ವಿಶ್ವದ ಮೊಟ್ಟಮೊದಲ ಅಹಿಂಸಾಮೂರ್ತ  ಸ್ವರೂಪಿಣಿ ತ್ಯಾಗಮಯಿ ವಾಸವಿ ; ವಾಸವಿ ಜಯಂತಿ ನಿಮಿತ್ತ ವಿಶೇಷ ಲೇಖನ : ಪ್ರೊ. ಟಿ.ವಿ ಸುರೇಶ ಗುಪ್ತ

ಯುದ್ಧ ತಪ್ಪಿಸಿದ ಲೋಕಮಾತೆ ವಾಸವಿ

ಬಲಿಷ್ಠ ರಾಜನ ವಿರುದ್ಧ ಅಹಿಂಸಾಸ್ತ್ರ ಪ್ರಯೋಗಿಸಿ ಗೆದ್ದ ಜಗನ್ಮಾತೆ

ಪ್ರತಿಯೊಂದು ಸಮುದಾಯಕ್ಕೂ ಐತಿಹ್ಯ ಹಾಗೂ  ಪರಂಪರೆಗಳಿರುತ್ತವೆ. ಯಾವುದೋ ಕಾಲಘಟ್ಟದಲ್ಲಿ ಯಾರಾದರೂ ಮಹಾನುಭಾವರು ಮಹತ್ವದ ಸಾಧನೆಗಳಿಂದ ಜನಮಾನಸವನ್ನು ಪ್ರಭಾವಿಸಿ ಆಯಾ  ಸಮುದಾಯ, ವರ್ಗದ ಶಕ್ತಿಗಳಾಗಿ ರೂಪುಗೊಳ್ಳುವುದು  ಸಹಜ ಪ್ರಕ್ರಿಯೆಯಂತೆ ನಡೆದು ಬರುತ್ತದೆ.

