ಗಡಿ ಗ್ರಾಮಗಳಿಗೆ ಜಿಲ್ಲಾಮಟ್ಟದ ಅಧಿಕಾರಿಗಳ ವಾಸ್ತವ್ಯ ಕಡ್ಡಾಯ : ಡಾ.ಸಿ.ಸೋಮಶೇಖರ ಸೂಚನೆ

3 Min Read

ಮಾಹಿತಿ ಮತ್ತು ಫೋಟೋ ಕೃಪೆ : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಚಿತ್ರದುರ್ಗ

ಚಿತ್ರದುರ್ಗ, (ಜನವರಿ.07) : ಜಿಲ್ಲೆಯ ಗಡಿ ಭಾಗದ ಗ್ರಾಮಗಳಿಗೆ ತಿಂಗಳಿಗೊಮ್ಮೆ ಜಿಲ್ಲಾಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭೇಟಿ ನೀಡಬೇಕು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಜಿಲ್ಲೆಯ ಗಡಿ ಪ್ರಾಧಿಕಾರದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ತಿಂಗಳಿಗೊಮ್ಮೆ ಕಡ್ಡಾಯವಾಗಿ ಗಡಿ ಗ್ರಾಮಕ್ಕೆ ಭೇಟಿ ನೀಡಿ, ಗಡಿ ಭಾಗದ ಗ್ರಾಮದ ಜನರ ಸಮಸ್ಯೆ ಆಲಿಸಬೇಕು ಎಂದು ತಾಕೀತು ಮಾಡಿದರು.

ಗಡಿ ಶಾಲೆಗಳ ಸ್ಥಿತಿಗತಿ-ಸಮೀಕ್ಷೆಗೆ ಸೂಚನೆ: ಗಡಿ ಭಾಗದ ಶಾಲೆಗಳ ಸ್ಥಿತಿಗತಿ ಬಹಳ  ಮುಖ್ಯ. ಹಾಗಾಗಿ ಗಡಿಭಾದ ಶಾಲೆಗಳ ಪಟ್ಟಿ ಮಾಡಿ, ಸರ್ಕಾರಿ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜುಗಳ ಸ್ಥಿತಿಗತಿ ಕುರಿತು ಶಿಕ್ಷಣ ಇಲಾಖೆ ವತಿಯಿಂದ ಸಮೀಕ್ಷೆ ಕೈಗೊಂಡು ಒಂದು ತಿಂಗಳೊಳಗೆ ಪಟ್ಟಿ ಕಳುಹಿಸಿಕೊಡಬೇಕು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಸಿ.ಸೋಮಶೇಖರ್ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಗಡಿಭಾಗದಲ್ಲಿನ ಶಾಲೆಗಳಲ್ಲಿ ವಿಶೇಷವಾಗಿ ಕನ್ನಡ ಮಾಧ್ಯಮ ಶಾಲೆಗಳು ನಶಿಸಿ ಹೋಗುತ್ತಿವೆಯೇ, ಶಾಲೆಗಳಿಗೆ ಮೂಲಭೂತ ಸೌಲಭ್ಯಗಳು ದೊರಕಿವೆಯೇ? ಪೀಠೋಪಕರಣ, ಪಾಠೋಪಕರಣಗಳಿವೇ? ಎಂಬ ವಿಷಯಗಳ ಕುರಿತು ಶೈಕ್ಷಣಿಕ, ಸಾಂಸ್ಕøತಿಕ ವಿಷಯಗಳ ಬಗ್ಗೆ ಅಧ್ಯಯನ ಮಾಡಬೇಕು ಎಂದು ತಿಳಿಸಿದ ಅವರು, ಗಡಿ ಭಾಗದ ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರು, ಗುಣಮಟ್ಟದ ಕಟ್ಟಡ, ಆಟದ ಮೈದಾನ, ಗ್ರಂಥಾಲಯ ಸೌಲಭ್ಯ ಸೇರಿದಂತೆ ಅಗತ್ಯ ಮೂಲ ಸೌಕರ್ಯಕಗಳ ಕಲ್ಪಿಸಲು ಕ್ರಮವಹಿಸಬೇಕು ಎಂದು ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಗಡಿಭಾಗದ ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕಿನ ಹಲವು ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಈ ಹಿನ್ನಲೆಯಲ್ಲಿ ಗಡಿ ಭಾಗದ ಶಾಲೆಗಳ ಸ್ಥಿತಿಗತಿ ಕುರಿತು ಸಮೀಕ್ಷೆ ನಡೆಸಿ, ಕ್ರಿಯಾಯೋಜನೆ ಸಲ್ಲಿಸಲಾಗುವುದು ಎಂದು ಹೇಳಿದರು.

