ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಆಯುಧಪೂಜೆ ಮತ್ತು ಮಹಾನವಮಿ ಹಬ್ಬದ ಶುಭಾಶಯ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿಎಂ ಬೊಮ್ಮಾಯಿ, ನಾಡಿನ ಸಮಸ್ತ ಜನತೆಗೆ ಆಯುಧಪೂಜೆ ಹಾಗೂ ಮಹಾನವಮಿ ಹಬ್ಬದ ಹಾರ್ದಿಕ ಶುಭಾಶಯಗಳು. ನಾಡಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿ ಸರ್ವರಿಗೂ ಸುಖ- ಶಾಂತಿ, ಸಮೃದ್ಧಿ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಮಾಜಿ ಸಿಎಂ ಯಡಿಯೂರಪ್ಪ, ಜಗನ್ಮಾತೆಯ ಆರಾಧನೆಯ ಜೊತೆಗೆ, ನಮ್ಮನ್ನು ಸಲಹುವ, ನೆರವು ನೀಡುವ, ರಕ್ಷಿಸುವ ವಸ್ತುವಿಶೇಷಗಳಲ್ಲಿ ದೇವರನ್ನು ಪೂಜಿಸುವ ‘ಆಯುಧಪೂಜೆ’ಯ ಈ ದಿನವು ಎಲ್ಲರ ಬಾಳಿನಲ್ಲಿ ಮಂಗಳವನ್ನು ತರಲಿ ಎಂದು ಟ್ವೀಟ್ ಮಾಡಿದ್ದಾರೆ.
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ದುಷ್ಟರ ನಾಶ, ಸಜ್ಜನರ ರಕ್ಷಣೆಯ ಸಂದೇಶ ಸಾರುವ ಮಹಾನವಮಿ ಮತ್ತು ವೃತ್ತಿಗೌರವದ ಪ್ರತೀಕವಾಗಿರುವ ಆಯುಧಪೂಜೆಯನ್ನು ಅರ್ಥಪೂರ್ಣವಾಗಿ ನಮ್ಮ ಬದುಕಿನಲ್ಲಿ ಆಚರಿಸೋಣ. ನಾಡ ಬಾಂಧವರೆಲ್ಲರಿಗೆ ದಸರಾ ಹಬ್ಬದ ಶುಭ ಹಾರೈಕೆಗಳು ಎಂದು ಟ್ವೀಟ್ ಮಾಡಿದ್ದಾರೆ.
ಕುಮಾರಸ್ವಾಮಿ ಟ್ವೀಟ್ ಮಾಡಿದ್ದು, ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಒಳ್ಳೆಯದಾಗಲಿ ಎಂದು ತಾಯಿ ಚಾಮುಂಡೇಶ್ವರಿಯನ್ನು ಭಕ್ತಿಪೂರ್ವಕವಾಗಿ ಪ್ರಾರ್ಥನೆ ಮಾಡುತ್ತೇನೆ ಎಂದಿದ್ದಾರೆ.