ಈ ಹಿನ್ನೆಲೆಯಲ್ಲಿಯೇ ವೈಶ್ಯಕುಲ ಸಂಜಾತಳಾದ ಶ್ರೀ ವಾಸವಿಯು ತನ್ನ ಸಾಧನೆಗಳಿಂದ ವೈಶ್ಯಕುಲದೇವತೆಯಾಗಿ ರಾರಾಜಿಸುತ್ತಿರುವುದು; ಎಲ್ಲರ ಹೃನ್ಮನಗಳನ್ನು ಗೆದ್ದಿರುವುದು ಒಂದು ಭವ್ಯ ಇತಿಹಾಸವಾಗಿದೆ. ಇತಿಹಾಸದಲ್ಲಿ ಎಲ್ಲೂ ಕಂಡರಿಯದ ಕೇಳರಿಯದ ಮಹತ್ತಾದ ತ್ಯಾಗ ಹಾಗೂ ಬಲಿದಾನದ ದೆಸೆಯಿಂದ ವಾಸವಿಯು ಮಾನವತ್ವದಿಂದ ದೈವತ್ವಕ್ಕೇರಿ ಇಂದಿಗೂ ಆರಾಧ್ಯ ದೈವವಾಗಿದ್ದಾಳೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ತಣಕು ತಾಲೂಕಿನ ಪೆನುಗೊಂಡ ಗ್ರಾಮವು ತಾಯಿ ವಾಸವಿಯ ಜನ್ಮಸ್ಥಳ. ಇತಿಹಾಸ ಪ್ರಸಿದ್ಧವಾದ ವಿಮಲಾದಿತ್ಯ ಅಥವಾ ಏಳನೆಯ ವಿಷ್ಣುವರ್ಧನನ ಆಳ್ವಿಕೆಯ ಸಮಯದಲ್ಲಿ ವಾಸವಿಯ ಜನ್ಮತಾಳಿದಳು. ಕ್ರಿ.ಶ 1015 ರಿಂದ 1022ರ ವರೆಗೆ ಆತನ ಆಳ್ವಿಕೆ ಇತ್ತೆಂದೂ ಪೂರ್ವ ಚಾಲುಕ್ಯ ರಾಜರಲ್ಲಿ ಆತನೂ ಒಬ್ಬನೆಂದೂ ಪ್ರತಿಪಾದಿತವಾಗಿದೆ. ಆತನ ಹಲವು ಸಾಮಂತ ರಾಜರಲ್ಲಿ ವಾಸವಾಂಬೆಯ ತಂದೆ ಕುಸುಮಶ್ರೇಷ್ಠ್ಠಿಯೂ ಒಬ್ಬ. ಪೆನುಗೊಂಡೆಯನ್ನು ರಾಜಧಾನಿಯಾಗಿ ಮಾಡಿಕೊಂಡು ಸುತ್ತಲೂ ಇದ್ದ ಹದಿನೇಳು ಪಟ್ಟಣಗಳ ಒಡೆಯ ಆತನಾಗಿದ್ದನು. ಆತನ ಮಡದಿ ಕುಸುಮಾಂಬೆ (ಕಾವೇರಿ). ಕುಸುಮ ದಂಪತಿಗಳು ಸುಖದ ಸುಪ್ಪತ್ತಿಗೆಯಲ್ಲಿ ಪವಡಿಸಿದ್ದರೂ ಅನೇಕ ವರ್ಷಗಳವರೆಗೆ ಸಂತಾನ ಪ್ರಾಪ್ತಿಯಾಗದೆ ಕೊರಗಿನಲ್ಲಿ ನರಳುತ್ತಿದ್ದರು. ಕೊನೆಗೆ ಕುಲಗುರುಗಳಾದ ಭಾಸ್ಕರಾಚಾರ್ಯರ ಸಲಹೆಯಂತೆ ಪುತ್ರಕಾಮೇಷ್ಟಿ ಯಾಗವನ್ನು ಆಚರಿಸಿದ ಫಲವೋ ಎಂಬಂತೆ ಕುಸುಮಾಂಬೆ ಗರ್ಭವತಿಯಾಗಿ ಪ್ರಕೃತಿಯಲ್ಲಿ ವಸಂತನು ತನ್ನ ಸಾಮ್ರಾಜ್ಯ ಸ್ಥಾಪಿಸಿದ ವೈಶಾಖ ಶುದ್ಧ ದಶಮಿಯಂದು ಉತ್ತರಾ ನಕ್ಷತ್ರದ ಕನ್ಯಾ ಲಗ್ನದಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದಳು- ಒಂದು ಗಂಡು, ಮತ್ತೊಂದು ಹೆಣ್ಣು. ಮಗನಿಗೆ ವಿರೂಪಾಕ್ಷನೆಂದೂ ಮಗಳಿಗೆ ವಾಸವಾಂಬಾ ಎಂದೂ ನಾಮಕರಣವಾಯಿತು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ವಿರೂಪಾಕ್ಷನು ಉತ್ತಮ ರಾಜನಾಗುವ ಲಕ್ಷಣಗಳನ್ನು ತೋರಿದರೆ ವಾಸವಾಂಬೆಯು ಗುರುಹಿರಿಯರಲ್ಲಿ ಅಪಾರ ಭಕ್ತಿ, ದೈವ ಭಕ್ತಿಗಳನ್ನು ತೋರುತ್ತಾ ಕಲೆ, ಸಂಗೀತ, ಸಾಹಿತ್ಯಗಳಲ್ಲಿ ಪಾರಂಗತಳಾದಳು. ಐಹಿಕ ಸುಖಭೋಗದ ಕಡೆಗೆ ಆ ಬಾಲೆ ಲಕ್ಷ್ಯ ಕೊಡದೆ ಆತ್ಮವಿದ್ಯೆಯ ಕಡೆಗೆ ಆಕರ್ಷಿತಳಾಗಿದ್ದಳು. ಹರೆಯಕ್ಕೆ ಬಂದ ನಂತರ ವಿರೂಪಾಕ್ಷನ ವಿವಾಹವು ಆರಿಧಿ ಶ್ರೇಷ್ಠಿಯ ಮಗಳಾದ ರತ್ನಾವತಿಯೊಂದಿಗೆ ನೆರವೇರಿತು. ಅನತಿಕಾಲದಲ್ಲಿಯೇ ವಾಸವಿಯ ಮದುವೆಯೂ ವಿಜೃಂಭಣೆಯಿಂದ ನೆರವೇರುವುದೆಂಬ ನಿರೀಕ್ಷೆಗಳನ್ನು ಜನಮಾನಸದಲ್ಲಿ ಬಿತ್ತುವಂತೆ ವಿರೂಪಾಕ್ಷನ ಮದುವೆ ರಾಜವೈಭವದಿಂದ ನಡೆಯಿತು.