ಗಡಿಭಾಗದ ಹಳ್ಳಿಗಳಲ್ಲಿ ಹಳ್ಳಿಗಳ ಹೆಸರು ಬದಲಾವಣೆ ಮಾಡುವ ಪರಿಸ್ಥಿತಿ ಕೆಲವು ಕಡೆ ನಡೆಯುತ್ತಿದೆ. ಈ ರೀತಿ ಆಗದಂತೆ ಹಳ್ಳಿಗಳ ಹೆಸರುಗಳನ್ನು ಪಕ್ಕದ ರಾಜ್ಯದ ಹೆಸರುಗಳಾಗಿ ಪರಿವರ್ತನೆ ಮಾಡುತ್ತಿರುವುದರ ಬಗ್ಗೆಯೂ ಎಚ್ಚರ ವಹಿಸಿ, ಗ್ರಾಮ ಪಂಚಾಯಿತಿ ಮೂಲಕ ಗಮನಹರಿಸುವಂತೆ ಗಡಿ ಪ್ರಾಧಿಕಾರ ಅಧ್ಯಕ್ಷರು ಸೂಚನೆ ನೀಡಿದರು.

ಅನಾಥ ಪ್ರಜ್ಞೆ ದೂರಮಾಡಿ: ಗಡಿ ಪ್ರಾಧಿಕಾರ 2010ರಲ್ಲಿ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯದ 63 ತಾಲ್ಲೂಕುಗಳು, 19 ಜಿಲ್ಲೆಗಳು, ಆರು ರಾಜ್ಯಗಳಿಗೆ ಹೊಂದಿಕೊಂಡಿರುವ ಸುಮಾರು 950 ಹಳ್ಳಿಗಳು ಗಡಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿವೆ. ಗಡಿ ಭಾಗದಲ್ಲಿ ಕನ್ನಡ ಅಸ್ಮಿತೆ, ಕನ್ನಡ ಜಾಗೃತಿ, ಕನ್ನಡ ಪ್ರಜ್ಞೆ ಉಂಟು ಮಾಡಬೇಕು ಎಂದರು.

ಗಡಿಭಾಗದ ಜನರಲ್ಲಿ ಅನಾಥ ಪ್ರಜ್ಞೆ ಉಂಟು ಮಾಡಬಾರದು. ರಾಜ್ಯ ಸರ್ಕಾರ ಅವರನ್ನು ನಿರ್ಲಕ್ಷೆ ಮಾಡುತ್ತಿದೆ ಎಂಬ ಭಾವನೆ ಗಡಿ ಭಾಗದ ಜನರಲ್ಲಿ ಬರಬಾರದು ಎಂಬ ದೃಷ್ಠಿಯಿಂದ ಗಡಿ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು,  ಶೈಕ್ಷಣಕ, ಸಾಮಾಜಿಕ ಕಾರ್ಯಕ್ರಮಗಳಿಗೆ, ಯೋಜನೆಗಳಿಗೆ ತನ್ನ ಆರ್ಥಿಕ ಇತಿಮಿತಿಯೊಳಗೆ ಅನುದಾನ ನೀಡುತ್ತಿದೆ ಎಂದರು.

