ಚಳ್ಳಕೆರೆ, (ಮೇ.07) : ಧಾರ್ಮಿಕ ಪರಂಪರೆಯ ಭವ್ಯ ರಾಷ್ಟ್ರವಾದ ಭಾರತದಲ್ಲಿ ಇಂದು ಭಕ್ತಿಯ ಪರಾಕಾಷ್ಠೆ ಮನಮನಗಳಲ್ಲಿ ಮತ್ತು ಮನೆಮನೆಗಳಲ್ಲಿ ತುಂಬಿಕೊಂಡಿದ್ದು, ಈ ಕಾರಣದಿಂದಾಗಿ ನಮ್ಮ ದೇಶದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಬೇರೂರಿದೆ ಎಂದು ತಹಶೀಲ್ದಾರ್ ಎನ್. ರಘುಮೂರ್ತಿ ಹೇಳಿದರು.
ತಾಲೂಕಿನ ಟಿ. ಎನ್. ಕೋಟೆಯ ಓಬಳಾಪುರದಲ್ಲಿ ಆಂಧ್ರಪ್ರದೇಶದ ದಿಂದ ಆಗಮಿಸಿದ ಶ್ರೀ ಕ್ಷೇತ್ರ ಶ್ರೀಶೈಲ ಬ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿಯ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ನಮ್ಮಲ್ಲಿ ದೇವಸ್ಥಾನಗಳು ನೆಲಸಿರುವುದರಿಂದ ಭಯ, ಭಕ್ತಿ ಮತ್ತು ಶ್ರದ್ಧೆ ಮನೆ ಮಾಡಿದ್ದು ಮನ ಪರಿವರ್ತನೆ ಮಾಡುವ ಕೇಂದ್ರಗಳಾಗಿ ಕೆಲಸ ಮಾಡುತ್ತಿವೆ. ನಮ್ಮಲ್ಲಿರುವಂತಹ ನಕಾರಾತ್ಮಕವಾದ ಆಲೋಚನೆಗಳನ್ನು ಕೈಬಿಟ್ಟು ಸಕಾರಾತ್ಮಕವಾಗಿ ನಮ್ಮಗಳ ಚಿಂತನೆಗಳು ಮತ್ತು ದೃಷ್ಟಿಕೋನಗಳು ಇದ್ದಲ್ಲಿ ನಮ್ಮ ಬದುಕಿನಲ್ಲಿ ಯಶಸ್ಸುಗಳಿಸಲು ಸಹಕಾರಿಯಾಗುತ್ತದೆ.
ಓಬಳಾಪುರ ಗ್ರಾಮಸ್ಥರು ಸತ್ಕಾರ್ಯದಲ್ಲಿ ತೊಡಗಿರುವುದು ಇಡೀ ತಾಲೂಕಿನ ಜನತೆಗೆ ಒಂದು ದೈವಿಕ ಶಕ್ತಿ ನೀಡಿದಂತಾಗಿದೆ. ಸತ್ಕಾರ್ಯದ ಮುಖಾಂತರ ಸಮಸ್ತ ತಾಲೂಕಿನಲ್ಲಿ ಈ ವರ್ಷ ಮಳೆ ಬೆಳೆ ಮತ್ತು ಎಲ್ಲರ ಆರೋಗ್ಯ ವೃದ್ಧಿಸಲಿ ಶಾಂತಿ ಮತ್ತು ನೆಮ್ಮದಿಯು ಎಲ್ಲರಲ್ಲಿ ಮನೆ ಮಾಡಲಿ ಎಂದು ಶುಭ ಕೋರಿದರು.
ಈ ಸಂದರ್ಭದಲ್ಲಿ ಜಯಣ್ಣ , ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರುಗಳು ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.