ಕುಸುಮಶ್ರೇಷ್ಠಿಯು ಚಕ್ರವರ್ತಿಗೆ ಕಾಲಕಾಲಕ್ಕೆ ಯಥೋಚಿತವಾದ ಕಪ್ಪಕಾಣಿಕೆಗಳನ್ನು ಕಳಿಸಿಕೊಡುತ್ತಿದ್ದ ಹಿನ್ನೆಲೆಯಲ್ಲಿ ಅವರ ನಡುವೆ ಉತ್ತಮ ಬಾಂಧವ್ಯವಿದ್ದಿತು. ಹೀಗಿರುವಲ್ಲಿ ಒಂದು ದಿನ ತನ್ನ ರಾಜ್ಯದ ಸೀಮೆಯೊಳಗಣ ರಾಜರು, ಅಲ್ಲಿನ ಪ್ರಜೆಗಳನ್ನು ಸ್ವತಃ ಅವಲೋಕಿಸಲು, ಜೊತೆಗೆ ರಾಜ್ಯವನ್ನು ವಿಸ್ತರಿಸಿಕೊಳ್ಳಲು ಚಕ್ರವರ್ತಿಯು ವಿಜಯ ಯಾತ್ರೆಗೆ ಹೊರಟನು. ಮಾರ್ಗಮಧ್ಯೆ ಪೆನುಗೊಂಡಕ್ಕೂ ಭೇಟಿ ನೀಡಿದನು. ಚಕ್ರವರ್ತಿಯೆಂಬ ಅಭಿಮಾನದಿಂದ ಪುರಪ್ರಮುಖರೆಲ್ಲಾ ಸೇರಿ ಪರಾಕುಗಳೊಡನೆ ಆತನನ್ನು ಬರಮಾಡಿಕೊಂಡರು. ಈ ಮಧ್ಯೆ ದೇವಾಲಯದಲ್ಲಿ ಸುಶ್ರಾವ್ಯವಾಗಿ ಹಾಡುತ್ತಿದ್ದ ವಾಸವಿಯ ಕಂಠಸಿರಿಯನ್ನು ಕೇಳಿ ಚಕ್ರವರ್ತಿಯು ಆಕರ್ಷಿತನಾದನು. ಜನರ ಮಧ್ಯೆ ತಿಲಕಪ್ರಾಯಳಾಗಿದ್ದ ಆಕೆಯನ್ನು ನೋಡಿ ತನ್ನ ವಯಸ್ಸು, ಸ್ಥಾನಮಾನಳಾವುದನ್ನೂ ಲಕ್ಷಿಸದೆ ಮದನ ಸಂತಪ್ತಾವಸ್ಥೆಗೆ ಗುರಿಯಾದನು. ಯುಕ್ತಾಯುಕ್ತ ವಿವೇಚನೆಯಿಲ್ಲದೆ ವಾಸವಿಯನ್ನು ತಾನು ಬಯಸಿರುವುದಾಗಿಯೂ, ವಿವಾಹ ಮಾಡಿಕೊಡಬೇಕೆಂದೂ ಮಂತ್ರಿಯ ಮೂಲಕ ಹೇಳಿ ಕಳುಹಿಸಿದನು. ಚಕ್ರವರ್ತಿಯ ಆಶಯವು ಕುಸುಮಶ್ರೇಷ್ಠಿಯನ್ನು ವಜ್ರಾಘಾತದಂತೆ ತಾಗಿತು.

`ಅತಿಥಿ ದೇವೋಭವ’ ತತ್ವವನ್ನು ಪಾಲಿಸುತ್ತಿದ್ದ ಕುಸುಮಶ್ರೇಷ್ಠಿಯು ಹೇಗೋ ಸಮಾಧಾನ ಹೇಳಿ ನಂತರ ಆಲೋಚಿಸಿ ನಿರ್ಧಾರ ಹೇಳುವುದಾಗಿ ಕಳುಹಿಸಿಕೊಟ್ಟನು. ತಾತ್ಕಾಲಿಕ ತೊಂದರೆ ತಪ್ಪಿದರೂ ಕಷ್ಟದ ತೂಗುಗತ್ತಿ ಮಾತ್ರ ಇದ್ದೇ ಇತ್ತು. ತನ್ನ ಆಪ್ತೇಷ್ಟರೊಂದಿಗೆ ಸಮಾಲೋಚಿಸಿ ವರ್ಣಾಂತರ ವಿವಾಹ ನಿಷೇಧವಿದ್ದ ಅಂಶ ಹಾಗೂ ವಯಸ್ಸಿನಲ್ಲಿ ಭಾರೀ ಅಂತರವಿರುವುದರಿಂದ ನಿರಾಕರಣಾ ಸಂದೇಶವನ್ನು ಕಳಿಸಿದನು. ಜೊತೆಗೆ ಈ ಆಸೆಯನ್ನು ರಾಜನು ತ್ಯಜಿಸಬೇಕೆಂದೂ ಎಂದಿನಂತೆಯೇ ರಾಜಕೀಯ ಸಂಬಂಧವಿರಲೆಂದೂ ಒಕ್ಕಣೆಯೂ ರವಾನೆಯಾಯಿತು.

