ಮಧ್ಯಮವರ್ಗ, ಕೃಷಿ, ನವೋದ್ಯಮ ಹಾಗೂ ಯುವಕರಿಗೆ ಪೂರಕ ಬಜೆಟ್ : ಶಶಿಧರ್ ರಾವ್ ವಿಶ್ಲೇಷಣೆ

ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ. 01 : ಕೇಂದ್ರ ಸರ್ಕಾರದಿಂದ ಹಲವು ವರ್ಷಗಳಿಂದ ಆದಾಯ ತೆರಿಗೆಯ ಆದಾಯಮಿತಿ ಹೆಚ್ಚಳದ ದೃಷ್ಟಿಯಿಂದ ಮಧ್ಯಮ ವರ್ಗಕ್ಕೆ ಹೇಳಿಕೊಳ್ಳುವಂತಹ ಯಾವುದೇ ವಿಶೇಷವೇನಿಲ್ಲದ ಬಜೆಟ್ ಗಳೇ ಮಂಡನೆಯಾಗುತ್ತಿದ್ದವು.

ಹೆಚ್ಚುತ್ತಿರುವ ಹಣದುಬ್ಬರ, ಜಾಗತಿಕ ಆರ್ಥಿಕ ಪರಿಸ್ಥಿತಿಗಳ ನಿರಂತರ ಏರಿಳಿತಗಳು ಮತ್ತು ಅದರ ನೇರ ಪರಿಣಾಮ ಜಗತ್ತಿನ ಬಹುತೇಕ ದೇಶಗಳ ಜೀವನಾಡಿಯಾಗಿರುವ ಮಧ್ಯಮವರ್ಗದವರ ಮೇಲೆ ಬೀಳುತ್ತಿರುವಂತೆ ಭಾರತದ ಮಧ್ಯಮವರ್ಗದವರ ಮೇಲೆಯೂ ಬಾಧಿಸುತ್ತಿತ್ತು. ಕೇಂದ್ರ ಸರ್ಕಾರದ ಪ್ರತಿ ಬಾರಿಯ ಬಜೆಟ್ ನಲ್ಲಿಯೂ ಅದಕ್ಕೆ ಸಂಬಂಧಿಸಿದ ಉಪಶಮನದ ನಿರೀಕ್ಷೆಯಿರುತ್ತಿತ್ತು.
ಕಡೆಗೂ ಈ ಬಾರಿ ಆದಾಯ ತೆರಿಗೆಯ ನವೀನ ರಿಜಿಮ್ ನಲ್ಲಿ ವಾರ್ಷಿಕ ಆದಾಯ ರೂಪಾಯಿ 12,00,000/- ದ ವರೆಗೂ ಆದಾಯ ತೆರಿಗೆಯಿಂದ ವಿನಾಯಿತಿ ಘೋಷಣೆ ಮಧ್ಯಮವರ್ಗಕ್ಕಷ್ಟೇ ಅಲ್ಲ, ಮಧ್ಯಮವರ್ಗದ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹೆಚ್ಚು ಹಣದ ಹರಿವು ಮಾರುಕಟ್ಟೆಯಲ್ಲಿ ಉಂಟಾಗಲು ಕಾರಣವಾಗುವುದರ ಮೂಲಕ ದೇಶದ ಅರ್ಥವ್ಯವಸ್ಥೆಗೇ ಬೂಸ್ಟ್ ನೀಡಲಿದೆ.

ಹತ್ತಿರ ಹತ್ತಿರ 95,000/- ರೂಪಾಯಿಯ ವಾರ್ಷಿಕ ಉಳಿತಾಯವು ಹೊಸ ತೆರಿಗೆ ರಿಜಿಮ್ ಅನ್ವಯ 12,00,000/- ರೂಪಾಯಿ ವಾರ್ಷಿಕ ಆದಾಯವಿರುವ ಮಧ್ಯಮ ವರ್ಗದವರಿಗೆ ಸಾಧ್ಯವಾಗಲಿದ್ದು, ವಾರ್ಷಿಕ 20,00,000/- ಆದಾಯವಿರುವವರು ಹೊಸ ಟ್ಯಾಕ್ಸ್ ರಿಜಿಮ್ ಗೆ ಹೊರಳಿದರೆ ವಾರ್ಷಿಕ 2,00,000/- ರೂಪಾಯಿಯವರೆಗೂ ಉಳಿಸಬಹುದು. ಅಂದರೆ ತೆರಿಗೆ ಉಳಿಸಲಿಕ್ಕಾಗಿಯೇ ಉಳಿತಾಯ ಯೋಜನೆ, ವಿಮಾ ಯೋಜನೆಗಳ ಮೊರೆ ಹೋಗುವವರು ಇನ್ನು ಮುಂದೆ ಅಂತಹ ಸರ್ಕಸ್ ಮಾಡುವ ಅವಶ್ಯಕತೆ 12,00,000/- ವಾರ್ಷಿಕ ಆದಾಯದವರೆಗೂ ಬೀಳುವುದಿಲ್ಲ. ಆ ಹಣವನ್ನು ತೆರಿಗೆದಾರರು ಏನನ್ನಾದರೂ ಖರೀದಿಸಲೋ, ಮತ್ತಿನ್ನೆಲ್ಲೋ ಹೂಡಿಕೆ ಮಾಡಲೋ ಅಥವಾ ಸೇವಿಂಗ್ಸ್ ಮಾಡಲೋ ಬಳಸಬಹುದು.

