ಪಾಸಿಂಗ್ ಪ್ಯಾಕೇಜ್ ಜೊತೆ ಪಠ್ಯಪುಸ್ತಕಗಳನ್ನು ಓದಬೇಕು : ಬಸವರಾಜಯ್ಯ

suddionenews
2 Min Read

ವರದಿ : ಕೆ.ಎಂ.ಮುತ್ತುಸ್ವಾಮಿ ಕಣ್ಣನ್

ಚಿತ್ರದುರ್ಗ, (ಜ.21) : ಪಾಸಿಂಗ್ ಪ್ಯಾಕೇಜ್ ಜೊತೆ ಪಠ್ಯಪುಸ್ತಕಗಳನ್ನು ಓದಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜಯ್ಯ ಮಕ್ಕಳಿಗೆ ಕರೆ ನೀಡಿದರು.

ವಾಸವಿ ವಿದ್ಯಾಸಂಸ್ಥೆಯಲ್ಲಿ ಹತ್ತನೆ ತರಗತಿ ವಿದ್ಯಾರ್ಥಿಗಳಿಗೆ ಸಿದ್ದಪಡಿಸಲಾಗಿರುವ ಪಾಸಿಂಗ್ ಪ್ಯಾಕೇಜ್‌ನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಕೊರೋನಾ ಮೂರನೆ ಅಲೆ ವ್ಯಾಪಕವಾಗಿ ಹರಡುತ್ತಿರುವುದರಿಂದ ಮಕ್ಕಳು ಶಾಲೆಗೆ ಬರುವುದೇ ಕಷ್ಟವಾಗಿರುವ ಇಂದಿನ ಸನ್ನಿವೇಶದಲ್ಲಿ ಪಾಸಿಂಗ್ ಪ್ಯಾಕೇಜ್ ಮಕ್ಕಳಿಗೆ ಅನುಕೂಲವಾಗಲಿದೆ. ಪಾಸಿಂಗ್ ಪ್ಯಾಕೇಜ್ ಹುಟ್ಟಿದ್ದು, ಚಿತ್ರದುರ್ಗದಿಂದ ಹಾಗಾಗಿ ರಾಜ್ಯಕ್ಕೆ ಚಿತ್ರದುರ್ಗ ಮಾದರಿಯಾಗಿದೆ. ನಲಿ-ಕಲಿ ನಮ್ಮ ರಾಜ್ಯದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಪ್ರಸಿದ್ದಿಯಾಗಿದೆ. ಮಕ್ಕಳು ಪಾಸಿಂಗ್ ಪ್ಯಾಕೇಜ್‌ನ ಸದುಪಯೋಗಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ನಗರಸಭೆ ಸದಸ್ಯ ಹರೀಶ್ ಮಾತನಾಡಿ ಪಾಸಿಂಗ್ ಪ್ಯಾಕೇಜ್‌ಗಷ್ಟೆ ವಿದ್ಯಾರ್ಥಿಗಳು ಸೀಮಿತವಾಗಬಾರದು. ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಬೋಧಿಸುವ ಪಾಠಗಳನ್ನು ಕ್ರಮಬ್ದದ್ದವಾಗಿ ಕಲಿತಾಗ ಮಾತ್ರ ಹತ್ತನೆ ತರಗತಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಬಹುದು. ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯಬೇಕಾದರೆ ವಿದ್ಯಾರ್ಥಿಗಳು ಸಮಯ ವ್ಯಯಮಾಡದೆ ಕಷ್ಟಪಟ್ಟು ಓದಬೇಕು ಎಂದು ತಿಳಿಸಿದರು.

ವಾಸವಿ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಎ.ಸತ್ಯನಾರಾಯಣಶೆಟ್ಟಿ ಮಾತನಾಡುತ್ತ ಪಾಸಿಂಗ್ ಪ್ಯಾಕೇಜ್ ವಿದ್ಯಾರ್ಥಿಗಳಿಗೆ ಒಂದು ಟಾನಿಕ್ ಇದ್ದಂತೆ ಇದೇ ಪರೀಕ್ಷೆಗೆ ಮಾನದಂಡವಲ್ಲ. ಪ್ರತಿ ಮನೆಗಳಲ್ಲಿಯೂ ಮಕ್ಕಳು ಮೊಬೈಲ್ ಬಳಸುವುದು ಜಾಸ್ತಿಯಾಗಿದೆ. ಡಿಸ್ಟಿಂಕ್ಷ್ನಲ್ಲಿ ತೇರ್ಗಡೆಯಾಗಬೇಕಾದರೆ ಮಕ್ಕಳು ಅಂದಿನ ಪಾಠಗಳನ್ನು ಅಂದೇ ಗಮನಕೊಟ್ಟು ಓದಬೇಕು. ಆಗ ಮಾತ್ರ ಭವಿಷ್ಯದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ವಾಸವಿ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ.ಕಾರ್ತಿಕ್ ಮಾತನಾಡಿ ಹತ್ತನೆ ತರಗತಿ ವಿದ್ಯಾರ್ಥಿಗಳಿಗಾಗಿ ಹೊರತರಲಾಗಿರುವ ಪಾಸಿಂಗ್ ಪ್ಯಾಕೇಜ್ ಒಂದು ಚಿಕ್ಕ ಯೋಜನೆಯಷ್ಟೆ. ಇದನ್ನು ಬಿಟ್ಟು ಇನ್ನು ಹಲವಾರು ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಮಕ್ಕಳ ಭವಿಷ್ಯದ ಹಿತಚಿಂತನೆಯೇ ನಮ್ಮ ಸಂಸ್ಥೆಯ ಧ್ಯೇಯೋದ್ದೇಶ ಎಂದು ಹೇಳಿದರು.