ಕೆಣಕಿದ ಫಣಿಯಂತಾದ ವಿಷ್ಣುವರ್ಧನನು ಒಕ್ಕಣೆ ತಂದಿದ್ದ ದೂತನನ್ನೇ ಅವಮಾನಿಸಿ, ಪೆನುಗೊಂಡದ ಮೇಲೆ ದಂಡೆತ್ತಿ ಹೋಗಲು ಸೇನಾಪತಿಗೆ ಆಜ್ಞಾಪಿಸಿದನು. ಸಾಮಂತರಾಜನೆಂಬ ತತ್ಸಾರದಿಂದ ಸಣ್ಣ ಸೇನೆಯೊಂದು ಬಂದಿತು. ರಾಜಕಾರಣ ಕುಶಲಮತಿಗಳಾಗಿದ್ದ ವೈಶ್ಯಕಲಿಗಳು ಚತುರೋಪಾಯಗಳನ್ನು ಬಳಸಿ ಸೇನೆಯನ್ನು ಸೋಲಿಸಿದರು. ಇದಕ್ಕೆ ಪ್ರತ್ಯುತ್ತರವೆಂಬಂತೆ ಚಕ್ರವರ್ತಿಯು ದೊಡ್ಡ ಸೇನೆಯೊಡನೆ ಬಂದೇ ಬರುವನೆಂಬ ಯೋಚನೆಯಲ್ಲಿ ಪೆನುಗೊಂಡೆಯರಸ ಮುಳುಗಿದನು.

ಅರಸರಾಳ್ವಿಕೆಯಿದ್ದರೂ ಪ್ರಮುಖ ಘಟ್ಟಗಳಲ್ಲಿ ಊರ ಹಿರಿಯರು ಪ್ರಮುಖರ ಸಲಹೆ ಸಹಕಾರ ಪಡೆಯುತ್ತಿದ್ದ ಕಾಲವದು. ಬಂದೆರಗಿದ ಸಂಕಟದ ನಿವಾರಣೋಪಾಯಕ್ಕಾಗಿ ವೈಶ್ಯರಲ್ಲಿದ್ದ 714 ಗೋತ್ರದದವರ ಮಹಾಸಭೆಯನ್ನೇ ಆಹ್ವಾನಿಸಲಾಯಿತು. ಅನುಭವಿಗಳು, ಹಿರಿಯರು, ಅನೇಕ ಕ್ಲಿಷ್ಟ ಸಂದರ್ಭಗಳಲ್ಲಿ ಪರಿಹಾರ ಸೂಚಿಸಿದ್ದವರು ಸಭೆಯಲ್ಲಿ ಪಾಲುಗೊಂಡರು. ಸಭೆಯಲ್ಲಿ ಪರವಿರೋಧದ ಅಭಿಪ್ರಾಯಗಳನ್ನು ಮಂಡನೆಯಾದವು. ಅನೇಕ ಸಂದರ್ಭಗಳಲ್ಲಿ ಹೊರಹೊಮ್ಮುತ್ತಿದ್ದ ಸರ್ವಾನುಮತ ಸಾಧ್ಯವಾಗಲೇ ಇಲ್ಲ. 612 ಗೋತ್ರದವರು ಚಕ್ರವರ್ತಿಯೆಂದರೆ ಆಡಳಿತದ ಚುಕ್ಕಾಣಿ ಹಿಡಿದವ, ಸ್ಫುರದ್ರೂಪಿ, ತಾನೇ ಒಲಿದು ನಮ್ಮ ಸಂಬಂಧ ಬಯುಸಿದವ ಎಂದೆಲ್ಲಾ ವಿವೇಚಿಸಿ, ಚಕ್ರರ್ತಿಯೊಂದಿಗೆ ವಾಸವಿಯ ವಿವಾಹ ಸೂಕ್ತವೆಂದರು. ಅವರ ಮನದಲ್ಲಿ ಏನೋ ಅವ್ಯಕ್ತ ಭಯವಿತ್ತು. ಉಳಿದ 102 ಗೋತ್ರದವರು ವಾಸವಿಯಷ್ಡೇ ವಯಸ್ಸಿನ ಮಗನಿರುವ, ವರ್ಣಸಂಕರಕ್ಕೆಡೆಮಾಡುವ ದೌರ್ಜನ್ಯದಿಂದ ಅಧಿಕಾರಶಾಹಿ ನಡವಳಿಕೆ ಪ್ರದರ್ಶಿಸಿರುವ ಚಕ್ರವರ್ತಿಯ ಸ್ನೇಹಕ್ಕೆ ತಿಲಾಂಜಲಿ ನೀಡೋಣ. ಏನೇ ಸಂಕಟ ಬರಲಿ ಎದುರಿಸೋಣ. ಧರ್ಮದ ಶ್ರೀರಕ್ಷೆ ನಮ್ಮದಾಗಿರುವಾಗ ಹೆದರುವುದೇಕೆ? ಎಂದು ವಾದಿಸಿ ಧೈರ್ಯದಿಂದ ನಿರಾಕರಿಸಲು ಸೂಚಿಸಿದರು.