ಆದರೆ, ತೆರಿಗೆ ವಿನಾಯಿತಿಗಾಗಿಯಾದರೂ ಉಳಿತಾಯ ಯೋಜನೆ, ವಿಮಾ ಯೋಜನೆಗಳ ಮೊರೆ ಹೋಗುತ್ತಿದ್ದ ಮಧ್ಯಮವರ್ಗವು ಅಂತಹ ಸದಭ್ಯಾಸಗಳಿಂದ ವಿಮುಖರಾಗದಿರುವ ಎಚ್ಚರಿಕೆಯನ್ನೂ ವಹಿಸಬೇಕಿದೆ. ಒಟ್ಟಿನಲ್ಲಿ ಅನೇಕ ವರ್ಷಗಳ ನಂತರ ಆದಾಯ ತೆರಿಗೆ ವಿಷಯದಲ್ಲಿ ನಿಜಕ್ಕೂ ಮಧ್ಯಮ ವರ್ಗದವರಿಗೆ ನೇರವಾಗಿ ಭಾರ ಇಳಿಸಿರುವ ಬಜೆಟ್ ಇದಾಗಿದೆ.

ಇನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಅಡಿಯ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿರುವುದು ರೈತರಿಗೆ ಅನುಕೂಲವಾಗಲಿದೆ. ಧನ ಧಾನ್ಯ ಕೃಷಿ ಯೋಜನೆಯೂ ಕೃಷಿ ವಲಯಕ್ಕೆ ಬೂಸ್ಟ್ ನೀಡಲಿದೆ. ಹೊಸ ಬಜೆಟ್ ಘೋಷಣೆ ಅನ್ವಯ ಟಿವಿ, ಮೊಬೈಲ್, ಎಲೆಕ್ಟ್ರಿಕಲ್ ಕಾರುಗಳು, ಭಾರತದಲ್ಲಿ ತಯಾರಿಸಿದ ಜವಳಿ ಬಟ್ಟೆಗಳು, ಚರ್ಮದ ವಸ್ತುಗಳ ಬೆಲೆ ಕಡಿಮೆಯಾಗಲಿದೆ. 36 ಜೀವರಕ್ಷಕ ಔಷಧಗಳು ಅದರಲ್ಲೂ ವಿಶೇಷವಾಗಿ ಕ್ಯಾನ್ಸರ್ ಔಷಧಗಳ ಬೆಲೆ ಕಡಿಮೆಯಾಗಲಿದೆ. ಜನಸಾಮಾನ್ಯರಿಗೂ ವಿಮಾನಪ್ರಯಾಣ ಸಹಜವಾಗಿಸಲು ಉಡಾನ್ ಯೋಜನೆಯಡಿಯಲ್ಲಿ 120 ಹೊಸ ವಿಮಾನ ನಿಲ್ದಾಣಗಳ ಪ್ರಾರಂಭದ ಘೋಷಣೆಯು 4 ಕೋಟಿ ಜನರನ್ನು ಹೊಸದಾಗಿ ವಾಯುಮಾರ್ಗ ಸಂಚಾರಿದೆಡೆಗೆ ಸೆಳೆಯಲು ರೂಪಿಸಲಾಗಿದೆ.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಹಾಗೂ ವಿಶೇಷ ಕ್ಯಾನ್ಸರ್ ಕೇರ್ ಸೆಂಟರ್ ಸ್ಥಾಪನೆ ಮತ್ತು ರಾಷ್ಟ್ರದಾದ್ಯಂತ ಮೆಡಿಕಲ್ ಸೀಟ್ ಗಳ ಹೆಚ್ಚಳದ ಮೂಲಕ ಹೆಚ್ಚು ವೈದ್ಯರು ಮುಂದಿನ ವರ್ಷಗಳಲ್ಲಿ ಜನಸೇವೆಗೆ ಲಭ್ಯರಿರಲು ಯೋಜನೆಗಳು ಭವಿಷ್ಯದಲ್ಲಿ ಜಗತ್ತಿನಲ್ಲಿ ಉಂಟಾಗಬಹುದಾದ ಅರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಭಾರತ ಸಿದ್ಧವಾಗಲು ಸಹಕಾರಿ.
ಎಸ್. ಸಿ. ಎಸ್. ಟಿ. ವರ್ಗಗಳ ಮಹಿಳೆಯರಿಗೆ ಲಾಭದಾಯಕವಾಗುವಂತೆ ಟರ್ಮ್ ಲೋನ್ ಗಳ ಯೋಜನೆ, ಉತ್ಪಾದನಾ ಕ್ಷೇತ್ರಕ್ಕೆ ಒತ್ತು, ಎಲ್ಲಾ ಸರ್ಕಾರಿ ಶಾಲೆಗಳಿಗೆ ಬ್ರಾಡ್ ಬ್ಯಾಂಡ್, ಸ್ಟಾರ್ಟ್ ಅಪ್ ನವೋದ್ಯಮಗಳಿಗೆ, ಎಂ. ಎಸ್. ಎಂ. ಈ. ಗಳಿಗೆ ಆರ್ಥಿಕ ಉತ್ತೇಜನ ಇತ್ಯಾದಿಗಳು ಉತ್ತಮ ಯೋಜನೆಗಳಾಗಿವೆ.

