ಬೆಳಗಾವಿ: ಕೊರೊನಾ ಸಮಸ್ಯೆಯ ಬಳಿಕ ಹಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ ಗಳ ಕೊರತೆ ಉಂಟಾಗಿದೆ. ಈ ವಿಚಾರವನ್ನು ಇಂದು ಸದನದಲ್ಲೂ ಪ್ರಸ್ತಾಪ ಮಾಡಲಾಗಿದೆ. ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಸಿದ್ದು ಸವದಿ ವಿಚಾರ ಎತ್ತಿದ್ದು, ನಮ್ಮ ಕ್ಷೇತ್ರದಲ್ಲಿ ಕಾಲೇಜು ಮಕ್ಕಳಿಗೆ ಬಸ್ ಗಳ ವ್ಯವಸ್ಥೆ ಸರಿಯಾಗಿಲ್ಲ. ಮಕ್ಕಳು ಶಾಲೆಗೆ ಹೋಗುವುದಕ್ಕೆ ಬಸ್ ಗಳನ್ನು ಕೊಡಿ. ದೊಡ್ಡ ಬಸ್ ಕೊಡದೆ ಇದ್ದರು ಪರವಾಗಿಲ್ಲ, ಮಿನಿ ಬಸ್ ಆದರೂ ನೀಡಿ ಎಂದಿದ್ದರು. ಇದಕ್ಕೆ ಉತ್ತರಿಸಿದ ಸಾರಿಗೆ ಸಚಿವ ಶ್ರೀರಾಮುಲು, ಸಮಸ್ಯೆ ಯಾವ ಭಾಗದಲ್ಲಿ ಇದೆ ಹೇಳಿ ಬಗೆಹರಿಸೋಣಾ ಎಂದರು.
ಸಿದ್ದು ಸವದಿ ಕೂಡ ಈ ಮಾತಿಗೆ ತೃಪ್ತರಾಗಲಿಲ್ಲ. ಜೊತೆಗೆ ಮಾಜಿ ಸಚಿವ ಆರ್ ವಿ ದೇಶಪಾಂಡೆ ಕೂಡ ಬೆಂಬಲ ಸೂಚಿಸಿದರು. ಕನಿಷ್ಠ ಮೂಲ ಸೌಕರ್ಯದ ಅಡಿಯಲ್ಲಿ ಬಸ್ ಸೌಲಭ್ಯ ಕೊಡದೆ ಇದ್ರೆ ಹೇಗೆ ರಾಮುಲು ಅವರೇ..? ಸದನಕ್ಕೆ ತಪ್ಪು ಮಾಹಿತಿ ನೀಡವೇಡಿ ಎಂದರು. ಬಳಿಕ ಕಾಂಗ್ರೆಸ್ ನಾಯಕರು ಸದನದ ಬಾವಿಗಿಳಿದು ಹೋರಾಟ ಮಾಡಿದರು. ಇದೇ ವೇಳೆ ಶಾಸಕ ಕುಣಿಗಲ್ ರಂಗನಾಥ್ ಹಾಗೂ ಗೋವಿಂದ ಕಾರಜೋಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ರಂಗನಾಥ್ ಅವರಿಗೆ ಗೆಟ್ ಲಾಸ್ಟ್ ಎಂದು ಬೈದರು. ಬಳಿಕ ರಂಗನಾಥ್, ಅದನ್ನು ಹೇಳುವುದಕ್ಕೆ ನೀನ್ಯಾರು..? ನನ್ನ ಹಕ್ಕನ್ನು ಕಿತ್ತುಕೊಳ್ಳುವುದಕ್ಕೆ ನೀನ್ಯಾರು ಎಂದು ಹರಿಹಾಯ್ದ ಘಟನೆ ನಡೆದಿದೆ.