ಯಾವ ಗೊಡವೆಯೂ ಬೇಡವೆಂದು 612 ಗೋತ್ರದವರು ದಿಕ್ಕಾಪಾಲಾಗಿ ಚದುರಿಹೋದರು. ಉಳಿದ 102 ಗೋತ್ರದವರು ಚಕ್ರವರ್ತಿಯನ್ನು ಎದುರಿಸಲು ಮಾಡಬೇಕಾದ ಏರ್ಪಾಟು ಯುದ್ಧಸಿದ್ಧತೆಗಳನ್ನು ಕುರಿತು ಆಲೋಚಿಸತೊಡಗಿದರು. ವಾಸವಿಯ ಮುತ್ಸದ್ಧಿತನಕ್ಕೆ ಈ ಘಟ್ಟ ಒಂದು ಸವಾಲಾಯಿತು. ಅಂತರ್ಮುಖಿಯಾದ ಆಕೆ ಅನೇಕ ಪೂರ್ವಾಪರ ಆಲೋಚನೆಗಳಿಗೆ ಒಳಗಾದಳು. ಕೇವಲ ತನ್ನೊಬ್ಬಳಿಗಾಗಿ ಎರಡೂ ಬಣಗಳಲ್ಲಿನ ಅಪಾರ ಸಂಖ್ಯೆಯ ಸ್ವಾಮಿನಿಷ್ಠ ಸೈನಿಕರು, ಆನೆ, ಕುದುರೆ, ಹತ್ಯೆಯ ಜೊತೆಗೆ ಆರ್ಥಿಕ ಹಾನಿ! ಈ ಯುದ್ಧ ಅನಿವಾರ್ಯವೆ? ಈ ಸಂದರ್ಭದಲ್ಲಿ ಇದಕ್ಕೊಂದು ಹೊಸ ತಿರುವು ನೀಡಬೇಕು. ಪ್ರಾಣ ಹಾನಿಯಾಗದೆ ಶತ್ರುನಾಶ ಸಾಧ್ಯವಾಗಬೇಕು – ಎಂದೆಲ್ಲಾ ಆಲೋಚಿಸಿದ ವಾಸವಿ ಕೊನೆಗೆ “ಅಪ್ಪಾ ನಾನು ಅಗ್ನಿ ಪ್ರವೇಶ ಮಾಡುತ್ತೇನೆ. ರಾಜನ ಗೃಧ್ರದೃಷ್ಟಿಗೆ ಒಳಗಾಗಿ ಮಲಿನವಾಗಿರುವ ಈ ಶರೀರವನ್ನು ಆತ್ಮಾರ್ಪಣ ಮಾಡಿಕೊಂಡರೆ ಶತ್ರುವಿಗೆ ಆಘಾತವಾಗಿ ಆತನೇ ಮರಣವನ್ನಪ್ಪುವಂತಾಗುತ್ತದೆ. ಯಾವ ಕಡೆಯೂ ಪ್ರಾಣ ಹಾನಿಯಾಗುವುದಿಲ್ಲ’’ ಎಂದು ನಿರ್ಧಾರವನ್ನು ತಿಳಿಸಿದಳು.

ದಿನದಿನಕ್ಕೂ ಹೊಸ ತಿರುವು ಕಾಣುತ್ತಿದ್ದ ಸಮಸ್ಯೆಯನ್ನು ಪರಿಹರಿಸುವುದು ಹೇಗೆಂಬ ಚಿಂತೆಗೆ ಒಳಗಾಗಿದ್ದ ಕುಸುಮಶ್ರೇಷ್ಠಿಯು ತಕ್ಷಣವೇ ವಾಸವಿಯ ನಿಲುವನ್ನು ಒಪ್ಪುವ ಸ್ಥಿತಿಯಲ್ಲಿರಲಿಲ್ಲ. ಹಲವು ವರ್ಷಗಳ ತಪಸ್ಸಿನ ಫಲವಾಗಿ ಜನಿಸಿದ್ದ ಕುವರಿಯನ್ನು ಅಗ್ನಿಗೆ ಅರ್ಪಣೆ ಮಾಡಲು ಸಿದ್ಧವೂ ಇರಲಿಲ್ಲ. ಹಲವು ಪರಿಯಲ್ಲಿ ವಾಸವಿಯು ತನ್ನ ತಂದೆಯನ್ನು ಒಪ್ಪಿಸಿದಳಾದರೂ 102 ಗೋತ್ರದವರು ಸುತರಾಂ ಒಪ್ಪಲಿಲ್ಲ. ಒಂದು ವೇಳೆ ತನ್ನ ನಿಧಾರ್ಧರಕ್ಕೆ ಅಂಟಿಕೊಂಡಲ್ಲಿ ತಾವೆಲ್ಲರೂ ಜೊತೆಗೆ ಅಗ್ನಿಪ್ರವೇಶ ಮಾಡುವುದಾಗಿ ನಿಶ್ಚಯವಾಗಿ ಹೇಳಿದರು.

ನಿರ್ಧಾರವನ್ನು ಜನ ಒಪ್ಪಿಕೊಂಡರೂ, ವಾಸವಿಯ ಮೇಲಿನ ಮಮತೆ, ವಿಶೇಷ ಅಭಿಮಾನ ಅವರನ್ನು ಕಟ್ಟಿಹಾಕಿತ್ತು. ಕೊನೆಗೆ ಭಾಸ್ಕರಾಚಾರ್ಯರ ಅಭಿಪ್ರಾಯ ಮತ್ತು ತಮ್ಮ ಅಭಿಪ್ರಾಯಗಳೊಂದಿಗೆ ವಾಸವಿಯ ನಿರ್ಧಾರವನ್ನು ತುಲನೆ ಮಾಡಿ ಸಾಕಷ್ಟು ಚರ್ಚೆ ನಡೆಸಿದರು. ಸಮಸ್ತ ವೈಶ್ಯರ ಪರಿವಾರವೇ ಅಂತ್ಯವಾಗುವ ಅಪಾಯವನ್ನು ಮನಗಂಡು, ಗೋತ್ರಕ್ಕೊಬ್ಬ ದಂಪತಿಗಳಂತೆ ವಾಸವಿಯೊಂದಿಗೆ ಅಗ್ನಿಪ್ರವೇಶಿಸಲು ನಿರ್ಣಯಿಸಿದರು.  ಬ್ರಹ್ಮಕುಂಡವೆಂಬ ಪ್ರದೇಶದಲ್ಲಿ ಮಾಘಶುದ್ಧ ಬಿದಿಗೆಯಂದು 205 ಜನ (ವಾಸವಿ ಮತ್ತು 102 ದಂಪತಿಗಳು) ಅಗ್ನಿಪ್ರವೇಶ ಮಾಡಿದರು. ಈ ಘಟನಾ ವಿವರ ಕೇಳಿದೊಡನೆ ಆಕ್ರಮಣಕ್ಕೆಂದು ಧಾವಿಸಿ ಬರುತ್ತಿದ್ದ ವಿಷ್ಣುವರ್ಧನ ಸ್ಥಂಭಿತನಾದನು; ಆನೆಯ ಮೇಲಿನಿಂದ ಬಿದ್ದು ತಲೆ ಸಾವಿರ ಹೋಳಾಗಿ ಮೃತಪಟ್ಟನು. ಆನಂತರ ಯುದ್ಧವೆಲ್ಲಿಯದು! ಆತನ ಸೈನ್ಯ ಚೆಲ್ಲಾಪಿಲ್ಲಿಯಾಗಿ ಹಿಂದಿರುಗಿತು.

ಇಡೀ ಪ್ರಕರಣವನ್ನು ಕೂಲಂಕಶವಾಗಿ ಮಥಿಸಿದ ಚಕ್ರವರ್ತಿಯ ಮಗ ರಾಜರಾಜ ನರೇಂದ್ರನು ಪೆನುಗೊಂಡೆಗೆ ಧಾವಿಸಿ ಬಂದನು. ದುಡುಕಿನಿಂದ ತಂದೆ ಮಾಡಿದ ಅಪರಾಧವನ್ನು ಮನ್ನಿಸಿ ಎಂದಿನಂತೆಯೇ ತಾವಿಬ್ಬರು ಒಳ್ಳೆಯ ಸಂಬಂಧದಿಂದ ಬಾಳೋಣ ಎಂದು ಉದಾರ ಮನಸ್ಸಿನಿಂದ  ಮಾತನಾಡಿದನು. ತಪ್ಪು ಮಾಡುವುದು ಮನುಷ್ಯನ ಸಹಜ ಗುಣವಾದರೂ ಅವುಗಳ ಪರಿಣಾಮವನ್ನು ಅರಿತ ಮೇಲೆ ಸದಸದ್ವಿವೇಕದಿಂದ ವರ್ತಿಸುವುದು ಜಾಣತನವಾದೀತೆಂಬುದನ್ನು ಅರಿತಿದ್ದ ವಿರೂಪಾಕ್ಷ ಹಿಂದಿನಂತೆಯೇ ಬಾಂಧವ್ಯ ಉಳಿಸಿ ಬೆಳೆಸಿಕೊಳ್ಳಲು
ಸಮ್ಮತಿಸಿದನು.