ವಿದ್ಯಾಸಂಸ್ಥೆಯ ಸಹ ಕಾರ್ಯದರ್ಶಿ ಎಲ್.ಎನ್.ವಿಜಯಕುಮಾರ್ ಮಾತನಾಡಿ ವಿದ್ಯಾರ್ಥಿಗಳಲ್ಲಿ ಜ್ಞಾನದ ಹಸಿವಿರಬೇಕು. ಕಂಪ್ಯೂಟರ್ ಹಾಗೂ ಸ್ಪರ್ಧಾತ್ಮಕ ಯುಗವಾಗಿರುವುದರಿಂದ ವಿದ್ಯಾರ್ಥಿಗಳು ಎಷ್ಟು ಓದಿದರೂ ಕಡಿಮೆಯೆ. ಅದಕ್ಕಾಗಿ ಓದಿನ ಕಡೆ ಗಮನ ನೀಡಿ. ಪಾಸಿಂಗ್ ಪ್ಯಾಕೇಜನ್ನೆ ನಂಬಿ ಕೂರಬೇಡಿ. ಶ್ರದ್ದೆಯಿಂದ ಪಾಠಗಳನ್ನು ಕಲಿಯಿರಿ ಎಂದು ಬುದ್ದಿಮಾತು ಹೇಳಿದರು.

ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ವೀರಣ್ಣ ಮಾತನಾಡುತ್ತ ಮೊದಲಿನಿಂದಲೂ ಒಳ್ಳೆಯ ಹೆಸರು ಮಾಡಿರುವ ವಾಸವಿ ವಿದ್ಯಾಸಂಸ್ಥೆಯಲ್ಲಿ ಓದಿನ ಅನೇಕ ಮಕ್ಕಳು ಈಗ ಉನ್ನತ ಹುದ್ದೆಗಳಲ್ಲಿದ್ದಾರೆ. ಸ್ಪರ್ಧಾತ್ಮಕ ಯುಗದಲ್ಲಿ ೩೫ ಅಂಕಗಳನ್ನು ಪಡೆದು ಪರೀಕ್ಷೆಯಲ್ಲಿ ಪಾಸ್ ಆಗುವುದರಿಂದ ಯಾವ ಪ್ರಯೋಜನವೂ ಇಲ್ಲ. ಅದಕ್ಕೆ ಬದಲಾಗಿ ನೂರಕ್ಕೆ ನೂರು ಅಂಕಗಳನ್ನು ಗಳಿಸಿರಿ, ಸ್ಟೂಡೆಂಟ್ ಲೈಫ್ ಗೋಲ್ಡನ್ ಲೈಫ್ ಇಂತಹ ಅವಕಾಶ ಮತ್ತೆ ದೊರಕುವುದಿಲ್ಲ. ಸಿಕ್ಕಿರುವ ಸುವರ್ಣಾವಕಾಶವನ್ನು ಸರಿಯಾಗಿ ಬಳಸಿಕೊಂಡು ಸಮಾಜದಲ್ಲಿ ಉತ್ತಮ ನಾಗರೀಕರಾಗಿ ಎಂದು ಸಲಹೆ ನೀಡಿದರು.

ಶಿಕ್ಷಕ ಯೋಗೇಶ್ ಪಾಸಿಂಗ್ ಪ್ಯಾಕೇಜ್ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ನಿರ್ದೇಶಕರುಗಳಾದ ಎಂ.ಗಿರೀಶ್, ಸುಮ ಅನಂತ್, ಪಿ.ಎಲ್.ರಮೇಶ್‌ಬಾಬು, ಹೆಚ್.ಕೆ.ವಿಶ್ವನಾಥ್, ಆಡಳಿತಾಧಿಕಾರಿ ಪ್ರವೀಣ್, ಡಿ.ಡಿ.ಪಿ.ಐ.ಕಚೇರಿಯ ನಾಗರಾಜ್ ವೇದಿಕೆಯಲ್ಲಿದ್ದರು.

ವಿದ್ಯಾರ್ಥಿನಿ ಸುಷ್ಮ ಪ್ರಾರ್ಥಿಸಿದರು. ಶಿಕ್ಷಕಿ ಲೀಲಾವತಿ ಸ್ವಾಗತಿಸಿದರು. ಶಿಲ್ಪಪ್ರಸಾದ್ ವಂದಿಸಿದರು. ಶಾರದಜೋಶಿ, ಪ್ರತಿಭಾ ಇವರುಗಳು ನಿರೂಪಿಸಿದರು.

Share This Article
Leave a Comment

Leave a Reply

Your email address will not be published. Required fields are marked *