ಅಂಚೆ ಇಲಾಖೆಯು ಇನ್ನು ಮುಂದೆ ಪಬ್ಲಿಕ್ ಸೆಕ್ಟರ್ ಲಾಜಿಸ್ಟಿಕ್ಸ್ ಸಂಸ್ಥೆಯಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುವ ಯೋಜನೆಯು ಭಾರತ ಸರ್ಕಾರದ ಅತ್ಯಂತ ಹಳೆಯ ಸಂಸ್ಥೆಗಳಲ್ಲಿ ಒಂದಾದ ಇಂಡಿಯಾ ಪೋಸ್ಟ್ ಗೆ ಒಂದು ನವರೂಪವಾಗಲಿದೆ ಜೊತೆಗೇ ಗ್ರಾಮೀಣ ಆರ್ಥಿಕತೆಗೆ ಇಂಬು ನೀಡಲಿದೆ. ಶಿಕ್ಷಣ ಸಂಸ್ಥೆಗಳ ಮೂಲಭೂತ ಸೌಕರ್ಯಗಳ ಹೆಚ್ಚಳದ ಘೋಷಣೆಯು ಉತ್ತಮವಾದ, ಅನಿವಾರ್ಯ ಯೋಜನೆ.

ಆದಾಗಿಯೂ ಚಿನ್ನ ಬೆಳ್ಳಿಯ ದರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಬಜೆಟ್ ನಲ್ಲಿ ಸೂಕ್ತ ಕ್ರಮಗಳು ಸಾಧ್ಯವಾಗಿಲ್ಲದಿರುವುದು ಸರ್ಕಾರ ಗಮನದಲ್ಲಿರಿಸಿಕೊಳ್ಳುವುದು ಆಭರಣಗಳ ಮೇಲೆ ವಿಶೇಷ ವ್ಯಾಮೋಹ ಇರಿಸಿಕೊಂಡಿರುವ ಭಾರತದಂತಹ ದೇಶದಲ್ಲಿ ಅನಿವಾರ್ಯ. ರೋಲರ್ ಕೋಸ್ಟರ್ ರೈಡ್, ಅಂದರೆ ಸತತ ಏರಿಳಿತಗಳನ್ನು ಕಾಣುತ್ತಿರುವ ಜಾಗತಿಕ ಮಾರುಕಟ್ಟೆ, ಜಾಗತಿಕ ಹಣದುಬ್ಬರ ಅನಿಶ್ಚಿತತೆ ಮತ್ತು ಇನ್ನಿತರ ಬೃಹತ್ ಆರ್ಥಿಕತೆಗಳಂತೆ ಭಾರತದ ಮಾರುಕಟ್ಟೆಯ ಮೇಲೆ ಅವುಗಳ ಪ್ರಭಾವದ ಮೇಲೆ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಚಿಂತನೆ ಅನಿವಾರ್ಯ. ಇಷ್ಟೆಲ್ಲಾ ಜನಪೂರಕ ಯೋಜನೆಗಳ ನಂತರವೂ ಮಾರುಕಟ್ಟೆ ಚೇತರಿಕೆ ಕಾಣದಿರುವುದು ಮಾರುಕಟ್ಟೆಯ ಸ್ಥಿರತೆಯ ಕುರಿತಾಗಿಯೂ ಸರ್ಕಾರ ಹೆಚ್ಚಿನ ಗಮನ ಹರಿಸುವುದರ ಅನಿವಾರ್ಯತೆಯನ್ನು ಸೂಚಿಸುತ್ತದೆ. ಒ‌ಟ್ಟಿನಲ್ಲಿ ಜನರಿಗೆ ಪ್ರಿಯವಾಗುವ ಅನೇಕ ಅಂಶಗಳೊಂದಿಗೆ ಭಾರತ ಸರ್ಕಾರದ ಇಂದಿನ ಬಜೆಟ್ ಭರವಸೆಯನ್ನು ಮೂಡಿಸಿದೆ.