ಗಡಿಭಾಗದ ಹಳ್ಳಿಗಳ ಆರ್ಥಿಕ, ಸಾಮಾಜಿಕ ಅಧ್ಯಯನ ಮಾಡಿ: ಜಿಲ್ಲೆಯ ಚಳ್ಳಕೆರೆ, ಮೊಳಕಾಲ್ಮುರು ಹಾಗೂ ಹಿರಿಯೂರು ತಾಲ್ಲೂಕುಗಳು ಗಡಿಭಾಗದ ತಾಲ್ಲೂಕುಗಳಾಗಿದ್ದು, ಚಳ್ಳಕೆರೆಯ ತಾಲ್ಲೂಕಿನಲ್ಲಿ 22 ಹಳ್ಳಿಗಳು ಆಂದ್ರಪ್ರದೇಶಕ್ಕೆ ಹೊಂದಿಕೊಂಡಿವೆ. ಹಿರಿಯೂರು ತಾಲ್ಲೂಕಿನಲ್ಲಿ ಎರಡು ಹಳ್ಳಿಗಳು ಹಾಗೂ ಮೊಳಕಾಲ್ಮುರು ತಾಲ್ಲೂಕಿನಲ್ಲಿ 12 ಹಳ್ಳಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 36 ಹಳ್ಳಿಗಳು ಗಡಿಭಾಗದಲ್ಲಿವೆ.

ಗಡಿಭಾಗದಲ್ಲಿ ಭಾಷಾ ಸಾಮರಸ್ಯದ ಜೊತೆಗೆ ನಮ್ಮ ಭಾಷೆಯ ಕನ್ನಡಿಗರು ಇನ್ನೊಂದು ಭಾಷೆಯ ಕಡೆಗೆ ಹೋಗದಂತೆ ಕ್ರಮವಹಿಸಬೇಕು. ಜಿಲ್ಲೆಯ ಗಡಿಭಾಗದ 36 ಹಳ್ಳಿಗಳ ಸಮಗ್ರ ಆರ್ಥಿಕ, ಸಾಮಾಜಿಕ ಅಧ್ಯಯನ ಕೈಗೊಂಡು, ವರದಿ ನೀಡಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ ಮಾತನಾಡಿ, ಗಡಿ ಪ್ರದೇಶ ಅಭಿವೃದ್ಧಿಗಾಗಿ ಜಿಲ್ಲೆಗೆ 2011-12 ರಿಂದ ಇಲ್ಲಿವರೆಗೂ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದಿಂದ ಅನುದಾನ ಬಂದಿದೆ. ಇಲ್ಲಿಯವರೆಗೆ 265 ಕಾಮಗಾರಿಗಳು ಅನುಮೋದನೆಯಾಗಿದ್ದು, ಈಗಾಗಲೇ 206 ಕಾಮಗಾರಿಗಳು ಪೂರ್ಣಗೊಂಡಿವೆ. ಸ್ಥಳದ ಕೊರತೆ, ಕೋರ್ಟ್ ಪ್ರಕರಣಗಳಿಂದಾಗಿ 46 ಕಾಮಗಾರಿಗಳು ಬಾಕಿ ಇವೆ. ಅನುಷ್ಠಾನ ಏಜೆನ್ಸಿಗಳು ಹಾಗೂ ಇಲಾಖಾವಾರು ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ರೂ.16.08 ಕೋಟಿ ಅನುದಾನದಲ್ಲಿ ಈಗಾಗಲೇ ರೂ.13.13 ಕೋಟಿ ಖರ್ಚು ಮಾಡಲಾಗಿದೆ. ಗಡಿ ಪ್ರಾಧಿಕಾರದ ಯೋಜನೆಗಳನ್ನು ಜಿಲ್ಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಜಿ.ಆರ್.ಜೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ  ಅಧಿಕಾರಿ ಎಂ.ಎಸ್.ದಿವಾಕರ್, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *