ಮೈಸೂರು: ಬೆಳೆ ಜಮೀನಿಗೆ ಆನೆ ಬಂತು ಅಂತ ಗುಂಡೇಟು ಹೊಡೆದಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಗುಂಡೇಟು ತಿಂದು ಚಿಕಿತ್ಸೆ ಪಡೆಯುತ್ತಿರುವ ಆನೆ ದಸರಾದಲ್ಲಿ ಭಾಗಿಯಾಗುವ ಬಲರಾಮನಾಗಿದ್ದಾನೆ. ಸದ್ಯ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಪಶುವೈದ್ಯಾಧಿಕಾರಿಯಾಗಿರುವ ಡಾ.ರಮೇಶ್ ಅವರು ಬಲರಾಮನಿಗೆ ಚಿಕಿತ್ಸೆ ನೀಡುತ್ತಿದ್ದಾರೆ.
ಬಲರಾಮನಿಗೆ ಗುಂಡೇಟು ನೀಡಿದ್ದಂತ ಸುರೇಶ್ ನನ್ನು ಪೊಲೀಸರು ಬಂಧಿಸಿದ್ದಾರೆ. ವನ್ಯಜೀವಿ ಕಾಯ್ದೆ ಉಲ್ಲಂಘನೆ ಆರೋಪದಡಿ ಸುರೇಶ್ ನನ್ನು ಬಂಧಿಸಲಾಗಿದೆ. ಮಾಲೀಕನಿಂದ ಬಂದೂಕು ಹಾಗೂ ಕಾಟ್ರೀಜ್ ಅನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಜೊತೆಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಮೀನುಗಳಿಗೆ ಕಾಡಾನೆಗಳೆಲ್ಲಾ ದಾಳಿ ಮಾಡುತ್ತಾ ಇರುತ್ತವೆ. ಬಲರಾಮನನ್ನು ಕೂಡ ಕಾಡಾನೆ ಎಂದುಕೊಂಡು ಸುರೇಶ್ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಪಿರಿಯಾಪಟ್ಟಣದ ಭೀಮನಕಟ್ಟೆ ಸಾಕಾನೆ ಶಿಬಿರಕ್ಕೆ ಸಮೀಪವಿರುವಂತ ಜಮೀನಿಗೆ ಬಲರಾಮ ನುಗ್ಗಿದ್ದ. ಈ ವೇಳೆ ಆನೆಯನ್ನು ಕಂಡ ಮಾಲೀಕರು ಅದಕ್ಕೆ ಗುಂಡು ಹಾರಿಸಿದ್ದಾರೆ. ಈ ಗುಂಡು ಬಲರಾಮನ ತೊಡೆ ಭಾಗಕ್ಕೆ ಬಿದ್ದಿದೆ. ಸದ್ಯ ಚಿಕಿತ್ಸೆ ನೀಡಿದ್ದು, ಬಲರಾಮ ಚೇತರಿಸಿಕೊಂಡಿದ್ದಾನೆ.