ಚಿತ್ರದುರ್ಗ, (ಮೇ.02): ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಕರ್ನಾಟಕ-ಆಂದ್ರಪ್ರದೇಶ ಗಡಿಭಾಗದ ಕಣಕುಪ್ಪೆ ಚೆಕ್‌ಪೋಸ್ಟ್ ಬಳಿ ಅನುಮಾನಾಸ್ಪದವಾಗಿ ಸಾಗಣೆ ಮಾಡುತ್ತಿದ್ದ ಸುಮಾರು ರೂ.6.39 ಕೋಟಿ ಮೌಲ್ಯದ ಚಿನ್ನ, ವಜ್ರ ಮುಂತಾದ ಬೆಲೆಬಾಳುವ ಆಭರಣಗಳನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ತಿಳಿಸಿದ್ದಾರೆ.
ವಾಹನವು ಬಳ್ಳಾರಿಯಿಂದ ಬೆಂಗಳೂರು ಕಡೆಗೆ ಸಾಗುತ್ತಿತ್ತು ಎಂದು ತಿಳಿದುಬಂದಿದೆ. ಪ್ರತಿಷ್ಠಿತ ಜ್ಯುವೆಲರಿಗಳಿಗೆ ಚಿನ್ನಾಭರಣಗಳನ್ನು ಸಾಗಣೆ ಮಾಡಲಾಗುತ್ತಿತ್ತು, ಎಂದು ಸಾಗಣೆದಾರರು ಹೇಳಿರುತ್ತಾರೆ. ಅದಕ್ಕೆ ಪೂರಕ ದಾಖಲೆಗಳನ್ನು ಹಾಜರಿಪಡಿಸಿರುವುದಿಲ್ಲ. ಹೆಚ್ಚಿನ ಪರಿಶೀಲನೆಗಾಗಿ ವಶಕ್ಕೆ ಪಡೆಯಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವಿಧಾನಸಭೆ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಚೆಕ್‌ಪೋಸ್ಟ್‌ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ. ಚುನಾವಣಾ ಅಕ್ರಮಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ದಾಖಲೆ ಇಲ್ಲದೆ ಹಣ, ವಸ್ತು ಮುಂತಾದ ಸಾಮಗ್ರಿಗಳನ್ನು ಸಾಗಿಸುತ್ತಿದ್ದರೆ ವಶಕ್ಕೆ ಪಡೆದು ಪರಿಶೀಲನೆ ಮಾಡಲಾಗುವುದು. ಈ ವಸ್ತುಗಳು ಚುನಾವಣೆ ಅಕ್ರಮಕ್ಕೆ ಬಳಕೆಯಾಗುತ್ತದೆ ಎಂದು ಕಂಡುಬಂದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು.ಜಿ.ಆರ್.ಜೆ ತಿಳಿಸಿದ್ದಾರೆ.