಂಗವ್ವನಾಗ್ತಿಹಳ್ಳಿ ತಿಪ್ಪೇಸ್ವಾಮಿ, ರೈತ ಮುಖಂಡ ಶಶಿಪಾಟೀಲ್, ಎಸ್.ಟಿ.ನಿಗಮದ ಮಾಜಿ ಅಧ್ಯಕ್ಷ ಚೌಲಿಹಳ್ಳಿ ನಾಗೇಂದ್ರಪ್ಪ, ಶಮಿಮ್ ಪಾಷಾ ಮೊದಲಾದವರಿದ್ದರು.