ಎಲ್ಲರೂ ಹಿರಿಯರನ್ನು ಕಳೆದುಕೊಂಡಿದ್ದೇವೆ. ಮನಃಶಾಂತಿಗಾಗಿ ತೀರ್ಥಯಾತ್ರೆಗೆ ಹೋಗಿ ಬರೋಣವೆಂಬ ಪ್ರಸ್ತಾಪವನ್ನು ಒಪ್ಪಿ ಇಬ್ಬರೂ ಹಲವು ದಿನಗಳ ತೀರ್ಥಯಾತ್ರೆ ಮುಗಿಸಿ ಬಂದರು. ತಂತಮ್ಮ ಹಿರಿಯರ ನೆನಪಿಗೆಂದು ಎಲ್ಲರೂ ಗೋತ್ರಕ್ಕೆ ಒಂದರಂತೆ ಲಿಂಗಗಳನ್ನು ಪ್ರತಿಷ್ಠಾಪನೆ ಮಾಡಿದರು. ಲಿಂಗಗಳ ಬೀದಿ ಎಂಬ ನಾಮಕರಣ ಮಾಡಿದ ಆ ರಸ್ತೆ ಈಗಲೂ ಹಾಗೆಯೇ ಚಾಲ್ತಿಯಲ್ಲಿದೆ. ತನ್ನ ಅತೀವ ಸಮಯಸ್ಫೂರ್ತಿಯಿಂದ ಜನರ ಪ್ರಾಣಹಾನಿ ತಪ್ಪಿಸಿ ತನ್ನನ್ನೇ ಅರ್ಪಿಸಿಕೊಂಡ ವಾಸವಿಯ ನೆನಪಿಗಾಗಿ ರಾಜರಾಜ ನರೇಂದ್ರನೇ ಒಂದು ದೇವಾಲಯವನ್ನು ನಿರ್ಮಿಸಿ, ಅಲ್ಲಿ ವಿಗ್ರಹ ಪ್ರತಿಷ್ಠಾಪನೆ ಮಾಡಿದನು.

ಕಿರಿಯ ವಯಸ್ಸಿನಲ್ಲೇ ಸಾಮೂಹಿಕ ನಾಯಕಿಯೆಂಬಂತೆ ತನ್ನ ಮೇಧಾಶಕ್ತಿಯಿಂದ ಅಹಿಂಸಾ ಪ್ರವರ್ತಕಳಾಗಿ, ವಿನೂತನ ಸತ್ಯಾಗ್ರಹದ ಆದರ್ಶವನ್ನು ಜನತೆಗೆ ತೋರಿದ ವಾಸವಿಯ ಜಯಂತಿಯನ್ನು  ವಿಜೃಂಭಣೆಯಿಂದ ಆಚರಿಸುತ್ತಿರುವ ಈ ಸಂದರ್ಭದಲ್ಲಿ ಆಕೆಯನ್ನು ಕೇವಲ ವೈಶ್ಯಕುಲದೇವತೆ ಎಂದಷ್ಟೇ ಭಾವಿಸದೆ, ಲೋಕಮಾತೆಯೆಂಬ ಭಾವನೆ ಬೆಳೆಸಿಕೊಳ್ಳುವುದು ಔಚಿತ್ಯಪೂರ್ಣ. “ The first ever known embodiment of non violence in the world’’ (ವಿಶ್ವದ ಮೊಟ್ಟಮೊದಲ ಅಹಿಂಸಾಮೂರ್ತ ಸ್ವರೂಪಿಣಿ) ಎಂದು ಸರ್ವಪಲ್ಲಿ ರಾಧಾಕೃಷ್ಣನ್ ಅವರು ವಾಸವಿಯನ್ನು ಬಣ್ಣಿಸಿರುವುದು ಅರ್ಥಪೂರ್ಣವಾಗಿದೆ. ವಾಸವಿಯಂತೆ ಅಹಿಂಸೆಯ ಅಸ್ತ್ರವನ್ನೇ ಹಿಡಿದು ವೈಶ್ಯಕುಲ ಸಂಜಾತರಾದ ಮಹಾತ್ಮಾ ಗಾಂಧಿಯವರು ಸೂರ್ಯಮುಳುಗದ ಸಾಮ್ರಾಜ್ಯದ ಅಗಾಧ ಮಿಲಿಟರಿ ಶಕ್ತಿಯನ್ನು ಸೋಲಿಸಿದುದು ಈಗ ಇತಿಹಾಸ.