ವಿಶೇಷ ಲೇಖನ : ಶಶಿಧರ್ ರಾವ್,
ತಂತ್ರಜ್ಞಾನ, ಆರ್ಟಿಫಿಷಿಯಲ್ ಇಂಟಲಿಜೆನ್ಸ್, ನವೋದ್ಯಮ, ಸೈಬರ್ ಸುರಕ್ಷತೆ ಹಾಗೂ ಉನ್ನತ ಶಿಕ್ಷಣ ತಜ್ಞರು ಹಾಗೂ ಸಲಹೆಗಾರರು, ಬೆಂಗಳೂರು. ಮೊ : 91083 20131

suddionenews

Recent Posts

ಕಂದಾಚಾರ, ಮೂಢನಂಬಿಕೆಗಳ ನಿರ್ಮೂಲನೆಗೆ ಶ್ರಮಿಸಿದವರು ಮಡಿವಾಳ ಮಾಚಿದೇವ : ಎಡಿಸಿ ಬಿ.ಟಿ.ಕುಮಾರಸ್ವಾಮಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago

ಕರ್ನಾಟಕ ವಿರೋಧಿ ಬಜೆಟ್ : ಡಾ.ಸಂಜೀವಕುಮಾರ ಪೋತೆ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago

ಕರ್ನಾಟಕದ ಪಾಲಿಗೆ ಘನಘೋರ ಅನ್ಯಾಯ, ಇದೊಂದು ಋಣ ತೀರಿಸುವ ಬಜೆಟ್ : ಜೆ.ಯಾದವರೆಡ್ಡಿ

  ವರದಿ ಮತ್ತು ಫೋಟೋ ಕೃಪೆ ಕೆ.ಎಂ. ಮುತ್ತುಸ್ವಾಮಿ ಕಣ್ಣನ್, ಮೊ : 78998 64552 ಸುದ್ದಿಒನ್, ಚಿತ್ರದುರ್ಗ, ಫೆಬ್ರವರಿ.…

1 hour ago

ಮುಖ್ಯಮಂತ್ರಿಗಳ ಸಲಹೆಗಾರ ಹುದ್ದೆಗೆ ಬಿ.ಆರ್.ಪಾಟೀಲ್ ರಾಜೀನಾಮೆ..!

    ಬೆಂಗಳೂರು: ಮುಖ್ಯಮಂತ್ರಿಗಳ ಸಲಹೆಗಾರರಾಗಿದ್ದ ಶಾಸಕ ಬಿ.ಆರ್. ಪಾಟೀಲ್ ಅವರು ಇಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಕಲಬುರಗಿ…

2 hours ago

ಚಿತ್ರದುರ್ಗ ಟೌನ್ ಕೋ-ಆಪರೇಟಿವ್ ಸೊಸೈಟಿಗೆ ಸತತವಾಗಿ 5 ನೇ ಬಾರಿಗೆ ನಿರ್ದೇಶಕರಾಗಿ ನಿಶಾನಿ ಜಯಣ್ಣ ಆಯ್ಕೆ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಸುದ್ದಿಒನ್, ಚಿತ್ರದುರ್ಗ ಫೆ. 01: ಚಿತ್ರದುರ್ಗ…

2 hours ago

ಸಬ್ಕಾ ವಿಕಾಸ್ ಅನ್ನು ಸಾಕಾರಗೊಳಿಸುವ ದೂರದೃಷ್ಟಿ ಬಜೆಟ್ : ಸಂಸದ ಗೋವಿಂದ ಎಂ ಕಾರಜೋಳ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817 ಚಿತ್ರದುರ್ಗ ಫೆ. 01 : ಇಂದು…

2 hours ago