ವಾಸವಿ ದೇವಾಲಯಗಳು ದಕ್ಷಿಣ ಭಾರತದಲ್ಲಿ ಸಣ್ಣ ದೊಡ್ಡ ನಗರಗಳಲ್ಲೂ ವಿದೇಶಗಳಲ್ಲೂ  ಸ್ಥಾಪಿತವಾಗಿವೆ. ಅನವರತ ಪೂಜಾ ಕೈಂಕರ್ಯಗಳು ಎಲ್ಲೆಡೆ ನಡೆದು ಬಂದಿವೆ. ವಾಸವಿಯ ತ್ಯಾಗ, ಬಲಿದಾನ ಎಂದೆಂದಿಗೂ ಚಿರಂತನ ಸ್ಫೂರ್ತಿಯಾಗಿದೆ.

ಕನ್ಯಕಾ ಪರಮೇಶ್ವರಿ ಎಂಬ ಅಭಿದಾನದಿಂದ ಪೂಜಿಗೊಳ್ಳುತ್ತಿರುವ ಆದಿ ಪರಾಶಕ್ತಿಯ ಅವತಾರಿಣಿಯಾದ ವಾಸವಿಯನ್ನು ಕೇವಲ ಆರ್ಯವೈಶ್ಯರ ಆರಾಧ್ಯ ದೇವತೆಯಾಗಿ ಭಾವಿಸದೆ ಲೋಕಮಾತೆಯೆಂದೇ ಭಾವಿಸುವುದು ಔಚಿತ್ಯಪೂರ್ಣವಾಗಿದೆ.

Ø ಪ್ರೊ. ಟಿ.ವಿ ಸುರೇಶ ಗುಪ್ತ

ನಿವೃತ್ತ ಜಂಟಿ ನಿರ್ದೇಶಕರು (ಕಾಲೇಜು ಶಿಕ್ಷಣ)

ಟೀಕಾ ಸದನ, ಬುರುಜಿನಹಟ್ಟಿ ಸರ್ಕಲ್

ಚಿತ್ರದುರ್ಗ –577501

ಮೊ.ನಂ: 9945461834, 8105424447

suddionenews

Recent Posts

ಹಿರಿಯೂರು : ಕಾರು – ಲಾರಿ ಡಿಕ್ಕಿ : ಓರ್ವ ಸಾವು

ಸುದ್ದಿಒನ್, ಹಿರಿಯೂರು, ಮಾರ್ಚ್. 13 : ಕಾರು ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ…

7 hours ago

ದುಡಿಯುವ ಕೈಗಳಿಗೆ ಕೆಲಸ ಕೊಡಿ: ಕೂಲಿ ಕಾರ್ಮಿಕರ ಪ್ರತಿಭಟನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

7 hours ago

ಮದಕರಿಪುರ ಕೆರೆ ಹೊಳು ತೆಗೆಯುವ ಕಾರ್ಯಕ್ಕೆ ಶಾಸಕ ವಿರೇಂದ್ರ ಪಪ್ಪಿ ಚಾಲನೆ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ. ಮಾ.13 :…

7 hours ago

9ನೇ ತರಗತಿ‌ ಮಕ್ಕಳಿಗೆ ಬಂಪರ್ ಆಫರ್ ; ಬಾಹ್ಯಾಕಾಶದಲ್ಲಿ ಆಸಕ್ತಿ ಇದ್ದರೆ ಇಲ್ಲಿದೆ ಅವಕಾಶ

ಬೆಂಗಳೂರು; ಮಕ್ಕಳ ಭವಿಷ್ಯದ ಬಗ್ಗೆ ಪೋಷಕರಿಗೆ ದೊಡ್ಡ ಕನಸಿರುತ್ತದೆ. ಪೋಷಕರ ಆಸೆಯಂತೆ ಮಕ್ಕಳು ನಡೆದುಕೊಳ್ಳುವುದು ಸಾಮಾನ್ಯ. ಬಾಹ್ಯಾಕಾಶದಲ್ಲಿ ಆಸಕ್ತಿ ಹೊಂದಿರುವ…

8 hours ago

ದುಶ್ಚಟಗಳಿಂದ ದೂರವಿರಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ : ನಗರಸಭೆ ಅಧ್ಯಕ್ಷೆ ಸುಮಿತಾ ಕರೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

10 hours ago

ಚಿತ್ರದುರ್ಗ ಕಾಂಗ್ರೆಸ್ ಕಚೇರಿಯಲ್ಲಿ ಪಿಳ್ಳೇಕೆರೆನಹಳ್ಳಿ ಕುಮಾರ್‌ಗೆ ಶ್ರದ್ಧಾಂಜಲಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಮಾರ್ಚ್.…

10 hours ago